ಬೆಂಗಳೂರು: ಹೆಬ್ಟಾಳ-ಸರ್ಜಾಪುರ ನಡುವಿನ 36 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣವು ಒಟ್ಟು 836 ಆಸ್ತಿಗಳ ಮೂಲಕ ಹಾದು ಹೋಗಲಿದೆ. ಹೆಬ್ಟಾಳ-ಸರ್ಜಾಪುರ 36 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಆಸ್ತಿಗಳ ಪೈಕಿ ಹೆಚ್ಚಿನ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೇರಿದರೆ, ಹೆಬ್ಟಾಳ ಕೆರೆಯ ಪಕ್ಕದಲ್ಲಿರುವ 45 ಎಕರೆ ಜಮೀನುಗಳನ್ನೂ ಗುರುತಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದ ನಂತರ ಯೋಜನೆಗೆ ಅಗತ್ಯವಿರುವ ಭೂಮಿಯ ವಿಸ್ತೀರ್ಣವೆಷ್ಟು ಎಂಬುದು ಸ್ಪಷ್ಟವಾಗಿ ತಿಳಿದು ಬರಲಿದೆ.
ಆರಂಭಿಕ ಸಮೀಕ್ಷೆಯ ಪ್ರಕಾರ, ಸುಮಾರು 482 ಕಟ್ಟಡಗಳು ಉದ್ದಕ್ಕೂ ಇವೆ. ಇವುಗಳ ಪೈಕಿ 314 ವಸತಿ, 37 ವಾಣಿಜ್ಯ ಮತ್ತು 63 ಕೈಗಾರಿಕಾ ಆಸ್ತಿಗಳು ಸೇರಿವೆ. 17 ಎಲಿವೇಟೆಡ್ ಮತ್ತು 11 ಅಂಡರ್‌ಪಾಸ್ ನಿಲ್ದಾಣಗಳನ್ನು ಒಳಗೊಂಡಿರುವ ಹೆಬ್ಟಾಳ-ಸರ್ಜಾಪುರ ಮೆಟ್ರೋ ಮಾರ್ಗವು ಕೋರಮಂಗಲ, ಡೈರಿ ಸರ್ಕಲ್, ಕೆಆರ್ ಸರ್ಕಲ್, ಗಾಲ್ಫ್ ಕೋರ್ಸ್ ಮತ್ತು ಮೇಖ್ರಿ ಸರ್ಕಲ್ ಸೇರಿದಂತೆ ಬೆಂಗಳೂರಿನ ಹೃದಯಭಾಗದ ಮೂಲಕ ಹಾದು ಹೋಗುತ್ತವೆ. ಈ ಯೋಜನೆಗೆ ಇತ್ತೀಚೆಗೆ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ.
ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭ: ಇದು ಈಗಾಗಲೇ ನಿರ್ಮಾಣ ಹಂತದಲ್ಲಿರುವ ನೀಲಿ ಲೈನ್ ಮೂಲಕ ಮೆಟ್ರೋ ಸಂಪರ್ಕ ಪಡೆಯುತ್ತಿರುವ ಹೆಬ್ಟಾಳದ ಮೂಲಕ ದಕ್ಷಿಣ ಬೆಂಗಳೂರನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಈ ಮೆಟ್ರೋ ಮಾರ್ಗ ನಿರ್ಮಾಣವಾದರೆ ಹೆಬ್ಟಾಳದ ಮೂಲಕ ದಕ್ಷಿಣ ಬೆಂಗಳೂರನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಸಹಾಯ ಮಾಡುತ್ತದೆ. 161 ಎಕರೆಯಲ್ಲಿರುವ 836 ಆಸ್ತಿಗಳು ವಯಡಕ್ಟಗಳು, ಮೆಟ್ರೋ ನಿಲ್ದಾಣಗಳು ಮತ್ತು ಡಿಪೋಗಳನ್ನು ನಿರ್ಮಿಸಲು ಪೂರಕವಾಗಿವೆ. ಸರ್ಜಾಪುರದಲ್ಲಿ ಡಿಪೋ ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಿಸಲು ಸುಮಾರು 55 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಬಿಎಂಆರ್‌ಸಿಎಲ್ ಹೆಬ್ಟಾಳದಲ್ಲಿ ಮಲ್ಟಿ-ಮೋಡಲ್ ಇಂಟಿಗ್ರೇ ಷನ್ (ಎಂಎಂಐ) ಸೌಲಭ್ಯವನ್ನು ನಿರ್ಮಿಸಲು ಸುಮಾರು 45 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ.
ಸುಮಾರು 20 ವರ್ಷಗಳ ಹಿಂದೆ ಭೂ ಸ್ವಾಧೀನಪಡಿಸಿಕೊಂಡಿರುವ ಖಾಸಗಿ ಕಂಪನಿಯು ಭೂಮಾಲಿಕರಿಗೆ ಇನ್ನೂ ಪರಿಹಾರ ನೀಡದ ಕಾರಣ ಈ ಭೂಮಿ ಪ್ರಸ್ತುತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶದಲ್ಲಿದೆ. ಈ ಭೂಮಿ ಬಳಸಿಕೊಳ್ಳುವ ಉದ್ದೇಶವಿದೆ. ಜತೆಗೆ ಅಗತ್ಯವಿರುವ ಭೂಮಿಗೆ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಜೆಪಿ ನಗರ 4ನೇ ಹಂತ ದಿಂದ ಕೆಂಪಾಪುರದ ನಡುವೆ 26,811 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಸೋಮವಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ