Advertisement

ಪ್ರೀತಿಸಿ ವಿವಾಹವಾಗಿದ್ದ ಜೋಡಿ : ಮಕ್ಕಳಾಗದ್ದಕ್ಕೆ ಪೊಲೀಸ್‌ ದಂಪತಿ ನೇಣಿಗೆ

11:41 AM Dec 19, 2020 | Suhan S |

ಬೆಂಗಳೂರು: ಸಿಐಡಿ ಡಿವೈಎಸ್ಪಿ ವಿ.ಲಕ್ಷ್ಮೀ ಅನುಮಾನಾಸ್ಪದ ಸಾವು ಬೆನ್ನಲ್ಲೇ ಶುಕ್ರವಾರ ಪೊಲೀಸ್‌ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತ ನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಬರಹಗಾರರಾಗಿದ್ದ ಹೆಡ್‌ಕಾನ್ಸ್‌ ಟೇಬಲ್‌ ಡಿ.ವಿ.ಸುರೇಶ್‌(36) ಅವರ ಪತ್ನಿ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಎಸ್‌ಬಿಯಲ್ಲಿ ಹೆಡ್‌ಕಾನ್ಸ್‌ಸ್ಟೇಬಲ್‌ ಆಗಿದ್ದ ಸಿ.ಬಿ.ಶೀಲಾ(35) ಮೃತ ದಂಪತಿ. ಘಟನೆ ಸಂಬಂಧ ಶೀಲಾ ಅವರ ಸಹೋದರಿ ನೀಡಿದ ದೂರಿನ ಮೇರೆಗೆ ಎಫ್ಐಆರ್‌ ದಾಖಲಾಗಿದೆ ಎಂದು ಕೊತ್ತನೂರು ಪೊಲೀಸರು ಹೇಳಿದರು.

ಗುರುವಾರ ರಾತ್ರಿ ಸುರೇಶ್‌ ಎಸಿಪಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ಇದ್ದ ಕಾರಣ ರಾತ್ರಿವರೆಗೂ ಕಚೇರಿಯಲ್ಲೇ ಇದ್ದು, ಸಹೋದ್ಯೋಗಿಗಳ ಜತೆ ಚೆನ್ನಾಗಿಯೇ ಮಾತನಾಡಿಕೊಂಡು ಮನೆಗೆ ಹೋಗಿದ್ದರು. ಶುಕ್ರವಾರ ಬೆಳಗ್ಗೆ ಸಹೋದ್ಯೋಗಿಯೊಬ್ಬರು ಸುರೇಶ್‌ಗೆ ಕರೆ ಮಾಡಿ ಕೆಲಸಕ್ಕೆ ಬರುವಂತೆ ಫೋನ್‌ ಮಾಡಿದ್ದಾರೆ. ಆದರೆ,ಕರೆ ಸ್ವೀಕರಿಸಿಲ್ಲ.

ಹೀಗಾಗಿ ಅವರ ಮನೆ ಸಮೀಪವಿದ್ದ ಮತ್ತೂಬ್ಬ ಸಹೋದ್ಯೋಗಿಗೆ ಸುರೇಶ್‌ ಮನೆ ಬಳಿ ಹೋಗುವಂತೆ ಸೂಚಿಸಿದ್ದಾರೆ. ಮನೆ ಬಳಿಗೆ ಬಂದ ಸಿಬ್ಬಂದಿ ಬಾಗಿಲು ತಟ್ಟಿ ಕೂಗಿದರು. ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಬಾಗಿಲು ಜೋರಾಗಿ ತಳ್ಳಿದಾಗ ತೆರೆದುಕೊಂಡಿದೆ. ಒಳಗೆ ಹೋಗಿ ನೋಡಿದಾಗ ಸುರೇಶ್‌ ಕೊಠಡಿಯಲ್ಲಿ ಫ್ಯಾನ್‌ಗೆ ಸ್ಕ್ರೀನ್‌ ಬಟ್ಟೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮತ್ತೂಂದು ಕೊಠಡಿ ಬಾಗಿಲು ಹಾಕಿರುವುದನ್ನು ಗಮನಿಸಿ ಒಡೆದು ನೋಡಿದಾಗ ಪತ್ನಿ ಶೀಲಾ ಹಗ್ಗದಿಂದ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ಕೂಡಲೇ ಕೊತ್ತನೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಎರಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆಂದು ಪೊಲೀಸರು ಹೇಳಿದರು.

Advertisement

ಇದನ್ನೂ ಓದಿ : ರಾಜೀನಾಮೆ ಕೊಟ್ಟು BJP ಸೇರ್ಪಡೆಗೆ ಹೊರಟಿದ್ದ ಜಿತೇಂದ್ರ ತಿವಾರಿ ಒಂದೇ ದಿನದಲ್ಲಿ “ಯೂ ಟರ್ನ್”

ಮಾನಸಿಕವಾಗಿ ನೊಂದಿದ್ದರು :  ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಸುರೇಶ್‌ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶೀಲಾ ಒಟ್ಟಿಗೆ ವೃತ್ತಿ ಆರಂಭಿಸಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. 10 ವರ್ಷಗಳ ಹಿಂದೆ ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದರು. ಕೊತ್ತನೂರಿನ ನಕ್ಷತ್ರ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಮಕ್ಕಳು ಆಗಿರಲಿಲ್ಲ. ಜತೆಗೆ ಇಬ್ಬರು ಮನೆಯ ಪೋಷಕರು ಕರೆ ಮಾಡುತ್ತಿದ್ದಾಗಲೂ ಇದೇ ವಿಚಾರವಾಗಿ ಚರ್ಚಿಸುತ್ತಿದ್ದರು. ಇದರೊಂದಿಗೆ ಮನೆಗೆ ಬರುತ್ತಿದ್ದ ಸಂಬಂಧಿಕರೂ ಮಕ್ಕಳು ಆಗದಿರುವ ಬಗ್ಗೆ ಕೇಳುತ್ತಿದ್ದರು. ಹೀಗಾಗಿ ಇದೇ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದರು ಎಂದು ಪೊಲೀಸರು ಹೇಳಿದರು.

ಪತ್ನಿ ಮೃತದೇಹ ನೋಡಿ ಸುರೇಶ್‌ ಆತ್ಮಹತ್ಯೆ :  ಗುರುವಾರ ದಂಪತಿ ಕರ್ತವ್ಯಕ್ಕೆ ಹಾಜರಾಗಿದ್ದರು.ಕೆಲಸ ಮುಗಿಸಿ ಮನೆಗೆ ಹೋದ ಶೀಲಾ, ಪತಿ ಸುರೇಶ್‌ ಜತೆ ಸಣ್ಣ ವಿಚಾರಕ್ಕೆ ಜಗಳವಾಡಿದ್ದರು. ಆಗ, ಶೀಲಾ 1 ಕೋಣೆಯಲ್ಲಿ ಮೊದಲಿಗೆ ಹಗ್ಗದಿಂದ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಎದ್ದ ಸುರೇಶ್‌, ರೂಮ್‌ನಲ್ಲಿ ಪತ್ನಿ ಮೃತ ದೇಹಕಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಮಕ್ಕಳಾಗದ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next