ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಹಿರಿಯ ನಾಯಕರಿಗೆ ಟಿಕೆಟ್ ನೀಡಿಲ್ಲ. ಅದರಂತೆ ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಅದಕ್ಕೆ ಕಾರಣವನ್ನು ಕೂಡ ಅವರಿಗೆ ನೀಡಿದ್ದೆವು. ಆ ಕಾರಣವನ್ನು ಕ್ಷೇತ್ರದ ಮತದಾರರ ಮುಂದೆ ಇರಿಸುತ್ತೇವೆ. ಅವರ ಸೋಲು ಖಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ವ್ಯಕ್ತಿಗಿಂತ ಪಕ್ಷವೇ ಮುಖ್ಯವಾಗಿದೆ. ಪಕ್ಷವನ್ನು ತಿರಸ್ಕರಿಸಿ ಹೋಗಿರುವ ಶೆಟ್ಟರ ಅವರನ್ನು ಸೋಲಿಸಲು ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಮತದಾರರು ಕೂಡ ಅವರಿಗೆ ಸೋಲುಣಿಸಲಿದ್ದಾರೆ. ಇಂತಹ ಬದಲಾವಣೆ ಬಹಳ ಕಡೆಯಾಗಿದೆ. ಇದು ಹೊಸ ನಾಯಕತ್ವ ರೂಪಿಸಲು ಪಕ್ಷ ತೆಗೆದುಕೊಂಡ ರ್ಧಾರವಾಗಿತ್ತು.
ಟಿಕೆಟ್ ಏಕೆ ನೀಡುತ್ತಿಲ್ಲ ಎಂಬುವುದನ್ನು ಅವರಿಗೆ ಮೊದಲೆ ತಿಳಿಸಲಾಗಿತ್ತು. ಅದನ್ನು ಇಲ್ಲಿ ಬಹಿರಂಗ ಮಾಡುವುದಿಲ್ಲ. ಕ್ಷೇತ್ರದ ಜನರ ಮುಂದೆ ಇರಿಸುತ್ತೇವೆ. ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರಿದ್ದಾಗ ಪಕ್ಷ ಯಾರ ಮುಷ್ಟಿಯಲ್ಲಿತ್ತು. ಅವರು ಬಿಜೆಪಿ ತೊರೆದಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ಸಾಕಷ್ಟು ಅನುಕೂಲವಾಗಿದೆ. ಅನುದಾನ, ಯೋಜನೆ, ಉದ್ಯೋಗ ಸೃಷ್ಟಿಯಂತಹ ಹಲವು ಕಾರ್ಯಗಳು ನೆರವೇರಿವೆ. ಈ ಭಾಗದ ಪ್ರಮುಖ ನಗರಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ, ರೈಲ್ವೆ ಮಾರ್ಗಗಳ ನಿರ್ಮಾಣ, ರೈಲ್ವೆ ನಿಲ್ದಾಣಗಳ ಮೇಲ್ದರ್ಜೆ, ಮೆಗಾ ಹಾಲಿನ ಡೈರಿ, ಟೆಕ್ಸ್‌ಟೈಲ್ಸ್, ವಿವಿಧ ಕೈಗಾರಿಕೆಗಳ ಸ್ಥಾಪನೆಯಿಂದ ಈ ಭಾಗದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ.
ಸಾವಿರಾರು ಕೋಟಿ ವೆಚ್ಚದಲ್ಲಿ ರಾಜ್ಯದ ಪ್ರಮುಖ ನಗರಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಸಾವಿರಾರು ಕೋಟಿ ರೂ.ಗಳಲ್ಲಿ ಅನುದಾನ ಬರುತ್ತಿತ್ತು. ಆದರೆ ಇದೀಗ ಲಕ್ಷಾಂತರ ಕೋಟಿ ರೂ.ಗಳಲ್ಲಿ ಅನುದಾನ ಬರುತ್ತಿದ್ದು, ಹೆಚ್ಚುವರಿಯಾಗಿ ಒಂದಿಷ್ಟು ಅನುದಾನ ನೀಡಲಾಗುತ್ತಿದೆ ಎಂದರು.
ವಿಧಾನಸಭೆ ಹಾಗೂ ಲೋಕಸಭೆ
ಚುನಾವಣೆಯ ಸ್ವರೂಪ ಭಿನ್ನವಾಗಿರುತ್ತವೆ. ತಂತ್ರಗಾರಿಕೆಯೂ ಕೂಡ ವಿಭಿನ್ನವಾಗಿರುತ್ತದೆ. ಇಲ್ಲಿ ಅನ್ವಯಿಸಿದ ನಿಯಮಗಳು ಲೋಕಸಭೆ ಚುನಾವಣೆಗೆ ಹೋಲಿಕೆಯಾಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳ ಆಯ್ಕೆ ಮೂಲಕ ಬಿಜೆಪಿ ಆಡಳಿತಕ್ಕೆ ಬರಲಿದೆ.
ಅಮಿತ್ ಶಾ, ಕೇಂದ್ರ ಗೃಹ ಸಚಿವ