Advertisement

ಘನ ತ್ಯಾಜ್ಯ ಸೇವಾ ಶುಲ್ಕ ವಿಧಿಸಲು ಸಕಾಲವೇ ?

12:55 PM Dec 09, 2020 | Suhan S |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸೇವಾ ಶುಲ್ಕವನ್ನು ಮುಂದಿನ ಜನವರಿಯಿಂದ ವಿಧಿಸಲು ಪಾಲಿಕೆ ತೀರ್ಮಾನಿಸಿದೆ. ಆದರೆ, ಸೇವಾ ಶುಲ್ಕ ವಿಧಿಸುವ ಮುನ್ನ ತ್ಯಾಜ್ಯ ಉತ್ಪಾದಕರ ಸರ್ವೆ ಕಾರ್ಯ ಮಾಡದೆ, ಬೆಸ್ಕಾಂನ ಮಾಹಿತಿಯ ಆಧಾರದ ಮೇಲೆ ಸೇವಾ ಶುಲ್ಕ ವಿಧಿಸಲು ಪಾಲಿಕೆ ಮುಂದಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

Advertisement

“ನಗರದಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಸೇವಾ ಶುಲ್ಕ ಪ್ರಾರಂಭಿಸುವುದು ಪಾಲಿಕೆಗೆ ಮುಳುವಾಗಲಿದೆ’ ಎಂದು ಘನತ್ಯಾಜ್ಯ ನಿರ್ವಹಣಾ ತಾಂತ್ರಿಕ ಸಮಿತಿ ಸದಸ್ಯ ಡಾ. ಎಚ್‌.ಸಿ. ಶರತ್‌ಚಂದ್ರ ಎಚ್ಚರಿಸುತ್ತಾರೆ.

ಗ್ರಾಹಕರ ವೇದಿಕೆಗೆ ಹೋಗುವ ಸಾಧ್ಯತೆ: “ಸೇವಾ ಶುಲ್ಕ ವಿಧಿಸುವುದು ಪ್ರಾರಂಭಿಸಿದ ಮೇಲೆ ಪಾಲಿಕೆ ತನ್ನ ಸೇವೆಯಲ್ಲಿ ವ್ಯತ್ಯಾಸ ಮಾಡುವಂತಿಲ್ಲ. ಈಗಾಗಲೇ ನಗರದಲ್ಲಿ ಪಾಲಿಕೆಕಸ ಸಂಗ್ರಹ ಮಾಡುವುದರಲ್ಲಿ ನಿರ್ದಿಷ್ಟ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಸೇವಾ ಶುಲ್ಕ ಪ್ರಾರಂಭಿಸುವ ಮುನ್ನ ವ್ಯವಸ್ಥೆ ಸರಿಪಡಿಸಿಕೊಳ್ಳದೆ ಇದ್ದರೆ ಸಾರ್ವಜನಿಕರು ಗ್ರಾಹಕರ ವೇದಿಕೆಗೆ ಹೋಗುವ ಸಾಧ್ಯತೆಯೂ ಇದೆ’ಎಂದು ಅಭಿಪ್ರಾಯಪಟ್ಟರು.

ನಿರ್ದಿಷ್ಟ ಬಳಕೆದಾರರಿಗೆ ಅನುಸಾರವಾಗಿ ಸೇವಾ ಶುಲ್ಕ: ಸೇವಾಶುಲ್ಕ ಪ್ರಾರಂಭ ಮಾಡುವುದಕ್ಕೂ ಮುನ್ನ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪವಿಧಿ -2019ರಲ್ಲಿ ಉಲ್ಲೇಖ ಮಾಡಿರುವಂತೆ ನಗರದಲ್ಲಿನ ಗೃಹ, ವಾಣಿಜ್ಯ ಹಾಗೂ ಸಾಂಸ್ಥಿಕ ತ್ಯಾಜ್ಯ ಉತ್ಪಾದಕರ ವಿವರಗಳನ್ನು ಸಂಗ್ರಹ ಮಾಡಿಕೊಂಡು ನಿರ್ದಿಷ್ಟ ಬಳಕೆದಾರರಿಗೆ ಅನುಸಾರವಾಗಿ ಸೇವಾ ಶುಲ್ಕ ಸಂಗ್ರಹ ಮಾಡಬೇಕು. ಆದರೆ, ಈ ನಿಟ್ಟಿನಲ್ಲಿ ಪಾಲಿಕೆಯಿಂದ ಸರ್ವೆ ಕಾರ್ಯವೇ ಆಗಿಲ್ಲ. ಇದರೊಂದಿಗೆ ಸಾರ್ವಜನಿಕರಿಂದ ಸಂಗ್ರಹವಾಗುವ ಸೇವಾ ಶುಲ್ಕವನ್ನು ಕೇವಲ ಕಸ ನಿರ್ವಹಣೆಗೆ ಮಾತ್ರ ಬಳಸಿಕೊಳ್ಳಬೇಕು ಎನ್ನುವ ಅಂಶಗಳು ಪಾಲಿಕೆಯ ಬೈಲಾದಲ್ಲೇ ಇದೆ. ಸೇವಾ ಶುಲ್ಕದ ಪ್ರತಿ ಪೈಸೆಗೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಆದರೆ, ಈ ನಿಟ್ಟಿನಲ್ಲಿ ಪಾಲಿಕೆ ಇನ್ನಷ್ಟೇ ಕಾರ್ಯ  ಪ್ರವೃತ್ತವಾಗಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಪಾರ್ಥಿವ್ ಪಟೇಲ್

Advertisement

ಕಾಳಜಿ ಇಲ್ಲದ ಬಿಬಿಎಂಪಿ,ಆರೋಪ: “ಜನ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ಸಂಗ್ರಹ ಮಾಡಲು ಪಾಲಿಕೆ ಮತ್ತು ಸರ್ಕಾರ ಮುಂದಾಗಿರುವುದು ಬಡವರ ಬಗ್ಗೆ ಕಾಳಜಿ ಇಲ್ಲ ಎನ್ನುವುದು ತೋರಿಸುತ್ತದೆ. ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಪಾಲಿಕೆ ಮತ್ತು ಸರ್ಕಾರ ಸಹಾಯಕ್ಕೆ ನಿಲ್ಲಬೇಕು. ಆದರೆ, ಸಾರ್ವಜನಿಕರಿಂದ ಎಷ್ಟು ಹಣ ದೋಚಲು ಸಾಧ್ಯವಿದೆಯೋ ಎಲ್ಲ ಮಾರ್ಗಗಳನ್ನು ಸರ್ಕಾರ ಬಳಸುತ್ತಿದೆ’ ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್‌ ವಾಜಿದ್‌ ಆರೋಪಿಸಿದ್ದಾರೆ.

ಬೆಸ್ಕಾಂಗೆ ಶೇ.5ರಷ್ಟು ಶುಲ್ಕ ಸಾರ್ವಜನಿಕರು ಏಕೆ ನೀಡಬೇಕು?: ನಗರ‌ದಲ್ಲಿ ಸಾರ್ವಜನಿಕರಿಂದ‌ ಘನತ್ಯಾಜ್ಯ ಸೇವಾ ಶುಲ್ಕವನ್ನು ¸ ಬೆಸ್ಕಾಂನ ಮೂಲಕ ‌ ಸಂಗ್ರಹ ಮಾಡಲು ಪಾಲಿಕೆ ನಿರ್ಧರಿಸಿದೆ. ಈ ಸೇಗಾಗಿ ಬೆಸ್ಕಾಂಗೆ ಶೇ.5ರಷ್ಟು ಸೇವಾ ಶುಲ್ಕ ನೀಡಲು ಪಾಲಿಕೆ ನಿರ್ಧರಿಸಿದೆ.ಈ ವಿಷಯವೂ ಇದೀಗ ಚರ್ಚೆಗೆ ಕಾರಣವಾಗಿದೆ. ಪಾಲಿಕೆಯೆ ಸೇವಾ ಶುಲ್ಕ ಸಂಗ್ರಹ ಮಾಡಿದರೆ ಶೇ.5ರಷ್ಟು ಶುಲ್ಕ ಉಳಿತಾಯವಾಗ ‌ಲಿದೆ. ಅಲ್ಲದೆ, ಜನ ನೀಡುವ ಸೇವಾ ಶುಲ್ಕವನ್ನು ಅನವಶ್ಯಕ ‌ವಾಗಿ ಬೆಸ್ಕಾಂಗೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭ‌ವಾಗಿದೆ. ಬೆಸ್ಕಾಂ ಬಳಿ ಇರುವ ಮಾಹಿತಿ (ಡಾಟಾ)ಆಧಾರದ ಮೇಲೆ ಸೇವಾ ಶುಲ್ಕ ಸಂಗ್ರಹ ಮಾಡಲು ನಿರ್ಧರಿಸಿದ್ದು, ಇದು ಸಹ ಗೊಂದಲಕ್ಕೆ ಕಾರಣವಾಗುವ ‌ಸಾಧ್ಯತೆ ಇದೆ.

ಮೊದಲ ಹಂತದಲ್ಲಿ ಬೆಸ್ಕಾಂ ಮಾಹಿತಿಯೇ ಬಳಕೆ :  ಪಾಲಿಕೆ ವ್ಯಾಪ್ತಿಯಲ್ಲಿ ಜನವರಿಯಿಂದ ಬೆಸ್ಕಾಂ ಡೇಟಾ ಆಧಾರದ ಮೇಲೆ ಸೇವಾ ಶುಲ್ಕ ವಿಧಿಸುತ್ತೇವೆ . ಮುಂದಿನ ಮೂರು ತಿಂಗಳಲ್ಲಿಕಸ ಉತ್ಪಾದಕರ ಸರ್ವೆ ಮುಗಿಸುತ್ತೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್‌ ತಿಳಿಸಿದರು. ಬೆಸ್ಕಾಂ ಡೇಟಾ ಆಧಾರದ ಮೇಲೆ ಮೊದಲ ಹಂತದಲ್ಲಿ ಸೇವಾ ಶುಲ್ಕ ಸಂಗ್ರಹ ಮಾಡುತ್ತೇವೆ. ಈಗಾಗಲೇ ಗೃಹ ತ್ಯಾಜ್ಯ ಉತ್ಪಾದಕರಿಗೆ 200 ರೂ. ಎಂದು ನಿಗದಿ ಮಾಡಿರುವುದರಿಂದ ಇದರಲ್ಲಿ ಗೊಂದಲ ಇಲ್ಲ. ವಾಣಿಜ್ಯ ತ್ಯಾಜ್ಯ ಉತ್ಪಾದಕ ವರ್ಗೀಕರಣ ಮಾಡಬೇಕಿದೆ. ಮೊದಲ ಹಂತದಲ್ಲಿ ಬೆಸ್ಕಾಂ ಡೇಟಾ ಆಧಾರದ ಮೇಲೆ ನಾಲ್ಕು ಪ್ರಮುಖ ವಾಣಿಜ್ಯ ತ್ಯಾಜ್ಯ ಉತ್ಪಾದಕರ ವರ್ಗೀಕರಣಮಾಡಿಕೊಂಡು ಸೇವಾ ಶುಲ್ಕ ಪ್ರಾರಂಭಿಸುತ್ತೇವೆ ಸರ್ವೆ ಮಾಡಿದ ಮೇಲೆ ಶುಲ್ಕ ಮೊತ್ತ ಬದಲಾಯಿಸುತ್ತೇವೆ ಎಂದು”ಉದಯವಾಣಿ’ಗೆ ಮಾಹಿತಿ ನೀಡಿದರು.

ಸೇವಾ ಶುಲ್ಕದ ಮೂಲ ಉದ್ದೇಶ ಏನು ? :  ನಗರದಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ಮಾಡುವುದಕ್ಕೆ ಪಾಲಿಕೆ ಪ್ರತಿ ವರ್ಷ ಅಂದಾಜು ಒಂದು ಸಾವಿರ ಕೋಟಿ ರೂ. ಗಿಂತ ಅಧಿಕ ವಾಗಿಖರ್ಚು ಮಾಡುತ್ತಿದೆ. ಆದರೆ, ‌ಇದೇ ಪ್ರಮಾಣದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹವಾಗುತ್ತಿಲ್ಲ.ಕಸ ಸಂಗ್ರಹ ಮಾಡುವ ಗುತ್ತಿಗೆದಾರರಿಗೂ ಕಳೆದ ಎಂಟು ತಿಂಗಳಿನಿಂದ ಪಾಲಿಕೆ ಹಣಪಾವತಿ ಮಾಡಿಲ್ಲ. ಅಲ್ಲದೆ, ಕಸ ನಿರ್ವಹಣೆಯ ವಿವಿಧ ಹಂತಗಳ ಸುಧಾರಣೆಗೆ ಸೇವಾ ಶುಲ್ಕ ಅವಶ್ಯ ಎನ್ನುವುದು ಪಾಲಿಕೆಯ ವಾದವಾಗಿದೆ.

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next