ಹುಬ್ಬಳ್ಳಿ: ಬೆಳಗಾವಿ ಅಧಿವೇಶನದಲ್ಲಿ ನೀರಾವರಿ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲಾ ಸಮಸ್ಯೆಗಳ ವಿಚಾರವಾಗಿ ಚರ್ಚೆ ಮಾಡಲು ನಾವು ಸಿದ್ಧರಿದ್ದೆವು. ಆದರೆ ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹರಿಹಾಯ್ದರು.
ಡಿ. 15ರ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಲ್ಲಿ ಯಾವುದೇ ಒಗ್ಗಟ್ಟಿಲ್ಲ. ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಮಾಡಲು ಅವರೇ ಸಿದ್ಧರಿಲ್ಲ ಎಂದರು.
ಮಹದಾಯಿ ಯೋಜನೆ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಿದೆ. ಟೆಂಡರ್ ಕರೆಯುವ ವಿಚಾರವಾಗಿ ನಾವು ಈಗಾಗಲೇ ಎಲ್ಲವನ್ನೂ ಸಿದ್ಧ ಮಾಡಿಕೊಂಡಿದ್ದೇವೆ. ಸಂಸದ ಜಗದೀಶ ಶೆಟ್ಟರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇದರ ಬಗ್ಗೆ ಗಮನಹರಿಸಬೇಕು. ಯಾಕೆಂದರೆ ಅವರೇ ಈ ಮೊದಲು ವಿಜಯೋತ್ಸವ ಮಾಡಿದ್ದು, ಅವರಿಂದ ಸಣ್ಣ ಅರಣ್ಯ ಅನುಮತಿ ಸಿಗುವ ಭರವಸೆ ಇದೆ ಎಂದು ಕುಟುಕಿದರು.
ಮಹದಾಯಿಗೆ ಸಂಬಂಧಿಸಿ ಕೇಂದ್ರ ಅರಣ್ಯ ಸಚಿವರು, ಪ್ರಹ್ಲಾದ ಜೋಶಿ ಅವರನ್ನು ಸಹ ಭೇಟಿ ಮಾಡಿದ್ದೇನೆ. ಅವರು ಅನುಮತಿ ಕೊಡುತ್ತಾರೆಂದು ಕಾಯುತ್ತಿದ್ದೇವೆ. ಅನುಮತಿ ಸಿಕ್ಕರೆ ಕಾಮಗಾರಿ ಆರಂಭ ಮಾಡಲಿದ್ದೇವೆ ಎಂದರು.
ಕೋವಿಡ್ ಹಗರಣಕ್ಕೆ ಸಂಬಂಧಿಸಿ ಎಫ್ಐಆರ್ ವಿಚಾರವಾಗಿ ಮಾತನಾಡುತ್ತ, ಮೈಕಲ್ ಡಿ. ಕುನ್ಹಾ ವರದಿ ಕೊಟ್ಟಿದ್ದಾರೆ. ಅದರ ಆಧಾರ ಮೇಲೆ ಎಫ್ಐಆರ್ ಮಾಡಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ಆನಂತರ ಕ್ರಮ ಕೈಗೊಳ್ಳಲಾಗುವುದು. ನಾವೇನು ಅದನ್ನು ಮಾಡಬೇಕಿಲ್ಲ. ಬಿಜೆಪಿಯವರು ಏನು ಮಾಡುತ್ತಾರೆ ನೋಡೋಣ ಎಂದರು.