Advertisement

ಸಮುಚ್ಛಯಗಳ ಎತ್ತರ ಹೆಚ್ಚಳ?

12:44 AM Jul 17, 2019 | Lakshmi GovindaRaj |

ಬೆಂಗಳೂರು: ಮುಂದಿನ ಐದು ವರ್ಷಗಳ ಕಾಲ ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಯೋಜನೆ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸಿರುವ ಬೆನ್ನಲ್ಲೇ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ಮತ್ತಷ್ಟು ಎತ್ತರಕ್ಕೆ ಏರುವ ಸಾಧ್ಯತೆ ಇದೆ. ಇದು ಅಸುರಕ್ಷತೆಯ ಆತಂಕಕ್ಕೂ ಕಾರಣವಾಗಲಿದೆ.

Advertisement

ನಿಷೇಧದ ಚಿಂತನೆ ಪ್ರಸ್ತಾಪವಾಗುತ್ತಿದ್ದಂತೆ ಭವಿಷ್ಯದಲ್ಲಿ ಹೊಸ ಅಪಾರ್ಟ್‌ಮೆಂಟ್‌ಗಳಿಗಂತೂ ತಾತ್ಕಾಲಿಕ ಬ್ರೇಕ್‌ ಬೀಳಲಿದೆ. ಇದರೊಂದಿಗೆ ಈಗಾಗಲೇ ಇರುವ ಕಟ್ಟಡಗಳಿಗೆ ಸಹಜವಾಗಿ ಬೇಡಿಕೆ ಹೆಚ್ಚಲಿದೆ. ಬಿಲ್ಡರ್‌ಗಳಲ್ಲಿ ಇದರ ಲಾಭ ಪಡೆಯುವ ಲೆಕ್ಕಾಚಾರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮಂಜೂರಾದ ಯೋಜನೆಗಳು ಮತ್ತು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮಹಡಿಗಳನ್ನು ಎತ್ತರಿಸುವ ಸಾಧ್ಯತೆ ಹೆಚ್ಚಿದೆ. ಅಂದರೆ ನಿಯಮಗಳ ಉಲ್ಲಂಘನೆಗೆ ಇದು ಇಂಬುಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿಯಮ ಪಾಲನೆ: ಪ್ರಸ್ತುತ ಎಲ್ಲ ಕಟ್ಟಡಗಳು ನಿಯಮಾನುಸಾರ ಇದ್ದರೂ (ಬಿಬಿಎಂಪಿ ಪ್ರಕಾರ) ಕಟ್ಟಡಗಳ ಕುಸಿತ ನಿರಂತರವಾಗಿದ್ದು, ಅದಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಮಧ್ಯೆ ಹೀಗೆ ನಿಯಮಬಾಹಿರವಾಗಿ ಗಗನಚುಂಬಿ ವಸತಿ ಸಂಕೀರ್ಣಗಳ ಎತ್ತರಕ್ಕೆ ಅವಕಾಶ ಮಾಡಿಕೊಟ್ಟರೆ, ಬರುವ ದಿನಗಳಲ್ಲಿ ಇನ್ನಷ್ಟು ಅಸುರಕ್ಷತೆಯ ಆತಂಕ ಎದುರಾಗಲಿದೆ. ಹಾಗಾಗಿ, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ತರುವುದರ ಜತೆಗೆ ಅವುಗಳ ಪಾಲನೆಗೂ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು.

ಉಲ್ಲಂಘನೆ ಸಾಧ್ಯತೆ ಹೆಚ್ಚು: “ಒಂದು ವೇಳೆ ಸರ್ಕಾರ ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ನಿಷೇಧ ವಿಧಿಸಿದರೆ, ಅದು ಖಂಡಿತ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ನಿಯಮ ಉಲ್ಲಂಘನೆ ರೂಪದಲ್ಲಿ ಪರಿಣಮಿಸುತ್ತದೆ. ದೊಡ್ಡ ಪ್ರಮಾಣದ ಅಪಾರ್ಟ್‌ಮೆಂಟ್‌ಗಳಲ್ಲಿ ಈ ಸಾಧ್ಯತೆಗಳು ಕಡಿಮೆ. ಆದರೆ, ಅಸಂಘಟಿತ ಬಿಲ್ಡರ್‌ಗಳು ಕೈಗೆತ್ತಿಕೊಳ್ಳುವ ಪ್ರತ್ಯೇಕ ಕಟ್ಟಡಗಳ ನಿರ್ಮಾಣ ಯೋಜನೆಗಳಲ್ಲಿ ಈ ಉಲ್ಲಂಘನೆಗಳು ಆಗಲಿವೆ’ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಡೆವೆಲಪರ್ ಸಂಘಗಳ ಒಕ್ಕೂಟ (ಕ್ರೆಡಾಯ್‌) ಬೆಂಗಳೂರು ನಗರದ ಚುನಾಯಿತ ಅಧ್ಯಕ್ಷ ಭಾಸ್ಕರ್‌ ಟಿ. ನಾಗೇಂದ್ರಪ್ಪ ತಿಳಿಸುತ್ತಾರೆ.

ಅದೇನೇ ಇರಲಿ, ಯಾವೊಂದು ಅಪಾರ್ಟ್‌ಮೆಂಟ್‌ ಅಥವಾ ಪ್ರತ್ಯೇಕ ಕಟ್ಟಡ ಸದೃಢವಾಗಿದೆ ಎಂಬುದಕ್ಕೆ ಅಧಿಕಾರಿಗಳ ಜತೆಗೆ ಅದರ ಗುಣಮಟ್ಟವನ್ನು ದೃಢೀಕರಿಸುವಂತಹ ಮೂರನೇ ವ್ಯಕ್ತಿಯ ಅವಶ್ಯಕತೆಯೂ ಇದೆ. ಈ ನಿಟ್ಟಿನಲ್ಲಿ ಕಟ್ಟಡದ ಸ್ಟ್ರಕ್ಚರಲ್‌ ಎಂಜಿನಿಯರ್‌ರಿಂದ ಪ್ರಮಾಣೀಕರಿಸುವುದು ಕಡ್ಡಾಯವಾಗಬೇಕು ಎಂದೂ ಅವರು ಅಭಿಪ್ರಾಯಪಡುತ್ತಾರೆ.

Advertisement

“ಹೊಸ ಅಪಾರ್ಟ್‌ಮೆಂಟ್‌ಗಳನ್ನು ಒಂದು ವೇಳೆ ತಾತ್ಕಾಲಿಕವಾಗಿ ನಿಷೇಧಿಸಿದರೆ, ಲಭ್ಯವಿರುವ ವಸತಿ ಸಮುಚ್ಛಯಗಳಿಗೆ ಬೇಡಿಕೆ ಹೆಚ್ಚುತ್ತದೆ. ಅದರ ಲಾಭ ಬಿಲ್ಡರ್‌ಗಳಿಗೆ ಆಗುತ್ತದೆ. ಹಾಗಂತ, ನಿಯಮ ಬಾಹಿರವಾಗಿ ಕಟ್ಟುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ, ಉಲ್ಲಂಘನೆಗಳು ಆಗಿದ್ದು ಕಂಡುಬಂದರೆ ಖರೀದಿಗೆ ಯಾರು ಮುಂದೆಬರುತ್ತಾರೆ?’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಮಾಜಿ ಅಧ್ಯಕ್ಷ ಹಾಗೂ ಸ್ವತಃ ಬಿಲ್ಡರ್‌ ಮಾನಂದಿ ಎನ್‌. ಸುರೇಶ್‌ ಸ್ಪಷ್ಟಪಡಿಸುತ್ತಾರೆ.

ಕರ್ನಾಟಕದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ)ದ ಅಂತರ್ಜಾಲ ತಾಣದಲ್ಲಿನ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆ 2,684 ಯೋಜನೆಗಳು ಅನುಮೋದನೆಗೊಂಡಿದ್ದು, 240 ವಿವಿಧ ಹಂತಗಳಲ್ಲಿ ಪರಿಶೀಲನೆಯಲ್ಲಿವೆ. ಇವುಗಳಲ್ಲಿ ನಗರದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿವೆ.

ಸೆಟ್‌ಬ್ಯಾಕ್‌ ಅಗತ್ಯ: 11.5 ಮೀ. ಎತ್ತರದ ಕಟ್ಟಡಗಳಿಗೆ ನಿರ್ಮಿಸಲಾಗುತ್ತಿರುವ ಜಾಗದ ಪೈಕಿ ಶೇ. 8ರಷ್ಟು ಸೆಟ್‌ಬ್ಯಾಕ್‌ ಬಿಡುವುದು ನಿಯಮ. ಈ ಕಟ್ಟಡಗಳು ರಸ್ತೆ ಬದಿಯಲ್ಲಿದ್ದರೆ ಸೆಟ್‌ಬ್ಯಾಕ್‌ ಪ್ರಮಾಣ ಶೇ. 12ರಷ್ಟಾಗುತ್ತದೆ. ಅದೇ ರೀತಿ, 11.5 ಮೀ.ಗಿಂತ ಎತ್ತರ ಇರುವ ಕಟ್ಟಡಗಳು ಅಪಾರ್ಟ್‌ಮೆಂಟ್‌ಗಳೆಂದು ಪರಿಗಣಿಸಲಾಗುತ್ತದೆ. ಅವುಗಳಿಗೆ ಒಟ್ಟಾರೆ ಆ ಅಪಾರ್ಟ್‌ಮೆಂಟ್‌ ಉದ್ದದ ಮೂರನೇ ಒಂದು ಭಾಗದಷ್ಟು ಸೆಟ್‌ಬ್ಯಾಕ್‌ ಬಿಡಬೇಕಾಗುತ್ತದೆ. ಉದಾಹರಣೆಗೆ 15 ಮೀ. ಎತ್ತರದ ಕಟ್ಟಡಕ್ಕೆ 5 ಮೀ. ಸೆಟ್‌ಬ್ಯಾಕ್‌ ಬಿಡಬೇಕು.

15 ದಿನಕ್ಕೊಮ್ಮೆ ವರದಿ ಸಲ್ಲಿಕೆ: ಹೊಸ ಅಪಾರ್ಟ್‌ಮೆಂಟ್‌ಗಳ ನಿಷೇಧದ ವಿಚಾರ ಇನ್ನೂ ಸರ್ಕಾರದ ಚಿಂತನೆ ಹಂತದಲ್ಲಿದೆ. ಅಧಿಕೃತವಾಗಿ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಅಷ್ಟಕ್ಕೂ ಬಹುಮಹಡಿ ವಸತಿ ಸಮುಚ್ಛಯಗಳು ಬಹುತೇಕ ನಿಯಮಾನುಸಾರ ಇರುತ್ತವೆ. ಆದರೆ, ಕೆಲವು ಪ್ರತ್ಯೇಕ ಕಟ್ಟಡಗಳಲ್ಲಿ ನಿಯಮ ಉಲ್ಲಂಘನೆ ಕಾಣಬಹುದು. ಇದಕ್ಕೂ ಕಡಿವಾಣ ಹಾಕುವ ಸಂಬಂಧ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ವಿರುದ್ಧ ಆಯಾ ವಲಯದ ವ್ಯಾಪ್ತಿಯಲ್ಲಿರುವ ಕಾರ್ಯನಿರ್ವಹಣಾ ಎಂಜಿನಿಯರ್‌ಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳತಕ್ಕದ್ದು ಎಂದು ಮತ್ತೂಂದು ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೆ, ಕಟ್ಟಡ ನಿಯಮ ಉಲ್ಲಂ ಸಿದ ಪ್ರಕರಣಗಳ ಬಗ್ಗೆ ಪ್ರತಿ 15 ದಿನಗಳಿಗೊಮ್ಮೆ ಉಪ ನೋಂದಣಾಧಿಕಾರಿಗಳಿಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ ಎಂದು ಪಾಲಿಕೆಯ ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ಆರ್‌. ಪ್ರಸಾದ್‌ ಸ್ಪಷ್ಟಪಡಿಸುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next