ನನ್ನ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡೂ ಕೂಡ ವ್ಯಾಪಿಸಿಕೊಂಡಿರುವುದು ಕನ್ನಡದಲ್ಲಿ. ಇವತ್ತು ಕನ್ನಡದ ಅಕ್ಷರಗಳೇ ನನಗೆ ಅನ್ನ ಕೊಡುತ್ತಿರುವುದು. ಕನ್ನಡ ಅಂದರೆ ನನ್ನ ಭಾವುಕತೆ, ನನ್ನ ದೈವಿಕತೆ, ಕನ್ನಡದ ನನಗೆ ಮೇಲೆ ಭಕ್ತಿ, ಸೆಳೆತ ಸದಾ ಇರುತ್ತದೆ. ಬಹುಶಃ ಕನ್ನಡ ಭಾಷೆಯ ಓದು-ಬರಹ ನನಗೆ ಗೊತ್ತಿಲ್ಲದಿದ್ದರೆ, ನನ್ನ ಬದುಕೇ ನಡೆಯುತ್ತಿರಲಿಲ್ಲ. ಅನ್ನ, ಆಹಾರ, ಉಸಿರಾಟ ಎಲ್ಲವೂ ನನ್ನ ಮಟ್ಟಿಗೆ ಕನ್ನಡಮಯವಾಗಿದೆ. ನನಗೆ ಕನ್ನಡ ಅಂದ್ರೆ ಮೊದಲು ನೆನಪಾಗುವುದು ಭುವನೇಶ್ವರಿ. ನಾನು ರನ್ನ, ಪಂಪ, ರಾಘವಾಂಕರನ್ನು ನೋಡಿಲ್ಲ. ನಾನು ಚಿಕ್ಕವಯಸ್ಸಿನಲ್ಲಿ ಮೊದಲು ಕೇಳಿಸಿಕೊಂಡಿದ್ದು, ನೋಡಿದ್ದು ವಿಶ್ವೇಶ್ವರಯ್ಯ, ಕುವೆಂಪು, ರಾಜಕುಮಾರ್ ಅವರನ್ನ ಕನ್ನಡ ಅಂದ್ರೆ ನಾನು ಕಂಡ ಇಂಥ ಧೀಮಂತ ವ್ಯಕ್ತಿತ್ವಗಳು ಕಣ್ಮುಂದೆ ಬರುತ್ತಾರೆ. ನನ್ನ ಪ್ರಕಾರ ಕನ್ನಡ ಎಂಬುದು ಸ್ವಯಂ ಪ್ರಕಾಶ ಭಾಷೆ. ಇದಕ್ಕೆ ಬೇರೆ ಬೆಳಕಿನ ಅವಶ್ಯಕತೆ ಇಲ್ಲ. ಹಾಗಾಗಿಯೇ ಈ ಭಾಷೆ 2 ಸಾವಿರ ವರ್ಷ ದಾಟಿದರೂ ತನ್ನ ಅಸ್ಮಿತೆ ಮತ್ತು ಅಸ್ವಿತ್ವ ಉಳಿಸಿಕೊಂಡಿರುವುದು. ಈ ಭಾಷೆ ಈ ಮಣ್ಣಿನಲ್ಲಿ ಹುಟ್ಟಿದ ಸಾಧಾರಣಾ ಜನರನ್ನೂ ಅವರವರ ಕ್ಷೇತ್ರದಲ್ಲಿ ಮಹಾನುಭಾವರನ್ನಾಗಿ ಮಾಡಿದೆ. ನಿಜವಾದ ಮಹಾನುಭಾವರು ಕೂಡ ಈ ಭಾಷೆಯನ್ನು ತಮ್ಮ ಜೀವ ಅಂದುಕೊಂಡಿದ್ದಾರೆ. ಈ ಭಾಷೆಗೆ ಪಂಚ ಭೂತ ಗುಣವಿದೆ. ಆಕಾಶದ ಗುಣ ವಿಶಾಲತೆ, ಭೂಮಿಯ ಗುಣ ಸಹಿಷ್ಣುತೆ, ಅಗ್ನಿಯ ಗುಣ ಅಗ್ರತೆ, ಜಲ ತತ್ವದ ಗುಣ ಸಮಗ್ರತೆ, ವಾಯುತತ್ವದ ಗುಣ ಆಪ್ಯಾಯತೆ. ಇವಿಷ್ಟು ನಮ್ಮ ಭಾಷೆಗೆ ಇರುವುದರಿಂದ ಹೇಗೆ ಪಂಚ ಭೂತಗಳು ಅನಿವಾರ್ಯವೋ,ಕನ್ನಡ ಭಾಷೆ ಪ್ರಕೃತಿಗೆ ಅನಿವಾರ್ಯ ಎಂಬುದು ನನ್ನ ಭಾವನೆ.
ಕನ್ನಡ ಭಾಷೆ ಕೇವಲ ಕಲಿಕೆಯ ಮಾಧ್ಯಮವಲ್ಲ. ಇದಕ್ಕೆ ವೈದ್ಯಕೀಯ ಗುಣ, ವೈಜ್ಞಾನಿಕ ಗುಣ, ವೈಚಾರಿಕ ಗುಣ ಮೂರು ಇದೆ. ಇದು ಇರುವುದರಿಂದಲೇ ನಮ್ಮ ಭಾಷೆಯೇ ಒಂದು ಪ್ರಕೃತಿ. ಇಂಥ ಭಾಷೆಯ ಜೀವಸೆಲೆಯನ್ನು ಇಟ್ಟುಕೊಂಡ ಮಹಾನ್ ವೇದಿಕೆ ಕರ್ನಾಟಕ. ಇಂಥ ಕರ್ನಾಟಕದ ಹೆಸರಿಗೆ ಐವತ್ತು ಹುಟ್ಟುಹಬ್ಬವೇ ವಿನಃ ಕನ್ನಡಕ್ಕಲ್ಲ… ಕನ್ನಡ ಅಜರಾಮವಾಗಲಿ, ಅವಿಸ್ಮರಣೀಯವಾಗಲಿ ಕರ್ನಾಟಕ. ನಮ್ಮ ನೆಲ ನಲ್ಮೆ ಇನ್ನಷ್ಟು ಹತ್ತಿರವಾಗಲಿ.
-ಕೆ. ಕಲ್ಯಾಣ್,
ಸಂಗೀತ ನಿರ್ದೇಶಕ
ಮತ್ತು ಚಿತ್ರ ಸಾಹಿತಿ