ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮುತ್ತಲಿಬ್ ಅವರ ಮನೆಯಲ್ಲಿ ದುರಂತ ಸಂಭವಿಸಿದೆ. ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ವಾಸಿಸುತ್ತಿದ್ದು, ಡಿ. 8ರಂದು ರಾತ್ರಿ ಗ್ಯಾಸ್ ಸೋರಿಕೆಯಾಗಿತ್ತು. ಇದರ ಅರಿವಿಲ್ಲದೆ ತಾಯಿ ಖುಬ್ರಾ ಶೌಚಾಲಯಕ್ಕೆ ತೆರಳಲು ಕೋಣೆಯ ಸ್ವಿಚ್ ಹಾಕಿದಾಗ ಮನೆಯ ತುಂಬಾ ಬೆಂಕಿ ಆವರಿಸಿತ್ತು.
Advertisement
ಪರಿಣಾಮವಾಗಿ ಖುಬ್ರಾ, ಅವರ ಮೂವರು ಮಕ್ಕಳಾದ ಝುಲೇಖಾ ಮಹದಿಯಾ, ಮಝಿಯಾ, ಮಾಯಿಝ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿತ್ತು. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿ.13ರಂದು ಖುಬ್ರಾ, ಡಿ. 26ರಂದು ಹಿರಿಯ ಪುತ್ರಿ ಝುಲೇಖಾ ಮೆಹದಿಯಾ ಸಾವನ್ನಪ್ಪಿದ್ದು, ಡಿ. 28ರಂದು ಶನಿವಾರ ಮೂರನೆಯ ಪುತ್ರಿ ಫಾತಿಮತ್ ಮಾಯಿಝ (9) ಕೊನೆಯುಸಿರೆಳೆದಿದ್ದಾಳೆ. ಎರಡನೆಯ ಪುತ್ರಿ ಮಝೀಹಾ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ.
ಮನೆಯಲ್ಲಿ ಇಟ್ಟಿದ್ದ ಹೆಚ್ಚುವರಿ ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಗ್ಯಾಸ್ ಸೋರಿಕೆ ಉಂಟಾದುದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಸ್ಪೀಕರ್ ಯು.ಟಿ ಖಾದರ್ ಭೇಟಿ
ದುರಂತ ಸಂಭವಿಸಿದ ಮನೆಗೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಶನಿವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಘಢ ಅತ್ಯಂತ ದುಃಖದಾಯಕ. ಗಾಯಾಳುಗಳು ಆಸ್ಪತ್ರೆಯಲ್ಲಿರುವಾಗ ಪರಿಹಾರ ಘೋಷಿಸುವುದು ಸರಿಯಲ್ಲ. ಗಾಯಾಳುಗಳಿಗೆ ಬೆಳಗಾವಿಯಿಂದ ಚರ್ಮ ತರಿಸಿ ಚಿಕಿತ್ಸೆ ನೀಡಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಮುಂಬಯಿಗೆ ಕರೆದೊಯ್ಯಲು ನಿರ್ಧರಿಸಿದ್ದೆ. ಆದರೆ ಈಗ ಪರಿಸ್ಥಿತಿ ಕೈಮೀರಿದೆ. ಪ್ರಕರಣದ ಕುರಿತು ಮುಖ್ಯಮಂತ್ರಿಗಳ ಜತೆಗೂ ಚರ್ಚಿಸಲಾಗಿದೆ. ಗ್ಯಾಸ್ ಕಂಪೆನಿ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ ಎಲ್ಲ ಇಲಾಖೆಗಳನ್ನು ಸೇರಿಸಿಕೊಂಡು ಚರ್ಚಿಸುತ್ತೇನೆ. ಅಧಿವೇಶನವಿದ್ದ ಹಿನ್ನೆಲೆಯಲ್ಲಿ ಭೇಟಿ ಸಾಧ್ಯವಾಗಿರಲಿಲ್ಲ. ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗ ಕುಟುಂಬದೊಂದಿಗೆ ಸದಾ ಇದೆ. ಎಲ್ಲ ಇಲಾಖೆಗಳು ಕುಟುಂಬದ ಸಹಕಾರಕ್ಕೆ ನಿಲ್ಲುತ್ತದೆ ಎಂದರು.
ಸಹಾಯಕ ಆಯುಕ್ತ ಹರ್ಷವರ್ಧನ್, ಎಸಿಪಿ ಧನ್ಯಾ ಎಂ.ನಾಯಕ್, ಎಚ್.ಪಿ ಗ್ಯಾಸ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಪ್ರಬಂಧಕ ರಾಹುಲ್ ತಹಶೀಲ್ದಾರ್ ಪುಟ್ಟರಾಜು ಸಹಿತ ಪ್ರಮುಖರು ಉಪಸ್ಥಿತರಿದ್ದರು.