Advertisement

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

12:31 PM Jan 05, 2025 | Team Udayavani |

ವಿಷದಿಂದಾಗಿ ತೊಂದರೆಗೆ ಈಡಾಗಿರುವ ರೋಗಿಗಳ ನಿರ್ವಹಣೆಯ ಕಾರ್ಯತಂತ್ರವನ್ನು ರೂಪಿಸಲು ವೈದ್ಯರು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಗೆ ಸಹಾಯ ಮಾಡುವುದು ಹಾಗೂ ಇಂತಹ ಸಂದರ್ಭಗಳಲ್ಲಿ ಅಗತ್ಯವಾದ ಪ್ರಾಥಮಿಕ ಚಿಕಿತ್ಸೆಯನ್ನು ಆರಂಭಿಸುವುದಕ್ಕಾಗಿ ಸಾರ್ವಜನಿಕರಿಗೆ ನೆರವಾಗುವುದಕ್ಕಾಗಿ ಮಣಿಪಾಲ ವಿಷ ಮಾಹಿತಿ ಕೇಂದ್ರವನ್ನು ಆರಂಭಿಸಲಾಯಿತು.

Advertisement

2013ರಲ್ಲಿ ಆರಂಭಗೊಂಡಿರುವ ಇದು ಶ್ರೇಷ್ಠತಾ ಕೇಂದ್ರಗಳಲ್ಲಿ ಒಂದಾಗಿದೆ. ವಿಷದಂಶನ/ ವಿಷಪ್ರಾಶನ ಪ್ರಕರಣಗಳನ್ನು ಆದಷ್ಟು ಬೇಗನೆ ಪತ್ತೆಹಚ್ಚಿ ವೈದ್ಯಕೀಯ ನಿರ್ವಹಣೆಗೆ ಒಳಪಡಿಸುವುದು ಅತ್ಯಂತ ಮುಖ್ಯವಾಗಿದೆ, ಇಲ್ಲವಾದಲ್ಲಿ ಬಹುತೇಕ ಪ್ರಕರಣಗಳು ಮಾರಣಾಂತಿಕವಾಗುವ ಸಾಧ್ಯತೆಯೇ ಅಧಿಕ.

ಉಡುಪಿ ಮತ್ತು ನೆರೆಯ ಜಿಲ್ಲೆಗಳ ವೈದ್ಯರ ಅಗತ್ಯಗಳಿಗೆ ತಕ್ಕುದಾಗಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದಲ್ಲಿ ಇಂತಹ ಏಕೈಕ ಕೇಂದ್ರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ವಿಷ ಮಾಹಿತಿ ಕೇಂದ್ರಗಳ ನಕಾಶೆಯಲ್ಲಿ ಈ ಕೇಂದ್ರವು ಕೂಡ ಗುರುತಿಸಲ್ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಕಾಶೆಯಲ್ಲಿ ಗುರುತಿಸಲ್ಪಟ್ಟ ಕೇಂದ್ರಗಳು ಭಾರತದಲ್ಲಿರುವುದು ಕೆಲವೇ ಕೆಲವು.

ವಿಷದಂಶನ/ ವಿಷಪ್ರಾಶನ ಪ್ರಕರಣಗಳನ್ನು ಆದಷ್ಟು ಬೇಗನೆ ಗುರುತಿಸಿ ವೈದ್ಯಕೀಯ ನಿರ್ವಹಣೆಗೆ ಒಳಪಡಿಸಲು ಸಹಾಯ ಮಾಡುವುದು ಈ ಕೇಂದ್ರದ ಪ್ರಧಾನ ಉದ್ದೇಶವಾಗಿದೆ. ಕೇಂದ್ರವು ದಿನದ ಇಪ್ಪತ್ತನಾಲ್ಕು ಗಂಟೆಗಳು ಕೂಡ ಕಾರ್ಯನಿರ್ವಹಿಸುತ್ತಿದ್ದು, ಸುತ್ತಲಿನ ವೈದ್ಯರಿಗೆ ಕೇಂದ್ರದ ನೆರವು ಅಗತ್ಯವಾದಾಗಲೆಲ್ಲ ಒದಗಿಸುತ್ತದೆ. ಸಾರ್ವಜನಿಕರು ಮತ್ತು ಸ್ಥಳೀಯ ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುವ, ಸಂದೇಹಗಳನ್ನು ನಿವಾರಿಸುವ, ಸಹಾಯ ಒದಗಿಸುವ ಮೀಸಲು ದೂರವಾಣಿ ಕೇಂದ್ರದಲ್ಲಿದೆ. ಅಪರಿಚಿತ ವಿಷ ಪ್ರಕರಣಗಳಲ್ಲಿ ರೋಗ ಲಕ್ಷಣಗಳನ್ನು ಆಧರಿಸಿ ವೈದ್ಯರಿಗೆ ಮುಂದಿನ ವೈದ್ಯಕೀಯ ನಿರ್ವಹಣೆ ಪ್ರಕ್ರಿಯೆಯನ್ನು ರೂಪಿಸುವುದಕ್ಕೆ ಸಹಾಯ ಮಾಡುವ ಸಂಭಾವ್ಯ ಪ್ರತಿ ವಿಷ ಅಥವಾ ಸಂಯುಕ್ತಗಳನ್ನು ಈ ಕೇಂದ್ರದ ಮೂಲಕ ಶಿಫಾರಸು ಮಾಡಲಾಗುತ್ತದೆ.

ಶಂಕಿತ ವಿಷ ಪ್ರಕರಣಗಳ ಗುಣದರ್ಜೆ ಮತ್ತು ಪ್ರಮಾಣ ಅಂದಾಜು ಕಾರ್ಯವನ್ನು ಕೂಡ ಮಣಿಪಾಲ ವಿಷ ಮಾಹಿತಿ ಕೇಂದ್ರದಲ್ಲಿ ನಡೆಸಲಾಗುತ್ತದೆ. ಕೇಂದ್ರದಲ್ಲಿ ಯಾವ ಮಾಡುವುದಕ್ಕಾಗಿ ಕಲರ್‌ ಪರೀಕ್ಷೆಗಳು ಮತ್ತು ಥಿನ್‌ ಲೇಯರ್‌ ಕ್ರೊಮಾಟೊಗ್ರμ (ಟಿಎಲ್‌ಸಿ) ಪರೀಕ್ಷೆಗಳನ್ನು ನಡೆಸುವ ಸೌಲಭ್ಯವಿದೆ. ಜತೆಗೆ ಪತ್ತೆ ಮಾಡಲಾದ ವಿಷದ ಪ್ರಮಾಣವನ್ನು ತಿಳಿಯಲು ಗ್ಯಾಸ್‌ ಕ್ರೊಮಾಟೋಗ್ರμ ಮಾಸ್‌ ಸ್ಪೆಕ್ಟ್ರೊಮೆಟ್ರಿ (ಜಿಸಿ-ಎಂಎಸ್‌) ಸೌಲಭ್ಯವಿದೆ. ವಿಷ ಪ್ರಕರಣಗಳ ಮಾದರಿ ತಲುಪುವ ಸಮಯ 24 ತಾಸುಗಳಾಗಿರುವ ಹಿನ್ನೆಲೆಯಲ್ಲಿ ವೈದ್ಯರು ಆದಷ್ಟು ಬೇಗನೆ ಚಿಕಿತ್ಸೆಯನ್ನು ಆರಂಭಿಸುವುದಕ್ಕಾಗಿ ಸಂಭಾವ್ಯ ವಿಷದ ಪ್ರಾಥಮಿಕ ಮಾಹಿತಿಯನ್ನು ಶೀಘ್ರವಾಗಿ ಒದಗಿಸಲಾಗುತ್ತದೆ.

Advertisement

ಇದಕ್ಕಾಗಿ ಬಹಳ ಕನಿಷ್ಠ ಶುಲ್ಕವನ್ನು ವಿಧಿಸಲಾಗುತ್ತದೆ. ಕ್ರಿಮಿ/ಕೀಟನಾಶಕಗಳ ಪತ್ತೆ ಪರೀಕ್ಷೆಗಳನ್ನು ಪೆಸ್ಟಿಸೈಡ್‌ ಪ್ಯಾನೆಲ್‌ಗ‌ಳ ಮೂಲಕ ಮತ್ತು ಸಾಲಿಸೈಲೇಟ್‌ಗಳು, ಮೆಥನಾಲ್‌, ಎಥನಾಲ್‌, ಸೈನೈಡ್‌, ಪ್ಯಾರಾಸಿಟಮಾಲ್‌ ಇತ್ಯಾದಿ ಅಪರಿಚಿತ ಸಂಯುಕ್ತಗಳ ಪತ್ತೆಗಾಗಿ ಪರೀಕ್ಷೆಗಳನ್ನು ಕೂಡ ಇಲ್ಲಿ ನಡೆಸಲಾಗುತ್ತದೆ.

ಇವೆಲ್ಲವುಗಳ ಜತೆಗೆ ಮಾದಕ ದ್ರವ್ಯಗಳಾಗಿರುವ ಮರಿಜುವಾನಾ, ಬಾರ್ಬಿಟ್ಯುರೇಟ್ಸ್‌, ಬೆಂಜೊಡಯಾಜಪೈನ್‌ ಗಳು, ಮಾರ್ಫಿನ್‌ಗಳ ಪತ್ತೆಯನ್ನು ಇಲ್ಲಿ ಮೂತ್ರದ ಮಾದರಿಯ ಮೇಲೆ ಲ್ಯಾಟರಲ್‌ ಫ್ಲೋ ಇಮ್ಯುನೊಕ್ರೊಮಾಟೊಗ್ರಫಿಕ್‌ ಅಸೇ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ. ಈ ವಿಧಾನದ ಮೂಲಕ 16 ಮಾದಕ ದ್ರವ್ಯಗಳನ್ನು ಏಕಕಾಲದಲ್ಲಿ ಪತ್ತೆಹಚ್ಚಬಹುದಾಗಿದೆ. ವಿಷಗಳ ಉಪಸ್ಥಿತಿಯ ಪತ್ತೆಗಾಗಿ ರಕ್ತ, ಮೂತ್ರ, ಹೊಟ್ಟೆಯ ಅಂಶಗಳು ಮತ್ತು ಪ್ರಕರಣ ನಡೆದ ಸ್ಥಳದ ಉಳಿಕೆಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಕೇಂದ್ರದಲ್ಲಿ ವಿಷ ಪರೀಕ್ಷೆ ಬೇಡಿಕೆ ನಮೂನೆ (ಟಿಆರ್‌ಎಫ್)ಯನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಸ್ವಯಂ ಪರಿಪೂರ್ಣವಾಗಿದೆಯಲ್ಲದೆ ಮಾದರಿಗಳ ಜತೆಗೆ ಅಗತ್ಯವಾಗಿರುವ ಮಾಹಿತಿಗಳನ್ನು ಸಂಗ್ರಹಿಸಿಕೊಡುತ್ತದೆ. ಶಂಕಿತ ಮಾದರಿಗಳ ಸಮೂಹಕ್ಕೆ ಅಗತ್ಯವಾಗಿರುವ ನಿರ್ದಿಷ್ಟ ಮಾದರಿ, ಅಗತ್ಯವಾಗಿರುವ ಮಾದರಿ ಪ್ರಮಾಣ, ಅಪರಿಚಿತ ವಿಷಗಳಾಗಿದ್ದರೆ ವೈದ್ಯಕೀಯ ಲಕ್ಷಣಗಳು, ಮಾದರಿ ಸಂಗ್ರಹ ಮತ್ತು ಅದನ್ನು ಸ್ವೀಕರಿಸಿದ ಸಮಯ ಇತ್ಯಾದಿ ಎಲ್ಲ ಮಾಹಿತಿಗಳು ಕೂಡ ಈ ನಮೂನೆಯಲ್ಲಿ ಒಳಗೊಂಡಿವೆ.

ಚಿಕಿತ್ಸೆಯ ಉದ್ದೇಶಗಳ ಜತೆಗೆ ಈ ವಿವಿಧ ಪರೀಕ್ಷೆಗಳನ್ನು ಕಾರ್ಖಾನೆಗಳಲ್ಲಿ ಮತ್ತು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ನಿಯಮಿತ ಆರೋಗ್ಯ ಸ್ಥಿತಿಗತಿ ವಿಶ್ಲೇಷಣೆಗಾಗಿ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಸಂದರ್ಭದಲ್ಲಿ ವೀಸಾ ಉದ್ದೇಶಕ್ಕಾಗಿ ನಡೆಸಲಾಗುತ್ತದೆ.

ಮಣಿಪಾಲ ವಿಷ ಮಾಹಿತಿ ಕೇಂದ್ರವು ರೋಗಿಗಳ ವಿಷ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಸಹಾಯ ಮಾಡುವುದಷ್ಟೇ ಅಲ್ಲದೆ ಇತರ ಕರ್ತವ್ಯಗಳನ್ನು ಕೂಡ ನಿರ್ವಹಿಸುತ್ತದೆ. ಅನಾಲಿಟಿಕಲ್‌ ಟಾಕ್ಸಿಕಾಲಜಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ, ಪತ್ತೆ ಮಾಡಲು ಸಾಧ್ಯವಿರುವ ವಿಷಗಳ ಪಟ್ಟಿಯನ್ನು ವಿಸ್ತರಿಸುವುದಕ್ಕಾಗಿ ಸಂಶೋಧನಾ ಚಟುವಟಿಕೆಗಳು ಕೂಡ ಇಲ್ಲಿ ನಡೆಯುತ್ತವೆ.

ತನ್ನ ಸಂಶೋಧನಾ ಚಟುವಟಿಕೆಯ ಭಾಗವಾಗಿ ಮಣಿಪಾಲ ವಿಷ ಮಾಹಿತಿ ಕೇಂದ್ರವು ರೈತರು ವಿವಿಧ ಕ್ರಿಮಿ/ ಕೀಟನಾಶಕಗಳಿಗೆ ಗೊತ್ತಿಲ್ಲದೆ ಒಡ್ಡಿಕೊಳ್ಳುವ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ವಿಷ ಮತ್ತು ಸಂಭಾವ್ಯ ವಿಷ ವಸ್ತುಗಳ ಸುರಕ್ಷಿತ ನಿರ್ವಹಣೆ, ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿರುವ ರೈತರಿಗೆ ರಾಸಾಯನಿಕಗಳ ಆರೋಗ್ಯ ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ವಿಷ ಪತ್ತೆ ಮತ್ತು ಆರೋಗ್ಯ ತಪಾಸಣೆ ಶಿಬಿರಗಳ ಆಯೋಜನೆ ಈ ಕೇಂದ್ರದ ಇತರ ಚಟುವಟಿಕೆಗಳಾಗಿವೆ.

ಇದಲ್ಲದೆ ಕರ್ನಾಟಕ ರಾಜ್ಯ ಸರಕಾರದ ಖಾಸಗಿ ಪಾಲುದಾರಿಕೆಯೊಂದಿಗೆ ಸಾರ್ವಜನಿಕರಲ್ಲಿ ವಿಷಗಳ ದೀರ್ಘ‌ಕಾಲೀನ ಪರಿಣಾಮವಾಗಿ ಉಂಟಾಗುವ ಎಪಿಜೆನೆಟಿಕ್‌ ಬದಲಾವಣೆಗಳ ಬಗ್ಗೆ ವಂಶವಾಹಿ ಅಧ್ಯಯನ, ಮೆಡಿಕೊ ಲೀಗಲ್‌ ಪ್ರಕರಣಗಳಲ್ಲಿ ಪೊಲೀಸರಿಗೆ ಸಹಾಯ ಹಾಗೂ ಆತ್ಮಹತ್ಯೆ/ ಅಕಸ್ಮಾತ್‌ ವಿಷಪ್ರಾಶನ/ ವಿಶದಂಶನ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ನೆರವಾಗುವುದು ಕೂಡ ಮಣಿಪಾಲ ವಿಷ ಮಾಹಿತಿ ಕೇಂದ್ರದ ಕಾರ್ಯಚಟುವಟಿಕೆಗಳಲ್ಲಿ ಸೇರಿದೆ.

ಡಾ| ಶಂಕರ್‌ ಎಂ. ಬಕ್ಕಣ್ಣವರ್‌

ಪ್ರೊಫೆಸರ್‌

ಫೊರೆನ್ಸಿಕ್‌ ಮೆಡಿಸಿನ್‌ ಮತ್ತು ಟಾಕ್ಸಿಕಾಲಜಿ ವಿಭಾಗ

-ಡಾ| ವಿನುತಾ ಆರ್‌. ಭಟ್‌

ಅಸೋಸಿಯೇಟ್‌ ಪ್ರೊಫೆಸರ್‌

ಬಯೊಕೆಮೆಸ್ಟ್ರಿ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಮರ್ಜೆನ್ಸಿ ಮೆಡಿಸಿನ್‌ ಮತ್ತು ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next