ಹುಬ್ಬಳ್ಳಿ: ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ತಕ್ಷಣ ಅವರು ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಗುರುಬಸವ ಮಂಟಪದ ಸಂಚಾಲಕ ಶಶಿಧರ ಕರವೀರಶೆಟ್ಟರ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇತ್ತೀಚೆಗೆ ನಡೆದ ಸಭೆಯಲ್ಲಿ ಬಸವಣ್ಣನವರ ಕೈಲಾಗದೆ ಹೊಳೆಗೆ ಹಾರಿ ಪ್ರಾಣ ಬಿಟ್ಟಂತೆ ಹಿಂದೂ ಸಮುದಾಯ ಅದೇ ರೀತಿ ಆಗಲಿದೆ ಎಂದು ಅನಾವಶ್ಯಕವಾಗಿ ಬಸವಣ್ಣನವರ ಬಗ್ಗೆ ಕೀಳಾಗಿ ಬಾಯಿ ಹರಿಬಿಟ್ಟಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ, ಹೋರಾಟ ಮಾಡಲಾಗುವುದು ಎಂದರು.
12ನೇ ಶತಮಾನದಲ್ಲಿ ವಿಶ್ವಕ್ಕೆ ಪ್ರಜಾಪ್ರಭುತ್ವ ನೀಡಿದ್ದಾರೆ. ಆಗಿನ ಸಂದರ್ಭದಲ್ಲಿ ಮನುವಾದಿಗಳನ್ನು ಧಿಕ್ಕರಿಸಿ ಸಮಾನತೆ, ಸರಳತೆ ಸಮಾಜ ನೀಡಿದ್ದಾರೆ. ಸಾಮಾನ್ಯ ಜನರನ್ನು ಶರಣರನ್ನಾಗಿ ಮಾಡಿದ್ದಾರೆ. ಅಲ್ಲದೇ ಬಸವಣ್ಣನವರು ಆತ್ಮವಿಶ್ವಾಸದ ಪ್ರತಿರೂಪವಾಗಿದ್ದು, ಹೊಳೆ ಹಾರಿ ಪ್ರಾಣ ಬಿಟ್ಟವರು ಅಲ್ಲ. ಲಿಂಗಾಯತ ಸಮಾಜದ ನಾಯಕರಾಗಿ ಬಸನಗೌಡ ಈ ರೀತಿ ಮಾತನಾಡಿರುವುದು ಅವರ ಮನೆತನದ ಸಂಸ್ಕಾರದ ಬಗ್ಗೆ ಗೊತ್ತಾಗುತ್ತದೆ. ಇವರ ಹೇಳಿಕೆ ಇಡೀ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಇದಕ್ಕೂ ಸ್ಪಂದಿಸದಿದ್ದರೆ ಬಿಜೆಪಿ ಹೈಕಮಾಂಡ್ ಅವರ ಗಮನಕ್ಕೆ ತರಲಾಗುವುದು. ಮುಂದಿನ ಚುನಾವಣೆಯಲ್ಲಿ ಲಿಂಗಾಯತರೆಲ್ಲರೂ ಒಗ್ಗಟ್ಟಾಗಿ ಅವರಿಗೆ ತಕ್ಕಪಾಠ ಕಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ, ಪ್ರೊ. ಜಿ.ಬಿ. ಹಳ್ಯಾಳ, ಎಸ್. ವಿ. ಜೋಡಳ್ಳಿ ಇತರರಿದ್ದರು.