ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -11 (Bigg Boss Kannada-11) ಮಹತ್ವದ ಘಟ್ಟಕ್ಕೆ ತಲುಪಿದೆ. ಇನ್ನೇನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಫಿನಾಲೆಯ ಮಾತುಗಳು ಶುರುವಾಗಲಿದೆ.
ಬಿಗ್ ಬಾಸ್ 11ರ ಸೀಸನ್ ಶುರುವಾಗಿ 72 ದಿನಗಳು ಕಳೆದಿದೆ. ಪ್ರತಿ ಸೀಸನ್‌ನಂತೆ ಈ ಸೀಸನ್ ಕೂಡ ಒಂದಷ್ಟು ವಾದ – ವಾಗ್ವಾದದಿಂದಲೇ ಸದ್ದು ಮಾಡಿದೆ. ಆರಂಭಿಕ ವಾರಗಳಲ್ಲಿ ಜಗದೀಶ್ – ರಂಜಿತ್ ಅವರ ನಡುವಿನ ಮಾತಿನ ಚಕಮಕಿ ಬಿಗ್ ಬಾಸ್ ಮನೆಯಿಂದ ದೊಡ್ಡ ವಿವಾದದ ಸುದ್ದಿಯಾಗಿಯೇ ಹೊರಹೊಮ್ಮಿತ್ತು.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆಯವುದು ಹೊಸದೇನಲ್ಲ. ಆದರೆ ಈ ಸೀಸನ್‌ನಲ್ಲಿ ಇದು ಅತಿಯಾಗಿಯೇ ನಡೆದಿದೆ. 100 ದಿನಗಳ ಬಿಗ್ ಬಾಸ್ ಆಟದಲ್ಲಿ ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚಿನ ಪಯಣವನ್ನು ಮುಗಿಸಿರುವ ಸ್ಪರ್ಧಿಗಳು ಫಿನಾಲೆವರೆಗೂ ಹೇಗಾದರೂ ಮಾಡಿ ಬರಬೇಕೆನ್ನುವ ನಿರೀಕ್ಷೆಯಲ್ಲಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಭರ್ಜರಿ ಟಿಆರ್‌ಪಿ ಬರುತ್ತಿದೆ. ವೀಕ್ಷಕರ ಮನ ಗೆಲ್ಲುವಲ್ಲಿ ಈ ಬಾರಿಯ ಸೀಸನ್ ಯಶಸ್ಸಾಗಿದೆ. ಕಾರ್ಯಕ್ರಮ ರೋಚಕವಾಗಿ ಮೂಡಿಬರಲು ಆಯೋಜಕರು ಆಟದಲ್ಲಿ ಎಲಿಮಿನೇಷನ್ ಟ್ವಿಸ್ಟ್, ಹಳೆ ಸ್ಪರ್ಧಿಗಳ ಎಂಟ್ರಿ ಸೇರಿದಂತೆ ನಾನಾ ರೀತಿಯ ಪ್ರಯೋಗವನ್ನು ಮಾಡುತ್ತಿದ್ದಾರೆ.
ಹೀಗಾಗಿ ಆಯೋಜಕರು ವೀಕ್ಷಕರಿಗಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ಇನ್ನೆರಡು ವಾರಕಾಲ ವಿಸ್ತರಣೆ ಮಾಡಲು ಪ್ಲ್ಯಾನ್ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಕಳೆದ ಸೀಸನ್ ಕೂಡ ಇದೇ ರೀತಿಯಾಗಿ ಎರಡು ವಾರ ಹೆಚ್ಚಿಗೆ ಪ್ರಸಾರವಾಗಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.
ಸುದೀಪ್ ಅವರ ವೀಕೆಂಡ್ ಶೋಗೆ ಹೆಚ್ಚಿನ ವೀಕ್ಷಕರು ಬರುತ್ತಿದ್ದಾರೆ. ಇನ್ನಷ್ಟು ಮನರಂಜನೆಯ ಅಂಶವನ್ನು ತುಂಬಿಸಿ, ಆಟದಲ್ಲಿ ರೋಚಕತೆಯನ್ನು ತರುವ ನಿಟ್ಟಿನಲ್ಲಿ ಎರಡು ವಾರ ಹೆಚ್ಚಿಗೆ ಶೋ ನಡೆಸಲಾಗುತ್ತದೆ ಎನ್ನಲಾಗುತ್ತಿದೆ.
ಆದರೆ ಇದುವರೆಗೆ ವಾಹಿನಿ ಕಡೆಯಿಂದ ಬಿಗ್ ಬಾಸ್ ತಂಡದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.