Advertisement

ಜಿಲ್ಲಾ ರಾಜ್ಯೋತ್ಸವ: 15 ಪ್ರಶಸ್ತಿಗೆ 140 ಅರ್ಜಿ!

08:36 AM Oct 27, 2017 | |

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವುದು 15. ಆದರೆ ಅರ್ಜಿಗಳು ಬಂದಿದ್ದು 140ಕ್ಕೂ ಹೆಚ್ಚು! ಇದು ನ.1ರಂದು ರಾಜ್ಯೋತ್ಸವ ನಿಮಿತ್ತ ನೀಡಲಾಗುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಕಥೆ. ಇದರೊಂದಿಗೆ ಪ್ರಶಸ್ತಿಗೆ ತೆರೆಮರೆಯಲ್ಲಿ ಸಾಕಷ್ಟು ಲಾಬಿ ನಡೆಯುತ್ತಿದೆ. ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ , ಈಗ ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿಗೆ ಲಾಬಿ ಸಾಮಾನ್ಯ ಎಂಬಂತಾಗಿದೆ. ರಾಜ್ಯೋತ್ಸವ ದಿನ ಹತ್ತಿರವಾಗುತ್ತಿರುವಂತೆ ಅರ್ಜಿದಾರರ ಪಟ್ಟಿ ಕೂಡ ದೊಡ್ಡದಾಗುತ್ತಾ ಹೋಗುತ್ತಿದೆ. 

Advertisement

ಜಿಲ್ಲಾಡಳಿತ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ ಸಾಧನೆ ಮಾಡಿದವರಿಗೆ ಪ್ರತಿವರ್ಷ 15 ಮಂದಿಗೆ “ಜಿಲ್ಲಾ ರಾಜ್ಯೋತ್ಸವ’ ಪ್ರಶಸ್ತಿ ನೀಡುತ್ತದೆ. ಸಾಹಿತ್ಯ, ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಲಿತ ಕಲೆಗಳು, ಸಮಾಜ ಸೇವೆ, ಜಾನಪದ, ಪರಿಸರ-ವಿಜ್ಞಾನ, ವೈದ್ಯಕೀಯ, ಸಂಶೋಧನೆ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕೆ ಬೇಡಿಕೆ ಹೆಚ್ಚಾಗಿದೆ. “ಹೇಗಾದರೂ ಮಾಡಿ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿ’ ಎನ್ನುವಷ್ಟರ ಮಟ್ಟಿಗೆ ಕೆಲವು ಆಕಾಂಕ್ಷಿಗಳು ತೆರೆ ಮರೆಯಲ್ಲಿ ಸ್ಥಳೀಯ ಶಾಸಕರು ಹಾಗೂ ಪ್ರಭಾವಿಗಳಿಗೆ‌ ದುಂಬಾಲು ಬೀಳುತ್ತಿದ್ದಾರೆ ಎನ್ನಲಾಗುತ್ತಿದೆ. 

ಈ ನಡುವೆ ಪ್ರಶಸ್ತಿ ನೀಡುವಂತೆ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದವರ ಅಂತಿಮ ಆಯ್ಕೆಯನ್ನು ಅಪರ ಜಿಲ್ಲಾಧಿಕಾರಿ ನೇತೃತ್ವದ ಆಯ್ಕೆ ಸಮಿತಿ ನಡೆಸಲಿದೆ. ಪ್ರಶಸ್ತಿ ಆಯ್ಕೆ ಸಮಿತಿಯು ಎರಡು ಸುತ್ತಿನ ಮಾತುಕತೆ ನಡೆಸಿ ಅರ್ಹರ ಹುಡುಕಾಟದಲ್ಲಿದೆ. ಇನ್ನು ಎಷ್ಟೋ ಮಂದಿ ಸಾಧಕರು ಪ್ರಶಸ್ತಿಗಾಗಿ ಅರ್ಜಿಯನ್ನು ಕೂಡ ಸಲ್ಲಿಸುವುದಿಲ್ಲ. ಈ ಕಾರಣಕ್ಕೆ ಬಂದ ಅರ್ಜಿಗಳ ನಡುವೆ ಇಂತಹ ಅರ್ಹ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗಾಗಿ ತಾವೇ ಗುರುತಿಸುವುದು 16 ಮಂದಿಯ ಆಯ್ಕೆ ಸಮಿತಿಗೂ ಸವಾಲೆನಿಸಿದೆ. 

ಜನಪ್ರತಿನಿಧಿಗಳ ಶಿಫಾರಸು ಪತ್ರ!
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸ್ವೀಕೃತ ಅರ್ಜಿ ಗಳ ಪೈಕಿ ಬಹುತೇಕ ಅರ್ಜಿಗಳ ಮೇಲೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಶಿಫಾ ರಸು ಪತ್ರಗಳೇ ಇವೆ. ಒಂದೇ ಕ್ಷೇತ್ರದಲ್ಲಿ ನಾಲ್ಕೈದು ಮಂದಿಗೆ ಜನ ಪ್ರತಿನಿಧಿಗಳು ಶಿಫಾರಸು ಮಾಡಿದ್ದೂ ಇದೆ. ಜತೆಗೆ ಕೆಲವು ಅರ್ಜಿ ಗಳಲ್ಲಿ “ಕಳಕಳಿಯ ವಿನಂತಿ’, “ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿ’ ಎಂದು ಕೇಳಿಕೊಂಡ ಪತ್ರ ಗಳೂ ಇವೆ. ಪತ್ರಿಕೆಗಳ ಸಂಪಾದಕರಿಗೆ ಪತ್ರ ಬರೆಯು ವವರು ಕೂಡ ಪತ್ರಿಕೋದ್ಯಮ ವಿಭಾಗ ದಲ್ಲಿ ಪ್ರಶಸ್ತಿಗೆ ಪರಿಗಣಿಸುವಂತೆ ಅರ್ಜಿ ಸಲ್ಲಿಸಿದ್ದಾರೆ!

ಕೊನೆ ಕ್ಷಣದಲ್ಲೂ  ಬದಲಾವಣೆ!
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಯಾದ ಕ್ಷಣದಲ್ಲೇ ಇನ್ನಷ್ಟು ಸೇರ್ಪಡೆಯೊಂದಿಗೆ ಹೊಸ ಪಟ್ಟಿ ಬಿಡುಗಡೆಯಾದ ಉದಾಹರಣೆಯಿದೆ. ಪ್ರಶಸ್ತಿ ಪ್ರದಾನದ ಮುನ್ನಾದಿನ, ಪಟ್ಟಿಗೆ ಹೊಸ ಹೆಸರು ಸೇರ್ಪಡೆಯಾದದ್ದೂ ಇದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನದ ಮುನ್ನಾ ದಿನ ರಾತ್ರಿ 8 ಗಂಟೆಗೆ ಆಯ್ಕೆಯಾದವರ ಹೆಸರನ್ನು ಜಿಲ್ಲಾಡಳಿತ ಪ್ರಕಟಿಸಿ ಹೊಸ ತಂತ್ರ ಮಾಡಿತ್ತು. ಈ ಬಾರಿಯೂ ಇದೇ ಮಾನದಂಡ ಅನುಸರಿಸುವ ಬಗ್ಗೆ ಜಿಲ್ಲಾಡಳಿತ ಯೋಚಿಸಿದಂತಿದೆ. 

Advertisement

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ 120 ಅರ್ಜಿ?
ಉಡುಪಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ ಜಿಲ್ಲೆ ಯಿಂದ ಸುಮಾರು 120 ಅರ್ಜಿಗಳು ಬಂದಿವೆ. ಒಂದೆರಡು ದಿನಗಳಲ್ಲಿ ಆಯ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ 30 ಮಂದಿಗೆ, ಅದಕ್ಕೂ ಹಿಂದಿನ ವರ್ಷ 21 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲಾಗಿತ್ತು.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next