ಕರ್ನಾಟಕಕ್ಕೆ ಬರಬೇಕೆಂದು ಮನಸ್ಸಿನಲ್ಲಿ ಇರಲಿಲ್ಲ. 1984 ಚೆನ್ನೈನಲ್ಲಿ ಒಂದು ಪವಾಡ ನಡೆಯಿತು. ಒಂದು ದಿನ ಸಂಜೆ ವಯಸ್ಸಾದ ಮುದುಕರೊಬ್ಬರು ನನ್ನೆದುರು ಬಂದು, “ನೀನ್ಯಾಕೆ ಇಲ್ಲಿದೀಯ?’ ಎಂದು ಕೇಳಿದರು. ಆಗ ನನಗೆ ಗೊಂದಲ ಆಯ್ತು. “ಏಯ್ ಹೋಗೋ, ಕರ್ನಾಟಕ ಕಾಯ್ತಾ ಇದೆ ನಿನಗೋಸ್ಕರ’ ಅಂತ ಹೇಳಿದ್ರು. ನಂತರ 1985ರಲ್ಲಿ “ಸರ್ದಾರ್ ಧರ್ಮಣ್ಣ’ ತೆಲುಗು ಸಿನಿಮಾ ಮೂಲಕ ವಿಷ್ಣುವರ್ಧನ್ ಅವರ ಪರಿಚಯ ಆಯ್ತು. ಮುಂದೆ ವಿಷ್ಣು “ಸತ್ಯ ಶಿವಂ ಸುಂದರಂ’ ಸಿನಿಮಾದಲ್ಲಿ ನಟಿಸಿದ್ರು. ಅದಕ್ಕೆ ನಾನು ಚಿತ್ರಕಥೆ ಬರೆದೆ. ಅದು ಎಲ್ಲರಿಗೂ ಇಷ್ಟ ಆಗಿತ್ತು. ನಂತರ ವಿಷ್ಣುವರ್ಧನ ಅವರೇ “ಬನ್ನಿ ಇಲ್ಲಿ’ ಎಂದು ಕರೆದರು. ಕೆಸಿಎನ್ ಸಂಸ್ಥೆ ನನಗೆ ಅವಕಾಶ ಕೊಟ್ಟಿತು. “ಮುತ್ತಿನಂಥ ಮನುಷ್ಯ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟೆ. ನಾನು ಮೊದಲು ನಿರ್ದೇಶಕನಾಗಿದ್ದೇ ಕರ್ನಾಟಕದಲ್ಲಿ.
ಹೊರಗಿನವ ಅನ್ನಲಿಲ್ಲ…
ಕಲಾವಿದನಾಗಿ, ನಿರ್ದೇಶಕ, ನಿರ್ಮಾಪಕನಾಗಿ, ಆಧ್ಯಾತ್ಮಿಕವಾಗಿ ನನಗೆ ಬದುಕು ಕಟ್ಟಿಕೊಟ್ಟ ನಾಡಿದು. ನನ್ನ ಅದೃಷ್ಟ, ಇಲ್ಲಿ ಬಂದ ಮೇಲೆ ನನ್ನ ಚಿತ್ರಗಳೆಲ್ಲ ಯಶಸ್ವಿಗೊಂಡವು. ಹಣ ಕೂಡ ಬಂತು. ಜನ ಸಾಯಿಪ್ರಕಾಶ್ ಅಂತ ಗುರುತಿಸಲು ಶುರು ಮಾಡಿದರು. ಕಡಿಮೆ ಬಜೆಟ್, ಕಡಿಮೆ ಸಮಯದಲ್ಲಿ ಸಿನಿಮಾ ಮಾಡಿಕೊಡ್ತಿದ್ದೆ. “ನಿರ್ಮಾಪಕರ ನಿರ್ದೇಶಕ’ ಎಂಬ ಹೆಗ್ಗಳಿಕೆ ಬಂತು. ಕಲಾವಿದರೂ ನನ್ನ ಮೇಲೆ ಪ್ರೀತಿ ತೋರಿದರು. ನನ್ನನ್ನು ಯಾರೂ ಹೊರಗಿನವನು ಅಂದುಕೊಳ್ಳಲಿಲ್ಲ. ನಮ್ಮವನೇ ಎಂದುಕೊಂಡರು.
ಸಹೃದಯಿ ಕನ್ನಡಿಗರು ಕರ್ನಾಟಕ, ಕನ್ನಡ ಸಂಸ್ಕೃತಿ ಎಂದಾಗ ನನಗೆ ಕಣ್ಮುಂದೆ ಬರುವುದೇ ಡಾ. ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಬಿ.ಆರ್. ಪಂತಲು ಅವರು. ಇಲ್ಲಿನ ಪುಣ್ಯಕ್ಷೇತ್ರಗಳು ನನ್ನನ್ನು ಪ್ರಭಾವಿಸಿವೆ. ಜೊತೆಗೆ ಆದಿಚುಂಚನಗಿರಿ ಮಠ, ಸತ್ಯ ಸಾಯಿಬಾಬಾ ಕುರಿತು ಸಿನಿಮಾ ಮಾಡಿದ್ದೇನೆ. ಇವತ್ತು ಜನ ನನ್ನನ್ನು ಸಾಯಿಬಾಬಾ ಎಂದೇ ಗುರುತಿಸುತ್ತಾರೆ. ಇಲ್ಲಿಗೆ ಬರುವಾಗ ಕರ್ನಾಟಕ ನನಗೆ ಗೊತ್ತಿಲ್ಲ, ನಾನು ಕರ್ನಾಟಕಕ್ಕೆ ಗೊತ್ತಿಲ್ಲ. ಇವತ್ತು ಕರ್ನಾಟಕ ನನ್ನದು, ಎಲ್ಲೆಡೆ ಅಭಿಮಾನಿಗಳಿದ್ದಾರೆ. ಕರ್ನಾಟಕ ಒಂದು ಪುಣ್ಯಭೂಮಿ. ಕನ್ನಡಿಗರು ಸಹೃದಯರು. ಇಲ್ಲಿನ ಜನರಲ್ಲಿ ಅಸೂಯೆ ಇಲ್ಲ. ಪ್ರೋತ್ಸಾಹಿಸುವ ಗುಣವಿದೆ. ಕನ್ನಡದಲ್ಲಿ
ಮೊದಲು 100 ಸಿನಿಮಾಗಳನ್ನು ನಿರ್ದೇಶಿಸಿದವನು ನಾನು. ಕನ್ನಡಿಗರ ಪ್ರೋತ್ಸಾಹದಿಂದಲೇ ಇದು ಸಾಧ್ಯವಾಗಿದೆ.
-ಓಂ ಸಾಯಿಪ್ರಕಾಶ್, ಚಲನಚಿತ್ರ ನಿರ್ದೇಶಕರು