Advertisement
ನಾವು ಮೂಲತಃ ಗುಜರಾತ್ನವರು. ನಾನು ಹಾಗೂ ನನ್ನ ತಂದೆ ಸುರೇಶ್ ಶಾ ಅವರು ಹುಟ್ಟಿದ್ದು ಮುಂಬೈನಲ್ಲಾದರೂ, ಬದುಕು ಕಟ್ಟಿಕೊಂಡಿದ್ದು ಕರ್ನಾಟಕದಲ್ಲಿ. ತಂದೆಯವರು ಕಲಿತದ್ದು 10ನೇ ತರಗತಿವರೆಗೆ ಮಾತ್ರ. ಪಾಕೆಟ್ ಬುಕ್ ಕಂಪನಿಯ ಉದ್ಯೋಗಿಯಾಗಿ ಮುಂಬೈ, ಚೆನ್ನೈನಲ್ಲಿ ಕೆಲಸ ಮಾಡಿ 1967ರ ಹೊತ್ತಿಗೆ ಬೆಂಗಳೂರಿಗೆ ಬಂದ ಅವರು ಪುಸ್ತಕೋದ್ಯಮದಲ್ಲಿ ನಿಪುಣರಾಗಿದ್ದರು. ನಮ್ಮ ತಾಯಿ ಭಾನುಮತಿ ಅವರು, “ನೀವು ಸ್ವಂತ ಪುಸ್ತಕೋದ್ಯಮ ಆರಂಭಿಸಿ’ ಎಂದು ತಂದೆಯವರಿಗೆ ಸಲಹೆ ನೀಡಿದರು. ಅದು ಅವರ ಕನಸಾಗಿತ್ತು. ಹಾಗಾಗಿ ನಮ್ಮ ಪುಸ್ತಕದಂಗಡಿಗೆ “ಸಪ್ನ’ ಎಂದು ಹೆಸರಿಟ್ಟೆವು.
Related Articles
Advertisement
ಇದೇ ನನ್ನ ತವರೂರು:
ಕರ್ನಾಟಕದವರು ನಮ್ಮನ್ನೆಂದೂ ಹೊರಗಿನವರ ಹಾಗೆ ನೋಡಿಲ್ಲ. ಕರ್ನಾಟಕವೇ ನಮಗೀಗ ತವರು ಮನೆ. ಪ್ರತಿ ವರ್ಷ ನವೆಂಬರ್ 1ರಂದು, ರಾಜ್ಯೋತ್ಸವದ ವರ್ಷದಷ್ಟು ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತೇವೆ. ಪುಸ್ತಕ ಪ್ರಕಟಿಸಿದರೆ ಸಾಲದು, ಜನರಲ್ಲಿ ಓದುವ ಅಭಿರುಚಿ, ಹವ್ಯಾಸ ಬೆಳೆಸಬೇಕು ಎಂದುಕೊಂಡು ಪುಸ್ತಕ ಹಬ್ಬ, ಕನ್ನಡ ಪುಸ್ತಕಗಳ ಪ್ರಚಾರ ಕಾರ್ಯ ಹಮ್ಮಿಕೊಳ್ಳುತ್ತೇವೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಪುಸ್ತಕ ಮಳಿಗೆ ಆರಂಭಿಸಬೇಕೆಂಬ ದೊಡ್ಡ ಆಸೆ ಇದೆ.
ವಿಚಿತ್ರ ಎಂದರೆ, ಅಮ್ಮನ ತವರೂರು ಪಾಕಿಸ್ತಾನದ ಕರಾಚಿ, ಅಪ್ಪ ಹುಟ್ಟಿದ್ದು ಮುಂಬೈ, ಕೆಲಸಕ್ಕಾಗಿ ಹೋಗಿದ್ದು ಚೆನ್ನೈಗೆ. ಆದರೆ, ಅಮ್ಮನ ಕನಸಿನ “ಸಪ್ನ’ ಆರಂಭಿಸಿ, ನಮ್ಮ ಬದುಕು ರೂಪಿಸಿಕೊಂಡಿದ್ದು ಕರ್ನಾಟಕದಲ್ಲಿ. ಕರುನಾಡು, ಕನ್ನಡ ಪುಸ್ತಕಗಳು ನಮ್ಮ ಮೂರು ತಲೆಮಾರಿಗೆ ಬೆಳಕಾಗಿವೆ.
-ನಿತಿನ್ ಶಾ, ಸಪ್ನ ಬುಕ್ ಹೌಸ್ ಮಾಲೀಕರು