ಶ್ರೀನಗರ: ವಾಹನವೊಂದು ಕಣಿವೆಗೆ ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ (Kishtwar) ಜಿಲ್ಲೆಯ ಮಸ್ಸು-ಪಾಡರ್ ಪ್ರದೇಶ (Massu-Padder area) ದಲ್ಲಿ ನಡೆದಿದೆ.
ಆರು ಜನರಿದ್ದ ವಾಹನವು ಕಮರಿಗೆ ಬಿದ್ದಿದ್ದು, ನಾಪತ್ತೆಯಾಗಿರುವ ಇಬ್ಬರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಯಾವ ವಾಹನವು ಕಮರಿಗೆ ಬಿದ್ದಿದೆ ಎಂದು ಪೊಲೀಸರು ಇದುವರೆಗೂ ಖಚಿತವಾಗಿ ಹೇಳಿಲ್ಲ. ಉಧಂಪುರ ಸಂಸದರಾಗಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಅಪಘಾತದಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲಿ, ಆಳವಾದ ಕಮರಿಯಿಂದ ದೇಹಗಳನ್ನು ಹೊರತೆಗೆಯಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಹೇಳುವುದನ್ನು ಕೇಳಬಹುದು. ಅಪಘಾತ ಸ್ಥಳಕ್ಕೆ ಆಂಬ್ಯುಲೆನ್ಸ್ ಆಗಮಿಸಿದೆ.
ಅಪಘಾತದ ವರದಿಯನ್ನು ಸ್ವೀಕರಿಸಿದ ತಕ್ಷಣ ಕಿಶ್ತ್ವಾರ್ ನ ಡೆಪ್ಯೂಟಿ ಕಮಿಷನರ್ ರಾಜೇಶ್ ಕುಮಾರ್ ಶವನ್ ಅವರನ್ನು ಸಂಪರ್ಕಿಸಿರುವುದಾಗಿ ಸಚಿವರು ಹೇಳಿದರು.