Advertisement

ಹಳ್ಳಿಗಳಲ್ಲಿ ಶುದ್ಧ ನೀರು ಘಟಕ ಅಳವಡಿಸಿ

01:30 PM Aug 03, 2017 | |

ಸಿಂಧನೂರು: ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಅ ಧಿಕಾರಿಗಳು ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ ತಾಳಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಎಚ್ಚರಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಹಳ್ಳಿಗಳಲ್ಲಿ ಕಡ್ಡಾಯವಾಗಿ ನೀರು ಶುದ್ಧೀಕರಣ ಘಟಕ ಅಳವಡಿಸಬೇಕು. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೆಲವೆಡೆ ಆರ್‌ಒ ಪ್ಲಾಂಟ್‌ಗಳು
ದುರಸ್ತಿಯಲ್ಲಿದ್ದು, ಅವುಗಳ ರಿಪೇರಿಗೆ ಜಿಪಂನಿಂದ ವಾಹನ ಬಿಟ್ಟರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಪಂ ಎಇಇ ಬಸವರಾಜ ಪಲ್ಲೇದ, ಸ್ಥಗಿತಗೊಂಡಿರುವ ಆರ್‌ಒ ಪ್ಲಾಂಟ್‌ ರಿಪೇರಿ ಮಾಡಿಸಲು ಈಗಾಗಲೇ ಜಿಪಂನಿಂದ ಮೂರು ಬಾರಿ ಟೆಂಡರ್‌ ಕರೆಯಲಾಗಿದೆ. ಶೀಘ್ರವೇ ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ತಾಲೂಕಿನ ಜಂಗಮರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ತುಂಬಿಸಿದ ಬಗ್ಗೆ ಹಾರಿಕೆ ಉತ್ತರ ನೀಡಿದ ಅಧಿ ಕಾರಿಗಳ ವಿರುದ್ಧ ಅಧ್ಯಕ್ಷರು ಕಿಡಿಕಾರಿದರು. ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ
ಕುಡಿಯುವ ನೀರಿನ ಸಮಸ್ಯೆಯಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನಿಸಿದಾಗ, ಎಇಇ ಈಗಾಗಲೇ 2 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ, ಸಾಲಗುಂದಾದಲ್ಲಿ ಈಗಾಗಲೇ ಗುರುತಿಸಿದ ಜಾಗ ಕಲ್ಲು ಬಂಡೆಗಳಿಂದ ಕೂಡಿದೆ. ಬೇರೆ ಜಾಗ ಖರೀದಿ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಅ ಧಿಕಾರಿಗಳು ಹೇಳಿದರು. ತಾಪಂ ಉಪಾಧ್ಯಕ್ಷೆ ಅನಸೂಯಾ ರಾಮಣ್ಣ ಮಾತನಾಡಿ, ಹಿರೇಬೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಟ್ಯಾಂಕರ್‌ನಿಂದ 40 ದಿನಗಳ ಕಾಲ ನೀರು ಸರಬರಾಜು ಮಾಡಿದ್ದರೂ ಇನ್ನೂ ಹಣ ಪಾವತಿಯಾಗಿಲ್ಲ. ಸಭೆಯಲ್ಲಿ ಪ್ರಗತಿ ಬಗ್ಗೆ ಸರಿ ಇದೆ ಎಂದು ಅಧಿ ಕಾರಿಗಳು ಹೇಳುತ್ತಾರೆ.

ಆದರೆ ವಾಸ್ತವದಲ್ಲಿ ಕೆಲಸ ಆಗಿರಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಎಇಇ ಬಸವರಾಜ ಪಲ್ಲೇದ ಹಿರೇಬೇರಿY ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹತ್ತಿಗುಡ್ಡದ ಗುಂಪು ಕುಡಿಯುವ ನೀರಿನ ಯೋಜನೆಯಿಂದ ನೀರು ಕೊಡಲಾಗುತ್ತಿದೆ. ಟ್ಯಾಂಕರ್‌ ಮೂಲಕ ಸರಬರಾಜು ನೀರು ಮಾಡಿರುವುದಕ್ಕೂ ಹಣ ಪಾವತಿ ಮಾಡಲಾಗುವುದು ಎಂದರು. 

Advertisement

ಗುತ್ತಿಗೆದಾರರಂತೆ ವರ್ತನೆ: ಗುಡದೂರ ಕ್ಷೇತ್ರದ ಜಿಪಂ ಸದಸ್ಯ ದುರುಗಪ್ಪ ಗುಡಗಲದಿನ್ನಿ ತಾವೊಬ್ಬ ಜಿಪಂ ಸದಸ್ಯರು ಎನ್ನುವುದನ್ನು ಮರೆತು ಗುತ್ತೇದಾರರಂತೆ ಮಾತನಾಡಿದ್ದು ಸಭೆಯ ನಡಾವಳಿಗಳನ್ನು ಉಲ್ಲಂಘನೆ ಮಾಡಿದಂತಾಯಿತು. ಸಭೆಯಲ್ಲಿ ತಿಡಿಗೋಳ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅವರ ಸ್ವಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಗುತ್ತಿಗೆದಾರರಿಂದ ತಾವು ಉಪಗುತ್ತಿಗೆ ಪಡೆದು ಮಾಡುತ್ತಿದ್ದು, ಈಗಾಗಲೇ 11 ಲಕ್ಷ ಖರ್ಚು ಮಾಡಿದ್ದಾಗಿ ಸಭೆಯಲ್ಲಿ ಚರ್ಚಿಸಿ ಇದಕ್ಕೆ ಸಹಕರಿಸದ ಅ ಧಿಕಾರಿಗಳ ವಿರುದ್ಧ ಹಿಗ್ಗಾಮುಗ್ಗಾ ಹರಿಹಾಯ್ದರು.

ಹಾಸ್ಯಕ್ಕೆ ಕಾರಣವಾಯ್ತು ಆಕ್ರೋಶ: ಜಾಲಿಹಾಳ ಜಿಪಂ ವ್ಯಾಪ್ತಿಯಲ್ಲಿ ನಡೆದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸದಸ್ಯ ಅಮರೇಗೌಡ ವಿರೂಪಾಪುರ ಆಕ್ರೋಶ ಭರಿತವಾಗಿ ಮಾತನಾಡಿದ್ದು ಸಹ ಸಭೆಯ ನಿಯಮಗಳಿಗೆ ವಿರುದ್ಧವಾಗಿತ್ತು. ಆರಂಭದಲ್ಲಿ ಕಾಮಗಾರಿ ಬಿಲ್‌
ಆಗಿಲ್ಲ ಎಂದು ಅ ಧಿಕಾರಿಗಳು ಹೇಳಿ, ಏಕಾಏಕಿ ಗುತ್ತಿಗೆದಾರರಿಗೆ ಬಿಲ್‌ ಮಾಡಲಾಗಿದೆ ಎಂದು ಜಿಪಂ ಅಧಿಕಾರಿಗಳ ವಿರುದ್ಧ ಮುಗಿಬಿದ್ದರು.

ಆದರೆ ಇಲ್ಲಿ ವಿಷಯವೇ ಬೇರೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನಿಸಬಹುದು. ಕಾಮಗಾರಿ ಪೂರ್ಣಗೊಂಡಾಗ ಗುತ್ತಿಗೆದಾರರಿಗೆ ಹಣ ಪಾವತಿ
ಮಾಡದಿದ್ದರೂ ಪ್ರಶ್ನೆ ಮಾಡಬಹುದಿತ್ತು. ಆದರೆ ಅವರು ಗುತ್ತಿಗೆದಾರರಿಂದ ಉಪ ಗುತ್ತಿಗೆದಾರರಿಗೆ ಕಾಮಗಾರಿಯ ಹಣ ಕೊಡಿಸುವಂತೆ ಮಾತನಾಡಿದ್ದು ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಇದಕ್ಕೆ ಜಿಪಂ ಅಧಿಕಾರಿಗಳು ತಮಗೆ ಸಂಬಂಧವಿಲ್ಲ ಎಂದು ಹೇಳುತ್ತಿದ್ದರೂ ನಾವೇನು ಕತ್ತೆ ಕಾಯೋಕೆ ಬಂದಿದ್ದೇವೆಯಾ? ಮೊದಲು ಹಣ ಕೊಡಿಸುವ ವ್ಯವಸ್ಥೆ ಮಾಡಿ ಎಂದಿದ್ದು ಅಪಹಾಸ್ಯಕ್ಕೆ ಕಾರಣವಾಯಿತು. ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. 

ಜಿಪಂ ಸದಸ್ಯರಾದ ಎನ್‌.ಶಿವನಗೌಡ ಗೊರೇಬಾಳ, ರೂಪಾ ಸಿದ್ಧನಗೌಡ, ತಾಪಂ ಇಒ ಬಸಣ್ಣ, ರಾಯಚೂರು ಜಿಪಂ ಯೋಜನಾಧಿಕಾರಿ ಶರಣಬಸವ ಕೆಸರಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮೊಬೈಲ್‌ನಲ್ಲಿ ಆಟ!
ಸಭೆ ಆರಂಭವಾಗಿ ವಿವಿಧ ಇಲಾಖೆಗಳ ಪರಶೀಲನೆ ನಡೆಯುತ್ತಿದ್ದಂತೆ ಅತ್ತ ಕೆಲ ಪಿಡಿಒಗಳು, ಅಧಿಕಾರಿಗಳು ಸಭೆ ತಮಗೆ ಸಂಬಂಧವಿಲ್ಲದಂತೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಕೆಲವರು ಮೊಬೈಲ್‌ ನಲ್ಲಿ ಗೇಮ್‌ಗಳನ್ನಾಡುತ್ತಾ ಕಾಲಹರಣ ಮಾಡುತ್ತಿರುವುದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next