Advertisement

ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ

01:02 PM Oct 31, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: 69ನೇ ರಾಜ್ಯೋತ್ಸವ ಆಚರಣೆ ಪ್ರಯುಕ್ತ ರಾಜ್ಯ ಸರಕಾರ ಕೊಡ ಮಾಡಿರುವ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಗಾಯಕ ಇಮಾಮಸಾಬ ದಾವಲಸಾಬ ವಲ್ಲೆಪನವರ ಭಾಜನರಾಗಿದ್ದಾರೆ.

Advertisement

1956 ಜು.28ರಂದು ಬಡತನ ಕುಟುಂಬದಲ್ಲಿ ಜಾನಪದ ಕಲಾವಿದ ಮಹಮ್ಮದಸಾಬ, ಸೈದಮ್ಮಾ ದಂಪತಿ ಪುತ್ರರಾಗಿ ಜನಿಸಿದ ಇಮಾಮಸಾಬ, 11 ವರ್ಷ ಜೀತದಾಳು ಆಗಿ ಬೆಳೆದಿದ್ದು ಹಾಲುಮತದ ಮನೆತನದಲ್ಲಿ. ಕುರಿ ಕಾಯುತ್ತಲೇ ಹಾಲುಮತದ ಜಾನಪದ ಸೊಗಡಿನ ಹಾಡು ಕಲಿತು ಬೆಳೆದ ಅವರು, ಬಳಿಕ ಟೇಲರಿಂಗ್‌ ಕೆಲಸ ಮಾಡಿದರು.

ಈ ಕಾಯಕದಿಂದಲೇ ಐ.ಎಂ.ಟೇಲರ್‌ ಜಾನಪದ ಕಲಾವಿದ ಎಂಬುದಾಗಿ ಜನಮನದಲ್ಲಿ ನೆಲೆಸಿದರು. ಡೊಳ್ಳಿನ ಭಾವೈಕ್ಯತೆ ಜನಪದ ಕಲಾ ತಂಡ ಕಟ್ಟಿಕೊಂಡು ಜಾತ್ರೆ, ಉರುಸು, ಉತ್ಸವ, ದೇವಸ್ಥಾನ, ಸಾಹಿತ್ಯ, ಕೃಷಿ, ಕನ್ನಡ ಸಮ್ಮೇಳನ ಸೇರಿದಂತೆ ವಿವಿಧ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾವೈಕ್ಯತೆ ಸಾರ ನೀಡಿದ್ದಾರೆ. 58 ವರ್ಷಗಳಲ್ಲಿ ರಾಜ್ಯ-ಹೊರ ರಾಜ್ಯಗಳಲ್ಲಿ 15 ಸಾವಿರ ಕಾರ್ಯಕ್ರಮ ನೀಡಿದ್ದಾರೆ.

ಶಿಗ್ಗಾವಿ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಗಡಿ ಭಾಗಗಳಷ್ಟೇ ಅಲ್ಲ ನಾಗಾಲ್ಯಾಂಡ್‌, ಗೋಹಾಟಿ, ಮಹಾರಾಷ್ಟ್ರ, ತಮಿಳುನಾಡಿನಲ್ಲೂ ಭಾವೈಕ್ಯತೆಯ ಜಾನಪದ ಸೊಗಡು ಬಿಂಬಿಸಿ ಗಮನ ಸೆಳೆದಿದ್ದಾರೆ.

ಜಾನಪದ ರತ್ನ, ಪಂ|ಬಸವರಾಜ ಮನಸೂರ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ರಾಣಿ ಕಿತ್ತೂರ ಚೆನ್ನಮ್ಮಾ ಪ್ರಶಸ್ತಿ, ಬಸವ ಪ್ರಶಸ್ತಿ, ಅಬ್ದುಲ್‌ ಕಲಾಂ ಪ್ರಶಸ್ತಿ, ಮದರ ಥೆರೆಸಾ ಪ್ರಶಸ್ತಿ, ಫಕೀರವ್ವಾ ಗುಡಿಸಾಗರ ಪ್ರಶಸ್ತಿ, ಜಾನಪದ-ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಸಂದಿವೆ. ಸಿಡಿ-ಡಿವಿಡಿ ಕ್ಯಾಸೆಟ್‌ಗಳ ಮೂಲಕ ಖ್ಯಾತರಾಗಿದ್ದಾರೆ. ಇವರ ಹಾಡುಗಳು ಧಾರವಾಡ, ಮಂಗಳೂರು ಆಕಾಶವಾಣಿ ಕೇಂದ್ರ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗಿವೆ.

Advertisement

ಕುರಿ ಕಾಯುತ್ತಲೇ ಹಾಲುಮತದ ಜಾನಪದ ಹಾಡು ಕಲಿತೆ. ಇದಾದ ಬಳಿಕ ಕಳೆದ 58 ವರ್ಷಗಳಿಂದ ಈ ಜಾನಪದ ಹಾಡುಗಳ
ಮೂಲಕ ಸಮಾಜದಲ್ಲಿ ಭಾವೈಕ್ಯತೆ ಬಿಂಬಿಸಿಕೊಂಡು ಬಂದ ಸಾರ್ಥಕತೆ ಇದೆ. ಇದನ್ನು ಗುರುತಿಸಿ, ಪ್ರಶಸ್ತಿ ನೀಡಿದ್ದಕ್ಕೆ ಖುಷಿ ಕೊಟ್ಟಿದೆ. ರಾಜ್ಯ ಸರಕಾರಕ್ಕೆ ಧನ್ಯವಾದಗಳು.
ಇಮಾಮಸಾಬ ವಲ್ಲೆಪನವರ,
ರಾಜ್ಯೋತ್ಸವ ಪುರಸ್ಕೃತ.

Advertisement

Udayavani is now on Telegram. Click here to join our channel and stay updated with the latest news.

Next