Advertisement

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

02:52 PM Jan 04, 2025 | Team Udayavani |

3 ತಿಂಗಳಿಗೊಮ್ಮೆ ಲೋಕೋಪಯೋಗಿ, ಸಾರಿಗೆ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಜತೆ ಸಂಚಾರ ಪೊಲೀಸರಿಂದ ಅಪಘಾತಗಳ ಸಮೀಕ್ಷೆ

Advertisement

ಬೆಂಗಳೂರು: ಐಟಿ-ಬಿಟಿ ಸಿಟಿ, ಸಿಲಿಕಾನ್‌ ಸಿಟಿ, ಉದ್ಯಾನನಗರಿ ಎಂಬ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿಯಲ್ಲಿ ಬರೋಬ್ಬರಿ 1.19 ಕೋಟಿ ರೂ. ವಾಹನಗಳಿದ್ದು, ರಸ್ತೆ ಅಪಘಾತಗಳಲ್ಲೂ ಕರ್ನಾಟಕದಲ್ಲೇ ಮುಂಚೂಣಿ ಸ್ಥಾನ ಪಡೆದು ಕೊಂಡಿದೆ. 2024ರಲ್ಲಿ ಇಲ್ಲಿನ ವಿವಿಧ ಭಾಗಗಳಲ್ಲಿ ಸಂಭವಿಸಿದ ರಸ್ತೆ ಅಪಘಾತವು 802 ಮಂದಿಯನ್ನು ಬಲಿ ಪಡೆದು ಕೊಂಡಿದ್ದು, ಇದು ಬೆಂಗಳೂರಿನ ಆಕ್ಸಿಡೆಂಟ್‌ಗಳ ಭೀಕರತೆಗೆ ಸಾಕ್ಷಿಯಾಗಿದೆ. ಇದನ್ನು ಗಂಭೀರ ವಾಗಿ ಪರಿಗಣಿಸಿರುವ ಬೆಂಗಳೂರು ಟ್ರಾಫಿಕ್‌ ಪೊಲೀಸರು ಪದೇ ಪದೇ ರಸ್ತೆ ಅಪಘಾತ ಸಂಭವಿಸುವ 64 ಸ್ಥಳಗಳನ್ನು ಬ್ಲ್ಯಾಕ್‌ಸ್ಪಾಟ್‌ (ಅಪಘಾತದ ಕಪ್ಪು ಚುಕ್ಕೆ) ಎಂದು ಗುರುತಿಸಿದ್ದಾರೆ!

ಬೆಂಗಳೂರಿನಲ್ಲಿ ಪ್ರತಿನಿತ್ಯ 2,100 ಹೊಸ ವಾಹನಗಳು ನೋಂದಣಿಯಾಗುತ್ತಿದ್ದು, 80 ಲಕ್ಷ ವಾಹನಗಳು ರಸ್ತೆಗಿಳಿಯುತ್ತಿವೆ. ಇವುಗಳ ಪೈಕಿ ಪ್ರತಿದಿನ ಅಂದಾಜು 30 ಸಾವಿರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗುತ್ತಿವೆ. ಪರಿಣಾಮ 2014 ರಿಂದ 2024ರ ವರೆಗೆ 10 ವರ್ಷಗಳಲ್ಲಿ 49,124 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 8,099 ಮಂದಿ ದುರ್ಮರಣ ಹೊಂದಿದ್ದಾರೆ ಎಂಬ ಅಂಕಿ-ಅಂಶವು ಹುಬ್ಬೇರಿಸುವಂತೆ ಮಾಡುತ್ತದೆ. ಹೆಚ್ಚಿನ ರಸ್ತೆ ಅಪಘಾತ ಸಂಭವಿಸಿರುವ 64 ರಸ್ತೆಗಳನ್ನು ಗುರುತಿಸಿ ಅವುಗಳನ್ನು ಬ್ಲ್ಯಾಕ್‌ಸ್ಪಾಟ್‌ ಗಳೆಂದು ಪರಿಗಣಿಸಲಾಗಿದೆ.

ಏನಿದು ಬ್ಲ್ಯಾಕ್‌ಸ್ಪಾಟ್‌?: ನಗರದಲ್ಲಿ ಯಾವ ಸ್ಥಳದ 500 ಮೀ ವ್ಯಾಪ್ತಿಯ ಒಳಗೆ ಕಳೆದ ಮೂರು ವರ್ಷಗಳಲ್ಲಿ 5 ಮಾರಣಾಂತಿಕ ಅಪಘಾತಗಳು ಅಥವಾ ತೀವ್ರ ಸ್ವರೂಪದ ಮಾರಣಾಂತಿಕವಲ್ಲದ ಅಪಘಾತಗಳು ಅಥವಾ ಒಂದೇ ಅಪಘಾತದಲ್ಲಿ 10 ಸಾವುಗಳು ವರದಿಯಾಗಿದ್ದರೆ ಅಂತಹ ಸ್ಥಳವನ್ನು ಬ್ಲ್ಯಾಕ್‌ಸ್ಪಾಟ್‌ ಎಂದು ಗುರುತಿಸಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಂಚಾರ ಪೊಲೀಸರು ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಸಮೀಕ್ಷೆ ನಡೆಸಿ ಬ್ಲ್ಯಾಕ್‌ಸ್ಪಾಟ್‌ ಗುರುತಿಸುತ್ತಾರೆ. ನಂತರ ಅಲ್ಲಿ ಯಾವ ಕಾರಣಕ್ಕೆ ಅಪಘಾತ ಆಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ತನಿಖೆ ವೇಳೆ ಅವೈಜ್ಞಾನಿಕವಾದ ರಸ್ತೆ ನಿರ್ಮಾಣ, ರಸ್ತೆ ವಿಭಜಕ, ಪಾದಚಾರಿ ಮಾರ್ಗದಲ್ಲಿ ರಿಂಪಲ್ಸ್‌ ಅಳವಡಿಸದಿರುವುದನ್ನು ಪತ್ತೆ ಮಾಡಲಾಗುತ್ತದೆ. ಮುಂದೆ ಅಪಘಾತ ತಡೆಗಟ್ಟಲು ಸಂಬಂಧಪಟ್ಟ ಇಲಾಖೆಗಳಿಗೂ ಮಾಹಿತಿ ರವಾನಿಸಲಾಗುತ್ತದೆ.

ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಆಕ್ಸಿಡೆಂಟ್‌ ಹೆಚ್ಚಲು ಕಾರಣ:

Advertisement

ಬೆಂಗಳೂರಿನ ಹೊರ ವರ್ತುಲ ರಸ್ತೆಗಳಲ್ಲೇ ಅತ್ಯಧಿಕ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಆ ಭಾಗಗಳಲ್ಲೇ ಹೆಚ್ಚಿನ ಬ್ಲ್ಯಾಕ್‌ಸ್ಪಾಟ್‌ ಗುರುತಿಸಲಾಗಿದೆ. ರಸ್ತೆಯಿಂದ ವಾಹನಗಳು ಹೊರಗೆ ಹೋಗುವ ಹಾಗೂ ಒಳಗೆ ಬರುವ ವ್ಯವಸ್ಥೆ ಸೂಕ್ತವಾಗಿಲ್ಲ. ರಸ್ತೆಗಳ ಗುಣಮಟ್ಟ ಹಾಗೂ ವಿಸ್ತರಣೆ ಬಳಿಕ ವೇಗದ ಚಾಲನೆ, ರಸ್ತೆಗಳ ಗುಣಮಟ್ಟ ಹದಗೆಟ್ಟು ಅಲ್ಲಲ್ಲಿ ಗುಂಡಿ ಬಿದ್ದಿರುವುದು, ಅವೈಜ್ಞಾನಿಕ ಹಂಪ್ಸ್‌ಗಳು ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ನಡೆಯುವ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪೀಣ್ಯ 8ನೇ ಮೈಲಿ, ಜಕ್ಕೂರು ಡೆಡ್ಲಿ ಸ್ಪಾಟ್‌

ಜಕ್ಕೂರು ಮೇಲ್ಸೇತುವೆಯ ಬಿ.ಬಿ. ರಸ್ತೆಯಲ್ಲಿ 553 ಮೀಟರ್‌ ವ್ಯಾಪ್ತಿ ಹಾಗೂ ಪೀಣ್ಯ 8ನೇ ಮೈಲ್‌ನಿಂದ ನವಯುಗ ಟೋಲ್‌ ವರೆಗಿನ 3.4 ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಲ್ಲಿ ತಲಾ 37 ಆಕ್ಸಿಡೆಂಟ್‌ಗಳು ಸಂಭವಿಸಿ 17 ಮಂದಿ ದುರ್ಮರಣ ಹೊಂದಿದ್ದಾರೆ. ಈ ಭಾಗಗಳಲ್ಲಿ ಅತ್ಯಧಿಕ ವಾಹನಗಳು ಸಂಚರಿಸುತ್ತಿದ್ದು, ದ್ವಿಚಕ್ರ ವಾಹನಗಳೇ ಹೆಚ್ಚಾಗಿ ಇಲ್ಲಿ ಅಪಘಾತಕ್ಕೀಡಾ ಗುತ್ತಿರುವುದು ಆಘಾತಕಾರಿ ಯಾಗಿದೆ. ಇನ್ನು 64 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ 12 ಕಡೆಗಳಲ್ಲಿ 20ಕ್ಕೂ ಅಧಿಕ ರಸ್ತೆ ಅಪಘಾತ ಸಂಭವಿಸಿದೆ. ಉಳಿದ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ 20ಕ್ಕಿಂತ ಕಡಿಮೆ ರಸ್ತೆ ಅಪಘಾತ ಹಾಗೂ 10ಕ್ಕಿಂತ ಕಡಿಮೆ ಮಂದಿ ಮೃತಪಟ್ಟಿರುವುದು ವರದಿಯಾಗಿದೆ.

ಸವಾರರೇ, ಈ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಿ!

ಕೆಂಗೇರಿ- ಮಧು ಪೆಟ್ರೋಲ್‌ ಬಂಕ್‌

ಕಾಮಾಕ್ಷಿಪಾಳ್ಯ- ಚೌಡೇಶ್ವರಿ ಅಂಡರ್‌ಪಾಸ್‌-ಸುಮನಹಳ್ಳಿ

ಎಲೆಕ್ಟ್ರಾನಿಕ್‌ ಸಿಟಿ- ಕೊನ್ನಪ್ಪನ ಅಗ್ರಹಾರ

ಯಲಹಂಕ- ಜಕ್ಕೂರು ಮೇಲ್ಸೇತುವೆ ಬಿಬಿರಸ್ತೆ

ಪೀಣ್ಯ- ಎಸ್‌.ಎಂ.ಸರ್ಕಲ್‌

ಪೀಣ್ಯ- 8ನೇ ಮೇಲ್‌

ಹಲಸೂರು- ಕೋರಮಂಗಲ ಇನ್ನರ್‌ ರಿಂಗ್‌ ರಸ್ತೆ

ಏರ್‌ಪೋರ್ಟ್‌- ಜೆಪಿ ಮೊರ್ಗೆನ್‌

ಹೆಚ್ಚು ರಸ್ತೆ ಅಪಘಾತ ಸಂಭವಿಸುವ ಸ್ಥಳಗಳನ್ನು ಬ್ಲ್ಯಾಕ್‌ಸ್ಪಾಟ್‌ ಗಳೆಂದು ಪರಿಗಣಿಸಲಾ ಗುತ್ತದೆ. ಇಲ್ಲಿ ಅಪಘಾತ ಗಳನ್ನು ನಿಯಂತ್ರಿ ಸಲು ಸೂಕ್ತ ಕ್ರಮ ಕೈಗೊಳ್ಳ ಲಾಗು ವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿದರೆ ಹೆಚ್ಚಿನ ರಸ್ತೆ ಅಪಘಾತ ನಿಯಂತ್ರಿಸಲು ಸಹಕಾರಿ. ●ಎಂ.ಎನ್‌.ಅನುಚೇತ್‌, ಜಂಟಿ ಪೊಲೀಸ್‌ ಆಯುಕ್ತ, ಬೆಂಗಳೂರು ಸಂಚಾರ ವಿಭಾಗ

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next