Advertisement
ಗಾಬಾದಲ್ಲಿ ನಡೆದ ಭಾರತ – ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಈ ಸುದ್ದಿಯ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಅವರು ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಜತೆ ಡ್ರೆಸ್ಸಿಂಗ್ ರೂಮ್ನಲ್ಲಿ ಕೂತಿದ್ದ ಅಶ್ವಿನ್ ಅವರು ಒಂದು ಅಪ್ಪುಗೆ ಕೊಟ್ಟಿದ್ದರು. ಈ ವೇಳೆಯೇ ಅವರು ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.
Related Articles
ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿದ ನಾಯಕ ರೋಹಿತ್ ಶರ್ಮ “ನಾವು ತಂಡದ ಸಹ ಆಟಗಾರರಾಗಿ ಅಶ್ವಿನ್ ಅವರ ನಿರ್ಧಾರ ಗೌರವಿಸಬೇಕು. ಅವರಿಗೆ ಏನು ಮಾಡಬೇಕೆಂದು ತುಂಬಾ ಖಚಿತವಾಗಿತ್ತು. ತಂಡವು ಅವರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದೆ. ನಮ್ಮ ಆಲೋಚನೆಗಳನ್ನು ನೆನಪಿಸಿಕೊಳ್ಳಲು ತಂಡವಾಗಿ ನಮಗೆ ಅಂತರವಿದೆ. ಮುಂದೆ ಹೇಗೆ ಮುಂದುವರಿಯುವುದು ಎಂದು ನಾವು ಯೋಚಿಸಬಹುದು. ಅವರು ಈ ನಿರ್ಧಾರದ ಬಗ್ಗೆ ತುಂಬಾ ಖಚಿತವಾಗಿದ್ದರು. ಎಂದರು.
Advertisement
38 ವರ್ಷದ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಆಟಗಾರನಾಗಿದ್ದಾರೆ.
ನವೆಂಬರ್ 6, 2011 ರಂದು ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. 2010 ಜೂ.5 ರಂದು ಶ್ರೀಲಂಕಾ ವಿರುದ್ದ ಏಕದಿನ ಪಂದ್ಯಕ್ಕೆ ಎಂಟ್ರಿ ಆಗಿದ್ದರು. ಜೂನ್ 12, 2010 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ T20ಗೆ ಪಾದಾರ್ಪಣೆ ಮಾಡಿದ್ದರು.
ಭಾರತದ ಪರ 116 ಏಕದಿನ ಮತ್ತು 65 T20I ಪಂದ್ಯಗಳನ್ನು ಆಡಿದ್ದು, ಎಲ್ಲಾ ಮಾದರಿಯಲ್ಲಿ ಅಶ್ವಿನ್ ಒಟ್ಟು 775 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅವರು 37 ಬಾರಿ ಐದು ವಿಕೆಟ್ ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ.
116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್ ಪಡೆದಿದ್ದಾರೆ. 65 ಟಿ-20 ಪಂದ್ಯದಲ್ಲಿ 72 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅಶ್ವಿನ್ ಒಟ್ಟು 537 ವಿಕೆಟ್ ಗಳನ್ನು ಪಡೆದಿದ್ದಾರೆ. 6 ಶತಕವನ್ನು ಅಶ್ವಿನ್ ಸಿಡಿಸಿದ್ದು, 14 ಅರ್ಧಶತಕಗಳನ್ನು ಒಳಗೊಂಡಂತೆ ಟೆಸ್ಟ್ ಕ್ರಿಕೆಟ್ನಲ್ಲಿ 3503 ರನ್ ಗಳಿಸಿ ಹಲವು ಪಂದ್ಯಗಳ ಗೆಲುವಿಗೆ ರೂವಾರಿ ಆಗಿದ್ದಾರೆ.
ಅಶ್ವಿನ್ 2024 ರಲ್ಲಿ ಭಾರತಕ್ಕಾಗಿ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 47 ವಿಕಟ್ ಪಡೆದಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕ್ರಿಕೆಟ್ ವೃತ್ತಿ ಜೀವನವನ್ನು ಮುಂದುವರೆಸಲಿದ್ದಾರೆ.
2016 ರಲ್ಲಿ ಮೆನ್ಸ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ: ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಅಶ್ವಿನ್ 2016 ರಲ್ಲಿ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಮತ್ತು ವರ್ಷದ ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.