ಉಪ್ಪಿನಂಗಡಿ: ಗುರುವಾ ಯನಕೆರೆ-ಉಪ್ಪಿನಂಗಡಿ ನಡುವಿನ ರಸ್ತೆಯ ಲ್ಲಿನ ಹೊಂಡ ಮುಚ್ಚುವ ಕಾಟಾಚಾರದ ಕಾಮಗಾರಿಯನ್ನು ಸ್ಥಳೀಯರೇ ಪ್ರತಿಭಟಿಸಿ ಅಧಿಕಾರಿಗಳನ್ನೇ ಸ್ಥಳಕ್ಕೆ ಕರೆಯಿಸಿ ಗುತ್ತಿಗೆ ದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯು ಹಲವು ಹೊಂಡಗಳಿಂದ ತುಂಬಿದ್ದು ಸಂಚಾರಕ್ಕೆ ತೊಡಕಾಗಿತ್ತು. ಈ ಕುರಿತು ವ್ಯಾಪಕವಾಗಿ ಪ್ರತಿಭಟನೆ, ವರದಿಗಳು ಬಂದಿದ್ದು ಇದಕ್ಕೆ ತತ್‌ಕ್ಷಣ ಸ್ಪಂದಿಸಿದ ಕ್ಷೇತ್ರದ ಶಾಸಕ ಹರೀಶ ಪೂಂಜಾ ಇಲಾಖಾ ಅಧಿಕಾರಿಗಳಿಗೆ ಯಾವುದಾದರೂ ಅನುದಾನ ಬಳಸಿ ಸದ್ಯಕ್ಕೆ ಹೊಂಡಗಳ ಮುಚ್ಚುವಂತೆ ಸಲಹೆ ನೀಡಿದ್ದರು.
ಇಲಾಖೆಯು ರಾಜ್ಯ ಹೆದ್ದಾರಿ ವಾರ್ಷಿಕ ನಿರ್ವಹಣಾ ನಿಧಿಯಿಂದ 19 ಲಕ್ಷ ವೆಚ್ಚದಲ್ಲಿ ಕಾಮಗಾರಿಯ ಗುತ್ತಿಗೆ ನೀಡಿತ್ತು. ಈ ಮಧ್ಯೆ ಕರಾಯ ಕಲ್ಲೇರಿ ನಡುವೆ ಸುರಿದ ಮಳೆಗೆ ವಹನ ಚಲಿಸಲು ಅಸಾಧ್ಯವಾಗಿದ್ದು, ಗ್ರಾಮಸ್ಥರೇ ಕಲ್ಲು, ಮಣ್ಣ ಹಾಕುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ಆದರೆ ರಸ್ತೆಯ ಹೊಂಡ ಮುಚ್ಚುವ ಕಾಮಗಾರಿ ವಹಿಸಿದ ಗುತ್ತಿಗೆದಾರರು ಮಣ್ಣಿನಿಂದ ಮುಚ್ಚಿದ ರಸ್ತೆಯ ಮಣ್ಣು ಹೊರಗೆ ತೆಗೆಯದೇ ತೇಪೆ ಕಾರ್ಯವನ್ನು ನಡೆಸುತ್ತಿದ್ದರು. ಇದನ್ನು ಅರಿತ ಗ್ರಾಮಸ್ಥರಾದ ಜಯರಾಮ ಆಚಾರ್ಯ, ಜಗದೀಶ ಗೌಡ ಲಿಂಗಪ್ಪ, ಆನಂದ ಆಚಾರ್ಯ ಹಾಗೂ ಇತರರು ಗುತ್ತಿಗೆದಾರರನ್ನು ಈ ಬಗ್ಗೆ ಪ್ರಶ್ನಿಸಿ, ಮಣ್ಣು ಹೊರ ತೆಗೆದು ಕಾಮಗಾರಿ ಆರಂಭಿಸಿ ಎಂದಾಗ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಪ್ರತಿಭಟನಾಕಕರು ಸ್ಥಳದಿಂದಲೇ ಲೋಕೋಪಯೋಗಿ ಇಲಾಖಾ ಕಿರಿಯ ಎಂಜಿನಿಯರ್ ವರ್ಷ ಅವರನ್ನು ಸಂಪರ್ಕಿಸಿ ವಿಚಾರವನ್ನು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಿರಿಯ ಎಂಜಿನಿಯರ್ ಗುತ್ತಿಗೆದಾರರಿಗೆ ಕಾಮಗಾರಿಯನ್ನು ಸಮರ್ಪಕವಾಗಿ ನಿಭಾಯಿಸಲು ಸೂಚನೆ ನೀಡಿದರು. ಜತೆಗೆ ಕಾಟಚಾರದ ಕಾಮಗಾರಿ ನಡೆಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಮನವರಿಕೆ ಮಾಡಿದರು. ಆ ಬಳಿಕ ಸಮರ್ಪಕವಾಗಿ ಹಗೂ ಪರಿಪೂರ್ಣವಾಗಿ ಕಾಮಗಾರಿ ನಡೆಸುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡಿದ್ದು ಕಾರ್ಯ ಪ್ರಗತಿಯಲ್ಲಿದೆ.