ಬೆಂಗಳೂರು: ಟ್ಯೂಷನ್ಗೆಂದು ಬರುತ್ತಿದ್ದ 16 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ಪುಸಲಾಯಿಸಿ ಶಿಕ್ಷಕನೇ ಕರೆದೊಯ್ದಿರುವ ಪ್ರಕರಣ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಕನಕಪುರ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಪಾಲಕರು ನೀಡಿದ ದೂರಿನ ಅನ್ವಯ ಶಿಕ್ಷಕ ಅಭಿಷೇಕ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಅಭಿಷೇಕ್ ಖಾಸಗಿಯಾಗಿ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯೂ ಇಲ್ಲಿ ಟ್ಯೂಷನ್ ಪಡೆಯುತ್ತಿದ್ದಳು. ಈ ನಡುವೆ ಶಿಕ್ಷಕ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಕಳೆದ ನ.23 ರಂದು ಟ್ಯೂಷನ್ನಿಂದ ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ಬಾರದಿದ್ದಾಗ ಆಕೆಯ ಪೋಷಕರು ಟ್ಯೂಷನ್ ಸೆಂಟರ್ ಬಳಿ ಹೋಗಿ ವಿಚಾಸಿದ್ದರು. ಆ ವೇಳೆ ಶಿಕ್ಷಕ ಅಭಿಷೇಕ್ ಕರೆದು ಕೊಂಡು ಹೋಗಿರುವುದಾಗಿ ಅಲ್ಲಿದ್ದವರು ಹೇಳಿದ್ದರು. ನಂತರ ಪಾಲಕರು ಅಭಿಷೇಕ್ ಮೊಬೈಲ್ ಸಂಪರ್ಕಿಸಿ ದಾಗ ರೂಮ್ನಲ್ಲಿ ಮೊಬೈಲ್ ಬಿಟ್ಟು ವಿದ್ಯಾರ್ಥಿನಿ ಜೊತೆಗೆ ಹೋಗಿರುವುದು ಕಂಡು ಬಂದಿತ್ತು.
ವಿದ್ಯಾರ್ಥಿನಿ ಪೋಷಕರು ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತ ಪೊಲೀಸರಿಗೆ ಸಿಕ್ಕಿ ಬೀಳಬಾರದು ಎಂಬ ಉದ್ದೇಶದಿಂದ ಶಿಕ್ಷಕ ಅಭಿಷೇಕ್ ಘಟನೆ ಬಳಿಕ ಫೋನ್, ಫೋನ್ ಪೇ, ಗೂಗಲ್ ಪೇ, ಎಟಿಎಂ ಸೇರಿದಂತೆ ಯಾವುದೇ ಆನ್ಲೈನ್ ವಹಿ ವಾಟು ನಡೆಸಿಲ್ಲ ಎಂದು ತಿಳಿದು ಬಂದಿದೆ. ರಾಮ ನಗರ, ಕನಕಪುರ ಸೇರಿ ರಾಜ್ಯದ ಹಲವೆಡೆ ಕಳೆದ ಹಲವು ದಿನಗಳಿಂದ ಪೊಲೀಸರು ಇಬ್ಬರಿಗೂ ಹುಡು ಕಾಟ ನಡೆಸಿ ಸುಸ್ತಾಗಿದ್ದಾರೆ ಎಂದು ತಿಳಿದು ಬಂದಿದೆ.
ಸುಳಿವು ಕೊಟ್ಟವರಿಗೆ 25000 ರೂ. ಬಹುಮಾನ ಘೋಷಣೆ
ಆರೋಪಿ ಅಭಿಷೇಕ್ಗಾಗಿ ಹಲವು ದಿನಗಳಿಂದ ಪೊಲೀಸರು ತಲಾಶ್ ನಡೆಸುತ್ತಿದ್ದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಹೀಗಾಗಿ ಅಭಿಷೇಕ್ ಸುಳಿವು ನೀಡಿದರೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆ ಹೊರಡಿಸಲಾಗಿದೆ.