Advertisement

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

12:32 PM Jan 03, 2025 | Team Udayavani |

ಉಳ್ಳಾಲ: ಉಳ್ಳಾಲ ತಾಲೂಕಿನ ಸೋಮೇಶ್ವರ ಕಡಲ ತೀರ ತನ್ನ ರುದ್ರ ಗಾಂಭೀರ್ಯದಿಂದ ಎಲ್ಲರನ್ನೂ ಸೆಳೆಯುತ್ತಿದೆ. ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇಲ್ಲಿ ಮೂಲಸೌಕರ್ಯಗಳ ಕೊರತೆ ಬಹುವಾಗಿ ಕಾಡುತ್ತಿದೆ.

Advertisement

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಅದರ ಜತೆಗೆ ಉಳ್ಳಾಲ ದರ್ಗಾಕ್ಕೆ, ದೇರಳಕಟ್ಟೆ ಪರಿಸರದ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗೆ ಬರುವವರು ಸೋಮೇಶ್ವರ ಬೀಚ್‌ಗೆ ಬರುತ್ತಾರೆ. ಇಲ್ಲಿನ ರುದ್ರಪಾದೆ ಎಂಬ ಬಂಡೆಗೆ ಅಬ್ಬರಿಸುವ ಕಡಲ ತೆರೆಗಳು ಅಪ್ಪಳಿಸುವ ದೃಶ್ಯ ಮನಮೋಹಕವಾಗಿದೆ.

ದೊಡ್ಡ ಸಂಖ್ಯೆಯಲ್ಲಿ ಜನರು ಬರುತ್ತಿರು ವುದರಿಂದ ಬೀಚ್‌ ಅನ್ನು ಪ್ರವಾಸಿ ತಾಣವಾಗಿ ಬೆಳೆಸಲು ದೊಡ್ಡ ಅವಕಾಶಗಳಿವೆ. ಆದರೆ, ಈ ಬೀಚ್‌ ಮಾತ್ರ ಅವ್ಯವಸ್ಥೆಯ ಆಗರವಾಗಿದೆ. ಪ್ರವಾಸಿಗರನ್ನು ಮುರಿದ ಕಲ್ಲು ಬೆಂಚ್‌ಗಳು, ಕಿನಾರೆ ಬಳಿ ಬೆಳೆದಿರುವ ಗಿಡಗಂಟಿಗಳು, ಕಸ ಕಡ್ಡಿಗಳು, ತಾತ್ಕಾಲಿಕ ಶೆಡ್‌ಗಳೇ ಸ್ವಾಗತಿಸುತ್ತವೆ. ಒಂದು ದಶಕಗಳಿಂದಲೂ ಬೀಚ್‌ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದ್ದು, ಪ್ರವಾಸೋದ್ಯಮ ಇಲಾಖೆಯಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಬೀಚ್‌ ಅಭಿವೃದ್ಧಿಗೆ ಗಮನ ನೀಡುತ್ತಿಲ್ಲ.

ಸುಮಾರು ಒಂದು ಕಿ.ಮೀ. ಉದ್ದದ ತೀರವನ್ನು ಹೊಂದಿರುವ ಬೀಚ್‌ನಲ್ಲಿ ಡಿಸೆಂಬರ್‌ನಲ್ಲೇ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಮುಂದಿನ ಐದು ತಿಂಗಳ ಕಾಲ ಪ್ರವಾಸಿಗರ ಆಗಮನ ಹೆಚ್ಚಿರುತ್ತದೆ. ಹೀಗಾಗಿ ಇಲ್ಲಿನ ಮೂಲ ಸೌಕರ್ಯವನ್ನು ಹೆಚ್ಚಿಸಬೇಕು ಎನ್ನುವುದು ಸ್ಥಳೀಯರ, ಪ್ರವಾಸಿಗರ ಆಗ್ರಹ.

ಕಲ್ಲು ಬೆಂಚುಗಳ ಪಳೆಯುಳಿಕೆ
ದೇವಸ್ಥಾನದ ದಕ್ಷಿಣ ಬದಿಯಲ್ಲಿ ಎತ್ತರದ ಕಲ್ಲಿನ ಮೇಲೆ ಹಾಕಿರುವ ಕಲ್ಲು ಬೆಂಚುಗಳ ಪಳೆಯುಳಿಕೆ ಮಾತ್ರ ಉಳಿದಿರುವುದು ಪ್ರವಾಸೋದ್ಯಮದ ಇಂದಿನ ದುಃಸ್ಥಿತಿಯನ್ನು ಅಣಕಿಸುವಂತಿದೆ. ಪ್ರವಾಸಿಗರು ಇಲ್ಲಿ ಮರದ ತುಂಡುಗಳನ್ನು ಜೋಡಿಸಿ ಕುಳಿತು
ಕೊಳ್ಳಬೇಕಾಗುತ್ತದೆ, ಅದನ್ನೂ ಜೋಡಿಸುವ ಸ್ಥಿತಿ ಇಲ್ಲ.!

Advertisement

ರುದ್ರಪಾದೆ ಸುತ್ತ ಗಿಡಗಂಟಿಗಳು
ಸಮುದ್ರ ಕಿನಾರೆಯಲ್ಲಿರುವ ರುದ್ರಪಾದೆ ಸೋಮೇಶ್ವರದ ಆಕರ್ಷಣೆಗಳಲ್ಲಿ ಒಂದು. ರುದ್ರಪಾದೆ ಸುತ್ತ ಗಿಡಗಂಟಿಗಳು ಬೆಳೆದಿದ್ದರೆ ಅಲ್ಲಿಗೆ ತಲುಪುವುದೇ ದೊಡ್ಡ ಸಾಹಸದ ಕೆಲಸವಾಗಿದೆ. ರುದ್ರಪಾದೆಯಿಂದ ಉತ್ತರ ಭಾಗದಲ್ಲಿರುವ ರುದ್ರಭೂಮಿಯವರೆಗೆ ಹೋಗುವ ಬೀಚ್‌ ಬದಿಯಲ್ಲಿ ಗಿಡ ಗಂಟಿಗಳು, ಅಂಗಡಿಗಳು, ಶೆಡ್‌ಗಳು ಸಂಪೂರ್ಣ ಬೀಚ್‌ನ ಸೌಂದರ್ಯವನ್ನೇ ಮರೆ ಮಾಚಿದೆ.

ಹೆಚ್ಚುವರಿ ಜೀವರಕ್ಷಕರು ಬೇಕಾಗಿದ್ದಾರೆ
ಕಳೆದೆರಡು ವಾರಗಳಲ್ಲಿ ಸೋಮೇಶ್ವರ ಬೀಚ್‌ನಲ್ಲಿ ಎರಡು ಜೀವ ಬಲಿ ತೆಗೆದುಕೊಂಡ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದ ವತಿಯಿಂದ ಖಾಯಂ ಜೀವರಕ್ಷಕನನ್ನು ನೇಮಿಸಿದೆ. ಕಳೆದ 17 ವರುಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಬಿಡುವಿನ ಸಂದರ್ಭದಲ್ಲಿ ಜೀವರಕ್ಷಣೆ ಮಾಡುತ್ತಿದ್ದ ಅಶೋಕ್‌ ಸೋಮೇಶ್ವರ ಅವರನ್ನು ಖಾಯಂ ಮಾಡಲಾಗಿದೆ. ಆದರೆ, ಪ್ರವಾಸೋದ್ಯಮ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತಿಲ್ಲ. ಇಲ್ಲಿ ಶನಿವಾರ ಮತ್ತು ರವಿವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಕಾರಣ ಒಂದು ಕಿ. ಮೀ. ಉದ್ದ ಕಡಲಕಿನಾರೆಯಲ್ಲಿ ಓರ್ವ ಜೀವರಕ್ಷಕನಿಂದ ರಕ್ಷಣೆ ಸಾಧ್ಯವಿಲ್ಲದ ಕಾರಣ ವಾರದ ಕೊನೆಯ ಎರಡು ದಿನಗಳಲ್ಲಿ ಹೆಚ್ಚುವರಿ ಜೀವರಕ್ಷಕರ ನೇಮಕಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕಾಗಿದೆ.

ಅಪಾಯಕಾರಿ ಕಡಲಿನ ಮಾಹಿತಿ ಅಗತ್ಯ
ಉಳ್ಳಾಲ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಗಳು ಅತ್ಯಂತ ಅಪಾಯಕಾರಿ ಸಮುದ್ರ ತೀರಗಳು. ಈ ಮೂರು ಬೀಚ್‌ಗಳಲ್ಲಿ ಅತೀ ಹೆಚ್ಚು ಪ್ರವಾಸಿಗರು ಆಗಮಿಸುವುದು ಸೋಮೇಶ್ವರ ಮತ್ತು ಉಳ್ಳಾಲದಲ್ಲಿ ಈ ಪ್ರದೇಶದಲ್ಲಿ ಜನರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕಾಗಿದ್ದು, ಫಲಕಗಳೊಂದಿಗೆ ವಾರದ ಎರಡು ದಿನಗಳಲ್ಲಿ ಮೈಕ್‌ ಮೂಲಕವೂ ಎಚ್ಚರಿಸುವ ಕೆಲಸ ಆಗಬೇಕಾಗಿದೆ.

ಏನೇನು ಆಗಬೇಕು?
– ಬೀಚ್‌ಗೆ ಬಂದವರಿಗೆ ಸಮುದ್ರದ ಸೌಂದರ್ಯ ಸವಿಯಲು ಬೇಕಾದ ಮೂಲ ಸೌಕರ್ಯ ಒದಗಿಸಬೇಕು.
– ಬೀಚ್‌ಗೆ ಹೋಗುವ ದಾರಿಯನ್ನು ಸ್ವತ್ಛಗೊಳಿಸಬೇಕು, ಪಳೆಯುಳಿಕೆಯಂತಿರುವ ಸಲಕರೆಗಳನ್ನು ತೆರವು ಮಾಡಬೇಕು.
– ಮೀನುಗಾರರಿಗೆ, ಅಂಗಡಿಗಳಿಗೆ ಸೂಕ್ತವಾದ ವ್ಯವಸ್ಥೆ ಮಾಡಿ ಬೀಚ್‌ನ ಸೌಂದರ್ಯ ಹೆಚ್ಚಿಸಬೇಕು.
– ಬೀಚ್‌ಗೆ ತಲುಪಲು ಸರಿಯಾದ ವ್ಯವಸ್ಥೆಯೊಂದಿಗೆ ಗಿಡಗಂಟಿಗಳನ್ನು ತೆಗೆದು ಕುಳಿತುಕೊಳ್ಳಲು ವ್ಯವಸ್ಥೆಯಾಗಬೇಕಾಗಿದೆ.
– ಸೋಮೇಶ್ವರದಲ್ಲಿ ಪ್ರತೀ ದಿನ ಬೆಳಗ್ಗಿನ ಸಂದರ್ಭದಲ್ಲಿ ಪಿಂಡ ಪ್ರದಾನ ಸೇರಿದಂತೆ ಧಾರ್ಮಿಕ ಕಾರ್ಯಗಳಿಗೆ ಆಗಮಿಸುವ ಭಕ್ತಾಧಿಗಳು ಸಮುದ್ರದಲ್ಲಿ ಸ್ನಾನ ಮಾಡುತ್ತಾರೆ. ಅವರಿಗೆ ಸಮುದ್ರ ತೀರದಲ್ಲಿ ಸರಿಯಾದ ರಕ್ಷಣೆ ವ್ಯವಸ್ಥೆ ಮಾಡಬೇಕು.
– ಕಡಲ ಕಿನಾರೆಯಲ್ಲಿ ರಜಾ ದಿನಗಳಲ್ಲಿ ಮೂರರಿಂದ ನಾಲ್ಕು ಜೀವರಕ್ಷಕರ ಅಗತ್ಯ ಇದೆ.
– ದೇವಸ್ಥಾನದ ಕೆರೆಯ ಅಭಿವೃದ್ಧಿ ಮತ್ತು ನಿರ್ವಹಣೆ ಆಗಬೇಕಾಗಿದೆ.
– ಕಡಲತೀರದ ಅಪಾಯದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕು.

ಹೆಚ್ಚುವರಿ ಜೀವರಕ್ಷಕರ ಅಗತ್ಯ
ಕಳೆದ 17 ವರುಷಗಳಿಂದ ಮೀನುಗಾರಿಕೆಯೊಂದಿಗೆ ಪ್ರವಾಸಿಗರನ್ನು ರಕ್ಷಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಇದೀಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಖಾಯಂ ಆಗಿ ಜೀವರಕ್ಷಕನ ಕಾರ್ಯಕ್ಕೆ ಅವಕಾಶ ನೀಡಿದೆ. ವಾರದ ಕೊನೆಯ ಎರಡು ದಿನಗಳಲ್ಲಿ ಹೆಚ್ಚುವರಿ ಜೀವರಕ್ಷಕರ ಅಗತ್ಯತೆ ಇದೆ.
-ಅಶೋಕ್‌ ಸೋಮೇಶ್ವರ, ಜೀವರಕ್ಷಕ

ದೇಗುಲದ ವತಿಯಿಂದ ಆದ್ಯತೆ
ಇಲ್ಲಿಗೆ ಬರುವ ಭಕ್ತರಿಗೆ ಮತ್ತು ಪ್ರವಾಸಿಗರ ರಕ್ಷಣೆಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಜೀವರಕ್ಷಕ ಈಜುಗಾರನನ್ನು ನೇಮಿಸಲಾಗಿದೆ. ಮೂಲಸೌಕರ್ಯ ಹೆಚ್ಚಳಕ್ಕೆ ದೇವಸ್ಥಾನದ ಮೂಲಕ ಪ್ರವಾಸೋದ್ಯಮ ಇಲಾಖೆ, ಸ್ಪೀಕರ್‌ ಯು.ಟಿ.ಖಾದರ್‌ ಅವರೊಂದಿಗೆ ಮಾತುಕತೆ ನಡೆಸಲಾಗಿದೆ.
-ರವೀಂದ್ರನಾಥ ರೈ ಸಾಂತ್ಯಗಡದಗುತ್ತು, ಸೋಮೇಶ್ವರ ದೇವಸ್ಥಾನ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು.

-ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next