ಬೆಳಗಾವಿ: ಇಡೀ ಕರ್ನಾಟಕದಲ್ಲಿಯೇ ಅತ್ಯಂತ ವೈಭವ ಹಾಗೂ ಅದ್ಧೂರಿಯಾಗಿ ನಡೆಯುವ ಬೆಳಗಾವಿಯ ಕರ್ನಾಟಕ ರಾಜ್ಯೋತ್ಸವಕ್ಕೆ ನ.1ರಂದು ಶನಿವಾರ ಚಾಲನೆ ಸಿಕ್ಕಿದ್ದು, ಕನ್ನಡಿಗರು ಅತ್ಯಂತ ಸಂಭ್ರಮದಿಂದ ರಾಜ್ಯೋತ್ಸವ ಆಚರಣೆಯಲ್ಲಿ ತೊಡಗಿದ್ದಾರೆ.
ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ ಕನ್ನಡ ಚಿತ್ರಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಹಳದಿ ಕೆಂಪು ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಕನ್ನಡಿಗರು ಕನ್ನಡದ ಹಬ್ಬದಲ್ಲಿ ಮಿಂದೆದ್ದರು.
ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ರೂಪಕಗಳು ಗಮನಸೆಳೆದವು. ಡಿಜೆ, ಡಾಲ್ಬಿ ಹಾಡುಗಳಿಗೆ ಯುವಕ-ಯುವತಿಯರು ಹೆಜ್ಜೆ ಹಾಕಿದರು. ಎಲ್ಲೆಡೆ ಕಲರವ ರಾರಾಜಿಸುತ್ತಿದ್ದು, ಕನ್ನಡಿಗರು ಹುಚ್ಚೆದ್ದು ಕುಣಿದು ಕನ್ನಡ ಹಬ್ಬಕ್ಕೆ ಸಾಕ್ಷಿಯಾದರು.
ಮಧ್ಯರಾತ್ರಿಯಿಂದಲೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಆರಂಭಗೊಂಡಿದ್ದು, ರಾಣಿ ಚನ್ನಮ್ಮ ವೃತ್ತ ಮೆರವಣಿಗೆಯ ಕೇಂದ್ರ ಬಿಂದುವಾಗಿದೆ. ರಾತ್ರಿಯೇ ಕನ್ನಡ ಸಂಘಟನೆಗಳ ಕಾರ್ಯಕರ್ತರು ಕೇಕ್ ಕತ್ತರಿಸಿ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು.