Advertisement

Desiswara: ಕರ್ನಾಟಕ ರಾಜ್ಯೋತ್ಸವ ಹೀಗೊಂದು ಚಿಂತನೆ

10:52 AM Nov 03, 2024 | Team Udayavani |

ಕನ್ನಡ ಭಾಷೆಯನ್ನಾಡುವ ಕನ್ನಡಿಗರ ನಾಡು ನಮ್ಮ ಕರ್ನಾಟಕ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಕರ್ನಾಟಕ ಏಕೀಕರಣದ ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ. 1956ರಲ್ಲಿ ಕರ್ನಾಟಕ ರಚನೆಯಾದರೂ, ನಮ್ಮ ರಾಜ್ಯದ ಹೆಸರು “ಮೈಸೂರು’ ಎಂದೇ ಉಳಿದುಕೊಂಡಿದ್ದು ನಮಗೆಲ್ಲ ತಿಳಿದಿದೆ. 1956ಕ್ಕೆ ಮೊದಲು ಕನ್ನಡ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಿದ್ದ ಕೆಲವು ಪ್ರದೇಶಗಳು ಬೇರೆ-ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದವು.

Advertisement

ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನ ಕಾಲದಲ್ಲಿ (ಕ್ರಿ.ಶ. 9ನೇ ಶತಮಾನ) ರಚಿತವಾದ ಶ್ರೀವಿಜಯನ “ಕವಿರಾಜಮಾಗ’ದಲ್ಲಿ, “ಕಾವೇರಿಯಿಂದಮಾ ಗೋದಾವರಿವರಮಿದ್ದ ನಾಡದಾ ಕನ್ನಡದೊಳ್‌’ ಎಂದು ಉಲ್ಲೇಖೀಸಿರುವುದನ್ನು ಕೇಳಿದಾಗ ಕನ್ನಡನಾಡಿನ ಹಿರಿಮೆಯನ್ನು ತಿಳಿದು ಹೆಮ್ಮೆಯೆನಿಸುತ್ತದೆ. ಗಂಗರು, ಕದಂಬರು, ರಾಷ್ಟ್ರಕೂಟರು, ಬಾದಾಮಿಯ ಚಾಲುಕ್ಯರು, ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರು, ಹೊಯ್ಸಳರು…

ಹೀಗೆ ಹಲವಾರು ರಾಜಮನೆತನಗಳು ಆಳಿದ ನಾಡು ನಮ್ಮ ಕರ್ನಾಟಕ. ಇವರೆಲ್ಲರೂ ಕನ್ನಡ ನಾಡಿನ ಹಿರಿಮೆ-ಗರಿಮೆಗಳನ್ನು ಕಾಪಾಡಿದ್ದರೆನ್ನುವುದು ಹೆಮ್ಮೆಯ ವಿಷಯವಾಗಿದೆ. ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಕನ್ನಡನಾಡು ಕಾವೇರಿಯಿಂದ ನರ್ಮದೆಯ ವರೆಗೆ ವ್ಯಾಪಿಸಿತ್ತು ಅನ್ನುವ ವಿಷಯವೇ ರೋಮಾಂಚನವನ್ನುಂಟು ಮಾಡುತ್ತದೆ.

ಇಂಥ ವೈಭವವನ್ನು ಕಂಡಿದ್ದ ಕರ್ನಾಟಕ ವಿವಿಧ ರಾಜಪ್ರಭುತ್ವದ ರಾಜ್ಯಗಳು, ಮದ್ರಾಸ್‌ ಮತ್ತು ಬಾಂಬೆ ಪ್ರಸಿಡೆನ್ಸಿಗಳು ಮತ್ತು ನಿಜಾಮರ ಹೈದರಾಬಾದ್‌ ರಾಜ್ಯ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಪ್ರಾಂತಗಳಾಗಿ ಹರಿದು ಹಂಚಿ ಹೋಗಿತ್ತು. ಮುಂದೆ ಅನೇಕ ಹೋರಾಟ, ಸತ್ಯಾಗ್ರಹ, ಚಳುವಳಿಗಳ ಪ್ರತಿಫಲವಾಗಿ ಕರ್ನಾಟಕ ಏಕೀಕರಣವಾಗಿ  ಕರ್ನಾಟಕ ರಾಜ್ಯ ಹುಟ್ಟಿಕೊಂಡಿತು ಎನ್ನುವುದನ್ನು ನಾವು ತಿಳಿಯಬೇಕು. 1956ರ ನ.1 ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ ದಿನವೆಂದು ನಮಗೆಲ್ಲ ತಿಳಿದಿದೆ. ಅಂದು ಹಲವಾರು ಭಾಗಗಳಲ್ಲಿ ಹಂಚಿ ಹೋಗಿದ್ದ ಪ್ರದೇಶಗಳನ್ನು ರಾಜ್ಯಗಳ ಭಾಷಾವಾರು ಮರು-ಸಂಘಟನೆಯ ಮೂಲಕ ದಕ್ಷಿಣ ಭಾರತದ ವಿವಿಧ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯದ ಅಡಿಯಲ್ಲಿ ತರಲಾಯಿತು.

Advertisement

19ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಕರ್ನಾಟಕ ಏಕೀಕರಣದ ಚಳವಳಿಯು 1956 ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಮುಕ್ತಾಯವಾಗಿದ್ದು ನಮಗೆ ತಿಳಿದುಬರುತ್ತದೆ. ಏಕೀಕರಣದ ನಿಟ್ಟಿನಲ್ಲಿ ಕೆಲಸ ಮಾಡಲು 1916ರಲ್ಲಿ ಕನ್ನಡ ಸಭೆಯನ್ನು ಸ್ಥಾಪಿಸಿ, 1936ರಲ್ಲಿ ಅದನ್ನು ಕನ್ನಡ ಏಕೀಕರಣ ಸಂಘ ಎಂದು ಮರುನಾಮಕರಣ ಮಾಡಲಾಯಿತು.  ಧಾರವಾಡ ಜಿಲ್ಲೆ ಅಖಂಡ ಕರ್ನಾಟಕ ಚಳವಳಿಯ ಕೇಂದ್ರಬಿಂದುವಾಗಿತ್ತು. ರಾ.ಹ.ದೇಶಪಾಂಡೆಯವರ ನೇತೃತ್ವದಲ್ಲಿ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಹುಟ್ಟುಹಾಕಲಾಯಿತು.

1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಮಹಾಧಿವೇಶನ ನಡೆದಾಗ ಕರ್ನಾಟಕ ಏಕೀಕರಣಕ್ಕೆ ಚಾಲನೆ ದೊರೆತಿದ್ದು, ಹುಯಿಲಗೋಳ ನಾರಾಯಣರಾಯರು ರಚಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಅನಂತರದ ದಿನಗಳಲ್ಲಿ ಹುಟ್ಟಿಕೊಂಡ ಕರ್ನಾಟಕ ಏಕೀಕರಣ ಪರಿಷತ್‌, ಏಕೀಕರಣಕ್ಕೆ ಹೊಸ ತಿರುವನ್ನು ಕೊಟ್ಟ ಬಗ್ಗೆ ತಿಳಿಯಬಹುದು.

ಕರ್ನಾಟಕ ಏಕೀಕರಣ ಎಂದಾಗ ಆಲೂರು ವೆಂಕಟರಾವ್‌ ಅವರನ್ನು ನೆನೆಯಲೇಬೇಕು. 1912ರಲ್ಲಿ ಆಲೂರು ವೆಂಕಟರಾಯರು ಕರ್ನಾಟಕ ಗತ ವೈಭವ ಎಂಬ ಕೃತಿಯನ್ನು ಪರಿಚಯಿಸಿದರು. ಇದರಲ್ಲಿ ವಿಜಯನಗರದ ಇತಿಹಾಸದಿಂದ ಮರಾಠಿಗರು, ನಿಜಾಮರ ಆಳ್ವಿಕೆ, ಬ್ರಿಟಿಷ್‌ ಆಧಿಪತ್ಯ…ಹೀಗೆ ಎಲ್ಲ ಮಾಹಿತಿಯಿತ್ತು. ಈ ಕೃತಿಯು ಕನ್ನಡಿಗರಿಗೆ ಹೊಸ ಸ್ಫೂರ್ತಿ ನೀಡಿತು. ಏಕೀಕರಣದ ಹೋರಾಟ ಮತ್ತೂಂದು ಮಜಲಿಗೆ ತೆರೆದುಕೊಳ್ಳಲು ಕಾರಣವಾಯಿತು ಎನ್ನಬಹುದು.

ಗುಡ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್‌.ಹೆಚ್‌. ದೇಶಪಾಂಡೆ, ರಂಗರಾವ್‌ ದಿವಾಕರ್‌, ಶ್ರೀನಿವಾಸ್‌ ರಾವ್‌ ಕೌಜಲಗಿ, ಶ್ರೀನಿವಾಸ್‌ ರಾವ್‌ ಮಂಗಳ್ವಾಡೆ, ಕೆಂಗಲ್‌ ಹನುಮಂತಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಎಸ್‌.ನಿಜಲಿಂಗಪ್ಪ, ಟಿ. ಮರಿಯಪ್ಪ, ಸುಬ್ರಹ್ಮಣ್ಯ, ಸಾಹುಕಾರ್‌ ಚೆನ್ನಯ್ಯ, ಬಿ.ವಿ. ಕಕ್ಕಿಲ್ಲಾಯ, ಅ.ನ.ಕೃ ಹೀಗೆ ಹಲವರು ತಮ್ಮದೇ ಅದ ರೀತಿಯಲ್ಲಿ ಕನ್ನಡ ಪರ ಹೋರಾಟದಲ್ಲಿ ಪಾಲ್ಗೊಂಡದ್ದು ತಿಳಿದುಬರುತ್ತದೆ. ಹಲವಾರು ಅಧಿವೇಶನಗಳು, ಪರಿಷತ್ತಿನ ಸಮ್ಮೇಳನಗಳು, ಕನ್ನಡಪರ ಹೋರಾಟಗಳ ಪರಿಶ್ರಮದಿಂದ 1956ರಲ್ಲಿ  ಮೈಸೂರು ರಾಜ್ಯದ ರಚನೆಯಾಗಿ, 1973 ನ.1ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್‌ ಅರಸ್‌ ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡಿದರು.

ಇಂದಿನ ದಿನಗಳಲ್ಲಿ ಕರ್ನಾಟಕ ಏಕೀಕರಣದ ಇತಿಹಾಸವನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಂಡಾಗ, ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ನಾಡಿನ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೆಚ್ಚಾಗಬೇಕಲ್ಲವೇ? ರಾಷ್ಟ್ರಕವಿ ಕುವೆಂಪುರವರು ಕನ್ನಡ ಭಾಷೆಯ ಬಗ್ಗೆ  ಹೇಳಿರುವ ಈ ಸಾಲುಗಳು ಅದೆಷ್ಟು ಅರ್ಥಪೂರ್ಣವಾಗಿವೆ.  “ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿ ದಾರ್ಶನಿಕರನ್ನೂ ಹಡೆದಿರುವ ಭಾಷೆ’ ಈ ಸಾಲುಗಳನ್ನು ಓದಿದಾಗ, ಏಕೀಕರಣದ ಇತಿಹಾಸವನ್ನು ತಿಳಿದಾಗ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಸಂಕಲ್ಪ ನಮ್ಮದಾಗಬೇಕಲ್ಲವೇ? ಮಾತೃಭಾಷೆ ಮೂಡಿಸುವ ಆತ್ಮವಿಶ್ವಾಸದಲ್ಲಿ ಅದೆಂಥ ಶಕ್ತಿಯಿದೆ ಎನ್ನುವುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು.

ಕನ್ನಡ ಭಾಷೆ ಸುಪ್ತ ಬೀಜದಂತೆ ಕನ್ನಡಿಗನ ಮನಸ್ಸಿನಲ್ಲಿ ಜತೆಯಾಗಬೇಕು. ಆ ಬೀಜ ಮೊಳಕೆಯೊಡೆದು, ಬೇರುಬಿಟ್ಟು, ಹಂತ-ಹಂತವಾಗಿ ಮರವಾಗಿ ಬೆಳೆದು, ಸುಂದರ ಹೂವುಗಳಿಂದ ಆಲಂಕೃತಗೊಳ್ಳುವ ಕನ್ನಡದ ವೃಕ್ಷವಾಗುತ್ತದೆ ಮತ್ತು ಹಲವಾರು ಕನ್ನಡದ ಮನಸ್ಸುಗಳಿಗೆ ನೆರಳು ನೀಡುವ ನೆಲೆಯಾಗುತ್ತದೆ. ಭಾಷಾಭಿಮಾನದಿಂದ ಬೆಳೆಯುವ ಕನ್ನಡದ ವೃಕ್ಷ ಸುಂದರವಾದ ಹೂವುಗಳಿಂದ ಆಲಂಕೃತಕೊಳ್ಳುವುದಲ್ಲದೇ, ಫಲಿಸಿ ಅದೆಷ್ಟೋ ಬೀಜಗಳನ್ನು ನೀಡುತ್ತದೆ ಎಂಬ ಸಮಾಧಾನವನ್ನು ಮೂಡಿಸುತ್ತದೆ. “ಬೀಜದಿಂದ ಬೀಜಕ್ಕೆ: ಈ ನಡುವೆ ಎಷ್ಟೊಂದು ಮರ, ಎಷ್ಟು ಎಲೆ, ಎಷ್ಟು ಹೂ, ಎಷ್ಟು ಹಣ್ಣು, ಈ ಒಂದು ಬೀಜ ಕಡೆಗೂ ಮತ್ತೆ ಬೀಜವಾಗುವುದಕ್ಕೆ’ ಎನ್ನುವ ಕವಿಮಾತು ಕನ್ನಡವನ್ನು ಉಳಿಸಿ-ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

-ಸರಿತಾ ನವಲಿ,

ನ್ಯೂಜೆರ್ಸಿ

Advertisement

Udayavani is now on Telegram. Click here to join our channel and stay updated with the latest news.

Next