Advertisement

ಅಂತಾರಾಷ್ಟ್ರೀಯ ಮಟ್ಟದ ಮೂರು ಟರ್ಫ್‌ ಕ್ರಿಕೆಟ್‌ ಪಿಚ್‌

09:46 AM Jan 31, 2018 | Team Udayavani |

ಮಹಾನಗರ: ನಗರದ ಕ್ರಿಕೆಟ್‌ ಪ್ರೇಮಿಗಳಿಗೆ ಪೂರಕವಾಗುವ ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರು ವಿ.ವಿ.ಕಾಲೇಜಿನ ಆಶ್ರಯದಲ್ಲಿ ಕರಾವಳಿ ಕ್ರಿಕೆಟ್‌ ಅಕಾಡೆಮಿಯು ಕಾಲೇಜಿನ ಮೈದಾನದಲ್ಲಿ ಮೂರು ಟರ್ಫ್‌ ಕ್ರಿಕೆಟ್‌ ಪಿಚ್‌ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಿಚ್‌ ನಿರ್ಮಾಣಕ್ಕೆ ಇಲ್ಲಿ ಯೋಚಿಸಲಾಗಿದ್ದು, ಇಂದಿನಿಂದ ಕಾಮಗಾರಿ ಆರಂಭವಾಗಲಿದೆ.

Advertisement

ವಿ.ವಿ.ಕಾಲೇಜಿನ ಸುಮಾರು 2 ಎಕ್ರೆ ವ್ಯಾಪ್ತಿಯ ಕ್ರೀಡಾಂಗಣದ ಪೈಕಿ ಸುಮಾರು 1 ಎಕ್ರೆ ವ್ಯಾಪ್ತಿ ಪ್ರದೇಶದಲ್ಲಿ 36×40 ಅಡಿಗಳ ಮೂರು ಟರ್ಫ್‌ ಕ್ರಿಕೆಟ್‌ ಪಿಚ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದರ ಮಧ್ಯದಲ್ಲಿ ಮೂರು ಪಿಚ್‌ ಬರಲಿದೆ. ಸುಮಾರು 8 ಲಕ್ಷ ರೂ. ವೆಚ್ಚ ಆಗಬಹುದೆಂಬ ನಿರೀಕ್ಷೆ ಇದೆ.

ಮಂಗಳೂರು ವ್ಯಾಪ್ತಿಯಲ್ಲಿ ಟರ್ಫ್‌ ಪಿಚ್‌ನಲ್ಲಿ ಮಕ್ಕಳಿಗೆ ತರಬೇತಿ ಸದ್ಯ ಸಿಗುತ್ತಿಲ್ಲ. ಹೀಗಾಗಿ ಟರ್ಫ್‌ ಮಾದರಿಯಲ್ಲಿಯೇ ಮಕ್ಕಳಿಗೆ ಕ್ರಿಕೆಟ್‌ ತರಬೇತಿ ನೀಡಬೇಕು ಎಂಬ ಆಶಯದಿಂದ ಟರ್ಫ್‌ ಪಿಚ್‌ ಮಾಡಲು ಅಕಾಡೆಮಿ ನಿರ್ಧರಿಸಿದೆ.

ಇಂದಿನಿಂದ ಕಾಮಗಾರಿ
ಪಿಚ್‌ ನಿರ್ಮಾಣದ ಹಿನ್ನೆಲೆಯಲ್ಲಿ ಈಗಿನ ಗ್ರೌಂಡ್‌ನ‌ ಕೆಲವು ಭಾಗದಲ್ಲಿ 6 ಅಡಿಗಳಷ್ಟು ಅಗೆಯಬೇಕಾಗಿದೆ. ಜ.31ರಿಂದ ಈ
ಕೆಲಸ ಆರಂಭವಾಗಲಿದೆ. ಬಳಿಕ ಹುಲ್ಲು ಹಾಗೂ ಇತರ ವ್ಯವಸ್ಥೆಗಳನ್ನು ಪೂರ್ಣ ರೀತಿಯಲ್ಲಿ ಅಳವಡಿಸಲು ಸುಮಾರು 3 ತಿಂಗಳ ಆವಶ್ಯಕತೆ ಇದೆ. ಆ ಬಳಿಕ ಟರ್ಫ್‌ ಕ್ರೀಡಾಂಗಣ ಬಳಕೆಗೆ ಲಭ್ಯವಾಗಲಿದೆ. ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ ಮೂಲಕ ನುರಿತ ಕರ್ಟರ್‌ ಅವರನ್ನು ಮಂಗಳೂರಿಗೆ ತರಿಸಿ ಪಿಚ್‌ ಸಿದ್ಧಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಪ್ರಸ್ತುತ ಕರಾವಳಿ ಕ್ರಿಕೆಟ್‌ ಅಕಾಡೆಮಿ ವತಿಯಿಂದ ಸುಮಾರು 100ಕ್ಕೂ ಅಧಿಕ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಜತೆಗೆ ಆಸಕ್ತ ಬಡ ವಿದ್ಯಾರ್ಥಿಗಳಿಗೂ ಉಚಿತ ತರಬೇತಿ ನೀಡಲು ಅಕಾಡೆಮಿ ಯೋಚಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ತರಗತಿ ಆರಂಭವಾಗುವ ಬೆಳಗ್ಗೆ 9 ಗಂಟೆಗಿಂತ ಮೊದಲು ಹಾಗೂ ಕಾಲೇಜು ಬಿಡುವ ಸಂಜೆ 4ರ ಅನಂತರ ಕ್ರೀಡಾಂಗಣವನ್ನು ಕರಾವಳಿ ಕ್ರಿಕೆಟ್‌ ಅಕಾಡೆಮಿಯವರು ಬಳಸಲು ಮಂಗಳೂರು ವಿ.ವಿ.ಯು ಒಪ್ಪಿಗೆ ಸೂಚಿಸಿದೆ. ಮಂಗಳೂರು ವಿ.ವಿ.ಯ ಆಸಕ್ತ ವಿದ್ಯಾರ್ಥಿಗಳಿಗೂ ಇಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಜ.31ರಂದು ಸಂಜೆ 5ಕ್ಕೆ ಕಾಮಗಾರಿಗೆ ಭೂಮಿ ಪೂಜೆ ನಡೆಯಲಿದೆ. ಪ್ರಸ್ತುತ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಇದೇ ರೀತಿಯ ಸುಸಜ್ಜಿತ ಟರ್ಫ್‌ ಕ್ರಿಕೆಟ್‌ ಪಿಚ್‌ ವ್ಯವಸ್ಥೆಯನ್ನು ಕಳೆದ ಕೆಲವು ವರ್ಷದ ಹಿಂದೆ ಆರಂಭಿಸಲಾಗಿತ್ತು.

Advertisement

ಪುಟ್ಬಾಲ್ ಟರ್ಫ್‌ ಬಾಕಿ!
ಮಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್‌ ಪಂದ್ಯಾಟ ಆಯೋಜಿಸುವ ಉದ್ದೇಶವಿರಿಸಿ, ನೆಹರೂ ಮೈದಾನವನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿ ನಿರ್ಮಿಸುವ ಸಲುವಾಗಿ ಟರ್ಫ್‌ ಅಳವಡಿಕೆಗೆ ಸರಕಾರ ನಿರ್ಧರಿಸಿ ಹಲವು ದಿನಗಳು ಕಳೆದಿವೆ. ಆದರೆ, ಇನ್ನೂ ಕೂಡ ಇದು ಅಂತಿಮ ಹಂತಕ್ಕೆ ಬಂದಿಲ್ಲ.

‘ಅಂತಾರಾಷ್ಟ್ರೀಯ ಮಟ್ಟದ ಪಿಚ್‌’
ಮಂಗಳೂರಿನಲ್ಲಿಯೇ ಮೊದಲ ಬಾರಿಗೆ ಮೂರು ಟರ್ಫ್‌ ಕ್ರಿಕೆಟ್‌ ಪಿಚ್‌ ನಿರ್ಮಾಣಕ್ಕೆ ಕರಾವಳಿ ಕ್ರಿಕೆಟ್‌ ಅಕಾಡೆಮಿ ನಿರ್ಧರಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಿಚ್‌ನಂತೆ ಇಲ್ಲಿನ ಕ್ರೀಡಾಂಗಣವನ್ನು ರೂಪಿಸಲಾಗುವುದು. ಈ ಮೂಲಕ ಕ್ರಿಕೆಟ್‌ ಕುರಿತ ಆಸಕ್ತಿಯ ವಿದ್ಯಾರ್ಥಿಗಳಿಗೆ ಪರಿಪೂರ್ಣ ನೆಲೆಯಲ್ಲಿ ತರಬೇತಿ ದೊರಕಿಸಿಕೊಡಲು ಸಾಧ್ಯ.
ಸಂತೋಷ್‌ ಮಿಸ್ಕಿತ್‌
  ಪ್ರ. ಕಾರ್ಯದರ್ಶಿ,
  ಕರಾವಳಿ ಕ್ರಿಕೆಟ್‌ ಅಕಾಡೆಮಿ

‘ಅಕಾಡೆಮಿಯಿಂದ ಪಿಚ್‌ ನಿರ್ಮಾಣ’
ಹಂಪನಕಟ್ಟೆಯ ಮಂಗಳೂರು ವಿ.ವಿ.ಕಾಲೇಜಿನ ಮೈದಾನದಲ್ಲಿ ಮೂರು ಟರ್ಫ್‌ ಕ್ರಿಕೆಟ್‌ ಪಿಚ್‌ ನಿರ್ಮಾಣಕ್ಕೆ ಕರಾವಳಿ ಕ್ರಿಕೆಟ್‌ ಅಕಾಡೆಮಿ ಮುಂದೆ ಬಂದಿದೆ. ಈಗಾಗಲೇ ಈ ಮೈದಾನವನ್ನು ಸುವ್ಯವಸ್ಥಿತ ರೀತಿಯಲ್ಲಿ ಆಟಗಾರರಿಗೆ ಸಿಗುವಂತೆ ಅಕಾಡೆಮಿ ನಿರ್ವಹಣೆ ಮಾಡಿಕೊಂಡಿದೆ. ತರಬೇತಿ ಪಡೆಯುವ ಕ್ರಿಕೆಟ್‌ ಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ನೆಲೆಯಲ್ಲಿ ಈ ಕ್ರೀಡಾಂಗಣ ಸಿದ್ಧಗೊಳ್ಳಲಿದೆ.
ಉದಯ್‌ ಕುಮಾರ್‌ ಇರ್ವತ್ತೂರು
  ಪ್ರಾಂಶುಪಾಲರು ಮಂಗಳೂರು
  ವಿ.ವಿ.ಕಾಲೇಜು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next