Advertisement

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

11:03 PM Jan 01, 2025 | Team Udayavani |

ಸಿಡ್ನಿ: ಜಸ್‌ಪ್ರೀತ್‌ ಬುಮ್ರಾ ಸಾರಥ್ಯದಲ್ಲಿ ಪರ್ತ್‌ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿ ಮುನ್ನಡೆ ಸಾಧಿಸಿದ ಖುಷಿಯಲ್ಲಿದ್ದ ಭಾರತ, ರೋಹಿತ್‌ ಶರ್ಮ ಆಗಮನದೊಂದಿಗೆ ಸೋಲಿನ ಸುಳಿಗೆ ಸಿಲುಕಿದ್ದೊಂದು ವಿಪರ್ಯಾಸ. ಅಡಿಲೇಡ್‌ನ‌ ಡೇ ನೈಟ್‌ ಟೆಸ್ಟ್‌ ಮತ್ತು ಮೆಲ್ಬರ್ನ್ನ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ತಿರುಗೇಟು ನೀಡಿದ ಆಸ್ಟ್ರೇಲಿಯವೀಗ 2-1 ಮುನ್ನಡೆ ಸಾಧಿಸಿದೆ. ಸರಣಿ ಸಮಬಲದೊಂದಿಗೆ ಟ್ರೋಫಿಯನ್ನು ಉಳಿಸಿಕೊಳ್ಳಬೇಕಾದರೆ ಭಾರತ ಸಿಡ್ನಿಯ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು ಗೆಲ್ಲಲೇಬೇಕಿದೆ.

Advertisement

ಆದರೆ ಭಾರತ ಆಡುತ್ತಿರುವ ರೀತಿ ಯನ್ನು ನೋಡಿದರೆ ಗೆಲುವಿನ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬೇಕು. ಕನಿಷ್ಠ ಡ್ರಾ ಮಾಡಿಕೊಳ್ಳುವಷ್ಟೂ ಅಶಕ್ತವಾಗಿರು ವುದು ತಂಡದ ದುರಂತವೇ ಸೈ! ನಿಂತು ಆಡುವ ಸಾಮರ್ಥ್ಯ ಇದ್ದಿದ್ದೇ ಆದಲ್ಲಿ ಮೆಲ್ಬರ್ನ್ ಟೆಸ್ಟ್‌ ಪಂದ್ಯವನ್ನು ಆರಾಮ್‌ಸೇ ಡ್ರಾ ಮಾಡಿಕೊಳ್ಳಬಹುದಿತ್ತು. 1-1 ಸಮಬಲದೊಂದಿಗೆ ಸಿಡ್ನಿಗೆ ಸಾಗಬಹುದಿತ್ತು.

ಭಾರತದ ಬ್ಯಾಟಿಂಗ್‌ ಸಂಪೂರ್ಣ ನೆಲಕಚ್ಚಿರುವುದೇ ಸೋಲಿನ ಮೂಲ ಎಂಬುದರಲ್ಲಿ ಎರಡು ಮಾತಿಲ್ಲ. ನಾಯಕ ರೋಹಿತ್‌ ಶರ್ಮ, ಸೀನಿಯರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಕೈಕೊಡುತ್ತ ಬಂದಿದ್ದಾರೆ. ಹಾಗೆಯೇ ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌ ಕೂಡ. ಭಾರತದ ಬ್ಯಾಟರ್ ಸಿಡ್ನಿಯಲ್ಲೂ ಸಿಡಿಯದೇ ಹೋದರೆ ತಂಡದ ಭವಿಷ್ಯಕ್ಕಷ್ಟೇ ಅಲ್ಲ, ತಮ್ಮ ಭವಿಷ್ಯಕ್ಕೂ ಕುತ್ತು ತಂದುಕೊಳ್ಳುವುದು ಖಂಡಿತ. ಕೋಚ್‌ ಗೌತಮ್‌ ಗಂಭೀರ್‌ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನೀಡಿದರೆನ್ನಲಾದ ಎಚ್ಚರಿಕೆ ಕೂಡ ಇದಕ್ಕೆ ಪುಷ್ಟಿ ನೀಡುತ್ತದೆ.

ಸಿಡ್ನಿ ಸವಾಲು ಸುಲಭದ್ದಲ್ಲ
ಆಸ್ಟ್ರೇಲಿಯವೀಗ ಭಾರತದ ದೌರ್ಬಲ್ಯ ವನ್ನು ಸಂಪೂರ್ಣವಾಗಿ ಅರಿತು ಯಶಸ್ವಿ ಕಾರ್ಯತಂತ್ರ ರೂಪಿಸುತ್ತಿರುವ ಕಾರಣ ರೋಹಿತ್‌ ಪಡೆಗೆ ಸಿಡ್ನಿ ಸವಾಲು ಖಂಡಿತ ಸುಲಭದ್ದಲ್ಲ. ಸೂಕ್ತ ಬ್ಯಾಟಿಂಗ್‌ ಸರದಿ ಹಾಗೂ ಬೌಲಿಂಗ್‌ ಕಾಂಬಿನೇಶನ್‌ ರೂಪಿಸುವಲ್ಲಿ ಎಡವುತ್ತಲೇ ಇರುವ ಭಾರತಕ್ಕೆ ಸಿಡ್ನಿಯಲ್ಲೂ ಈ ಗೊಂದಲ ಮುಂದುವರಿಯಲಿದೆ.

ಶುಭಮನ್‌ ಗಿಲ್‌ ಆಡುವ ಬಳಗಕ್ಕೆ ಮರಳುವ ಎಲ್ಲ ಸಾಧ್ಯತೆಗಳಿವೆ. 2024ರ ಟೆಸ್ಟ್‌ನಲ್ಲಿ 866 ರನ್‌ ಗಳಿಸಿದ ಹಿರಿಮೆ ಇವರದು. ಆದರೆ ಆಸ್ಟ್ರೇಲಿಯದಲ್ಲಿ ಸಿಕ್ಕಿದ ಅವಕಾಶವನ್ನು ಬಾಚಿಕೊಳ್ಳಲಿಲ್ಲ ಎಂಬುದು ಅಷ್ಟೇ ಸತ್ಯ. ಗಿಲ್‌ ಅವರಿಗಾಗಿ ಯಾರನ್ನು ಬಿಡುವುದು ಎಂಬುದು ದೊಡ್ಡ ಪ್ರಶ್ನೆ.

Advertisement

ಹಾಗೆಯೇ ಭಾರತದ ಬೌಲಿಂಗ್‌ ಯೂನಿಟ್‌ ಕೂಡ ಘಾತಕವಾಗಿಲ್ಲ. ಮೆಕ್‌ಗ್ರಾತ್‌ ಹೇಳಿದಂತೆ ಬುಮ್ರಾ ಇಲ್ಲದೇ ಹೋಗಿದ್ದರೆ ಈವರೆಗಿನ ಎಲ್ಲ ಪಂದ್ಯಗಳನ್ನೂ ಆಸ್ಟ್ರೇಲಿಯವೇ ಗೆಲ್ಲುತ್ತಿತ್ತು!

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶದ ಹಿನ್ನೆಲೆಯಲ್ಲಿ ಭಾರತಕ್ಕೆ ಇದು “ಮಸ್ಟ್‌ ವಿನ್‌’ ಟೆಸ್ಟ್‌. ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳನ್ನು ಉರುಳಿಸುವ ತಾಕತ್ತು ಟೀಮ್‌ ಇಂಡಿಯಾಕ್ಕೆ ಇದೆಯೇ?.

ಪರಿವರ್ತನೆಯ ಘಟ್ಟದಲ್ಲಿ…
ಮತ್ತೂಂದು ಸೋಲಿನ ಫ‌ಲಿತಾಂಶ ದಾಖಲಾದರೆ ವರ್ಷಾರಂಭದ ಈ ಟೆಸ್ಟ್‌ ಅನೇಕರ ಪಾಲಿಗೆ ಅಂತಿಮ ಟೆಸ್ಟ್‌ ಆಗುವ ಸಾಧ್ಯತೆ ದಟ್ಟವಾಗಿದೆ. ಮುಖ್ಯವಾಗಿ ಹಿರಿಯ ತಲೆಗಳಾದ ರೋಹಿತ್‌, ಕೊಹ್ಲಿ ಟೆಸ್ಟ್‌ ತಂಡದಲ್ಲಿ ಕಾಣಿಸಿಕೊಳ್ಳುವುದು ಕಷ್ಟ ಎಂದೇ ಹೇಳಬೇಕು. ಈಗಾಗಲೇ ರೋಹಿತ್‌ ನಿವೃತ್ತಿ ಕುರಿತಂತೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಕೊಹ್ಲಿ ಆಡಿದ್ದು ಸಾಕು ಎಂಬ ಸ್ವರಗಳೂ ಕೇಳಿಬಂದಿವೆ. ಒಟ್ಟಾರೆ ಭಾರತದ ಟೆಸ್ಟ್‌ ತಂಡವೀಗ ಪರಿವರ್ತನೆಯ ಘಟ್ಟದಲ್ಲಿದೆ.
ಸಿಡ್ನಿ ಟೆಸ್ಟ್‌ ಬಳಿಕ ಭಾರತವಿನ್ನು ಟೆಸ್ಟ್‌ ಸರಣಿ ಆಡುವುದು ಜೂನ್‌ನಲ್ಲಿ. ಆಗ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಿ 5 ಟೆಸ್ಟ್‌ಗಳಲ್ಲಿ ಪಾಲ್ಗೊಳ್ಳಲಿದೆ. ನಸೀಬು ಏನಾದರೂ ಇದ್ದರೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ತಲುಪೀತು. ಇದನ್ನು ಬದಿಗಿಟ್ಟು ಹೇಳುವುದಾದರೆ, ಭಾರತಕ್ಕಿನ್ನು 6 ತಿಂಗಳ ಕಾಲ ಟೆಸ್ಟ್‌ ವಿರಾಮ. ಹೀಗಾಗಿ ಸೀನಿಯರ್‌ಗಳಿಗೆ, ಆಯ್ಕೆ ಸಮಿತಿಗೆ, ಬಿಸಿಸಿಐಗೆ ಟೆಸ್ಟ್‌ ಭವಿಷ್ಯದ ಕುರಿತು ಪುನರಾವಲೋಕನ ಮಾಡಲು ಇದು ಒಳ್ಳೆಯ ಸಮಯ. ಹೊಸತೊಂದು ಟೆಸ್ಟ್‌ ತಂಡ ಕಟ್ಟುವ ಕುರಿತು ಯೋಜನೆ ಗಳನ್ನು ರೂಪಿಸಲು ಸಕಾಲ.

 

Advertisement

Udayavani is now on Telegram. Click here to join our channel and stay updated with the latest news.

Next