Advertisement

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

02:54 PM Dec 27, 2024 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯ ವಸತಿ ಸಮುಚ್ಚಯ ಮತ್ತು ಮಾಲ್‌ಗ‌ಳಲ್ಲಿ ಹಸಿತ್ಯಾಜ್ಯ ಸಂಸ್ಕರಣೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮಹಾನಗರ ಪಾಲಿಕೆ ಮುಂದಾಗಿದೆ. ಇಲ್ಲವಾದರೆ ಭಾರೀ ದಂಡ ಪ್ರಯೋಗಕ್ಕೆ ನಿರ್ಧರಿಸಲಾಗಿದೆ.

Advertisement

ನಗರದಲ್ಲಿ ಪ್ರತೀ ದಿನ ಸುಮಾರು 250 ಟನ್‌ಗೂ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗುತ್ತದೆ. ಇದನ್ನು ಪಚ್ಚನಾಡಿಗೆ ಸಾಗಿಸಿ ಸಂಸ್ಕರಣೆ ಮಾಡಲಾಗುತ್ತದೆ. ಇಲ್ಲಿ ಭೂ ಭರ್ತಿ ಮಾಡುವ ತ್ಯಾಜ್ಯದ ಪ್ರಮಾಣ ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಸತಿ ಸಮುಚ್ಚಯ, ಮಾಲ್‌ಗ‌ಳಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಅಲ್ಲೇ ಸಂಸ್ಕರಣೆ ಮಾಡಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಲು ಪಾಲಿಕೆ ಮುಂದಾಗಿದೆ.

ಪಾಲಿಕೆಗೆ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸ್ವಚ್ಛ ಸರ್ವೇಕ್ಷಣೆ ರ್‍ಯಾಂಕಿಂಗ್‌ನಲ್ಲಿಯೂ ಇದು ಹಿನ್ನಡೆಗೆ ಕಾರಣವಾಗಿದೆ. ಹೀಗಾಗಿ ಪಾಲಿಕೆ ಕಠಿಣ ನಿಯಮಕ್ಕೆ ಮುಂದಾಗಿದೆ.

ಯಾವಾಗಿನಿಂದ ಜಾರಿ?
ಪಾಲಿಕೆ ವ್ಯಾಪ್ತಿಯಲ್ಲಿರುವ ಬೃಹತ್‌ ತ್ಯಾಜ್ಯ ಉತ್ಪಾದಕರಾದ ಮಾಲ್‌ಗ‌ಳು, ವಸತಿ ಸಮುಚ್ಚಯಗಳಲ್ಲಿ 2025ರ ಜನವರಿ ತಿಂಗಳ ಅಂತ್ಯದ ಬಳಿಕ ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ ವಿಲೇವಾರಿ ಮಾಡಬೇಕು. ಒಂದು ವೇಳೆ ವಿಫಲವಾದಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ಮತ್ತು ಮನಪಾ ಘನ ತ್ಯಾಜ್ಯ ನಿರ್ವಹಣೆ ಬೈಲಾ-2019 ರ ಪ್ರಕಾರ 15,000 ರೂ. ದಂಡ ವಿಧಿಸಲು ಅವಕಾಶವಿದೆ. ಈ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಲು ಪಾಲಿಕೆ ಈಗಿಂದಲೇ ಸಿದ್ಧತೆ ಮಾಡುತ್ತಿದೆ.

ಯಾರಿಗೆಲ್ಲಾ ಕಡ್ಡಾಯ? ಪಾಲಿಕೆ ವ್ಯಾಪ್ತಿಯಲ್ಲಿನ 30ಕ್ಕಿಂತ ಹೆಚ್ಚಿನ ಫ್ಲಾಟ್‌ಗಳನ್ನು ಹೊಂದಿರುವ ವಸತಿ ಸಮುಚ್ಚಯಗಳು, 5000 ಚ.ಅಡಿಗೂ ಅಧಿಕ ವಿಸ್ತೀರ್ಣದ ಸಂಕೀರ್ಣಗಳು, ಉದ್ದಿಮೆ ಮತ್ತು ವ್ಯಾಪಾರಸ್ಥರು, ಮಾಲ್‌ಗ‌ಳು, ವಾಣಿಜ್ಯ ಸಂಸ್ಥೆಗಳು, ಪೂಜಾ ಸ್ಥಳಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಖಾಸಗಿ ಕಂಪನಿಗಳು ಹಾಗೂ ಇನ್ನಿತರ ಇಲಾಖೆಗಳು ಪ್ರತಿ ನಿತ್ಯ ತಮ್ಮ ಉದ್ದಿಮೆಯಿಂದ ಸರಾಸರಿ 100 ಕೆ.ಜಿ. ಗಿಂತ ಅಧಿಕ ತ್ಯಾಜ್ಯ ಉತ್ಪಾದಿಸುವ ಬೃಹತ್‌ ತ್ಯಾಜ್ಯ ಉತ್ಪಾದಕರು ಕಡ್ಡಾಯವಾಗಿ ಹಸಿತ್ಯಾಜ್ಯ ಸಂಸ್ಕರಣೆಯನ್ನು ತಮ್ಮ ಆವರಣದಲ್ಲೇ ಮಾಡಬೇಕು. ಇಲ್ಲಿ ಘನ ತ್ಯಾಜ್ಯವನ್ನು ಹಸಿತ್ಯಾಜ್ಯ, ಒಣತ್ಯಾಜ್ಯ, ಅಪಾಯಕಾರಿ ತ್ಯಾಜ್ಯಗಳಾಗಿ ವಿಂಗಡಿಸಬೇಕು. ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ ಗೊಬ್ಬರ ಉತ್ಪತ್ತಿ ಮಾಡಬೇಕು ಎನ್ನುವುದು ನಿಯಮ. ಇದರ ಅನುಷ್ಠಾನಕ್ಕೆ ಜ. 15ರ ವರೆಗೆ ಅವಕಾಶ ನೀಡಲಾಗಿದೆ.

Advertisement

ತ್ಯಾಜ್ಯ ಸಂಸ್ಕರಣೆಗೆ ಸೂಚಿಸಲಾಗಿದೆ
ಪಾಲಿಕೆ ವ್ಯಾಪ್ತಿಯಲ್ಲಿ ನಿಯಮದ ಪ್ರಕಾರ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಮುಂದಾಗಿದೆ. ಅದರಂತೆ 30ಕ್ಕಿಂತ ಹೆಚ್ಚಿನ ವಸತಿ ಸಮುಚ್ಚಯಗಳು ಸಹಿತ ಮಾಲ್‌, ವಾಣಿಜ್ಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣೆಗೆ ಮಾಡಲು ಸೂಚನೆ ನೀಡಲಾಗಿದೆ.
– ಆನಂದ್‌ ಸಿ.ಎಲ್‌., ಪಾಲಿಕೆ ಆಯುಕ್ತ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next