Advertisement

ಕೈಕೊಟ್ಟ ಮೆಟ್ರೋ; ಪ್ರಯಾಣಿಕರ ಪರದಾಟ

12:53 AM Sep 02, 2019 | Lakshmi GovindaRaj |

ಬೆಂಗಳೂರು: “ನಮ್ಮ ಮೆಟ್ರೋ’ ಹಸಿರು ಮಾರ್ಗದಲ್ಲಿ ಶನಿವಾರ ಉಂಟಾದ ತಾಂತ್ರಿಕ ದೋಷದಿಂದ ಸುಮಾರು 40 ನಿಮಿಷಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

Advertisement

ಸಂಜೆ 6.40ರಿಂದ 7.40ರ ಅವಧಿಯಲ್ಲಿ ವಿಜಯನಗರದಿಂದ ಮೈಸೂರು ರಸ್ತೆ ನಡುವೆ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ 40 ನಿಮಿಷಕ್ಕಿಂತ ಹೆಚ್ಚು ಹೊತ್ತು ಸಂಚಾರ ಸ್ಥಗಿತಗೊಂಡಿತು. “ಪೀಕ್‌ ಅವರ್‌’ನಲ್ಲಿ ಅದರಲ್ಲೂ ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಎಂದಿಗಿಂತ ಹೆಚ್ಚು ಪ್ರಯಾಣಿಕರ ದಟ್ಟಣೆ ಇತ್ತು. ಹಾಗಾಗಿ, ವ್ಯತ್ಯಯದ ಬಿಸಿ ತುಸು ಜೋರಾಗಿಯೇ ತಟ್ಟಿತು.

ವಿಜಯನಗರ-ಮೈಸೂರು ರಸ್ತೆ ನಡುವಿನ ನಿಲ್ದಾಣಗಳಲ್ಲಿ ಜನ ಬಂದು, ನಿರಾಸೆಯಿಂದ ಹಿಂತಿರುಗಿದರು. ದೋಷ ಕಂಡುಬಂದ ಮಾರ್ಗದಲ್ಲಿ ಸೀಮಿತ ನಿಲ್ದಾಣಗಳಲ್ಲಿ ವ್ಯತ್ಯಯದ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಉಳಿದ ನಿಲ್ದಾಣಗಳಲ್ಲಿ ಈ ಬಗ್ಗೆ ಯಾವುದೇ ಸೂಚನೆ ನೀಡದಿರುವುದು ಕಂಡುಬಂತು. ಆ ಮಾರ್ಗದಲ್ಲಿ ತೆರಳುವವರಿಗೆ ಕೇವಲ ಮೆಜೆಸ್ಟಿಕ್‌ ಅಥವಾ ವಿಜಯನಗರದವರೆಗೆ ಸೇವೆ ದೊರೆಯಿತು. ನಂತರ ಇಳಿದು ಆಟೋ ಅಥವಾ ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದರು.

ಸೇವೆ ಕುರಿತು ಟ್ವೀಟ್‌: ಶುಕ್ರವಾರವಷ್ಟೇ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಟ್ವೀಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದರು. “ಒಂದೇ ದಿನದಲ್ಲಿ 4.58 ಲಕ್ಷ ಜನ ಪ್ರಯಾಣಿಸಿದ್ದಾರೆ. ಈ ಸ್ಪಂದನೆಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ಮೂಲಕ ಈ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು’ ಎಂದೂ ತಿಳಿಸಿದ್ದರು.

ಘಟನೆ ನಡೆದು 24 ತಾಸಿನ ನಂತರವೂ ಸ್ಥಗಿತಗೊಳ್ಳಲು ಕಾರಣ ಏನು ಎಂಬುದರ ಬಗ್ಗೆಯೂ ಬಿಎಂಆರ್‌ಸಿಎಲ್‌ ಸ್ಪಷ್ಟನೆ ನೀಡಿಲ್ಲ. ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಕರೆಗೆ ಸ್ಪಂದಿಸುತ್ತಿಲ್ಲ. ಶನಿವಾರ ಸಂಚರಿಸಿದ ಪ್ರಯಾಣಿಕರ ಅಂಕಿ-ಸಂಖ್ಯೆಯನ್ನೂ ಹಂಚಿಕೊಂಡಿಲ್ಲ.

Advertisement

ಸ್ಥಗಿತಗೊಂಡ ಮೆಟ್ರೋ – ಆಕ್ರೋಶ: ತುಂಬಿತುಳುಕುತ್ತಿದ್ದ ರೈಲು ದಿಢೀರ್‌ ದೀಪಾಂಜಲಿನಗರ ಬಳಿ ಸ್ಥಗಿತಗೊಂಡಿತು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ನಿಗಮದ ಸಿಬ್ಬಂದಿ ತಾಂತ್ರಿಕ ದೋಷದ ಬಗ್ಗೆ ಮಾಹಿತಿ ನೀಡಿದರು. ಮುಂದಿನ ನಿಲ್ದಾಣಗಳಿಗೆ ಟಿಕೆಟ್‌ ಪಡೆದಿದ್ದ ನೂರಾರು ಪ್ರಯಾಣಿಕರಿಗೆ ಹಣ ಹಿಂಪಾವತಿಸಲಾಯಿತು. ಈ ರೀತಿಯ ಘಟನೆಗಳು ಪುನರಾವರ್ತನೆ ಆಗುತ್ತಿದ್ದು, ಈ ಬಗ್ಗೆ ಬಿಎಂಆರ್‌ಸಿಎಲ್‌ನಿಂದ ಬರುವ ಪ್ರತಿಕ್ರಿಯೆ ಮಾತ್ರ ಒಂದೇ ಆಗಿರುತ್ತದೆ. ಅದು “ತಾಂತ್ರಿಕ ದೋಷ’ ಎಂದು ಕೆಲ ಪ್ರಯಾಣಿಕರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next