ಮುಧೋಳ: ನಗರ ಹೊರವಲಯದಲ್ಲಿರುವ ಅನಗವಾಡಿ ರಸ್ತೆಯಿಂದ ಮಂಟೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಪೂರ್ಣವಾಗಿರುವುದರಿಂದ ಆರಂಭದಲ್ಲಿನ ಸೂಚನಾ ಫಲಕ ನಂಬಿ ಹೋದರೆ ಅರ್ಧಕ್ಕೆ ಮರಳಬೇಕಾದ ಪರಿಸ್ಥಿತಿ ಇದೆ.
ಅನಗವಾಡಿ ಮುಖ್ಯ ರಸ್ತೆ ಆರಂಭದಿಂದ ಮಂಟೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಂದಾಜು 6 ಕಿ.ಮೀ ಇದೆ. ಆದರೆ ಸದ್ಯ ಈ ರಸ್ತೆಯನ್ನು ಕೇವಲ 3 ಕಿ.ಮೀ ಮಾತ್ರ ನಿರ್ಮಿಸಲಾಗಿದೆ. ಅದೂ ಅಲ್ಲದೇ ರಸ್ತೆ ಆರಂಭದಲ್ಲಿ ಬುದ್ನಿ ಪಿ.ಎಂ. 9 ಕಿ.ಮೀ. ಎಂದು ನಾಮಫಲಕ ಅಳವಡಿಸಲಾಗಿದೆ. ನಾಮಫಲಕ ವೀಕ್ಷಿಸುವ ಸಾರ್ವಜನಿಕರು ಸುಸಜ್ಜಿತ ರಸ್ತೆಯಲ್ಲಿ ನಿರಾತಂಕವಾಗಿ ತೆರಳುತ್ತಾರೆ. ಆದರೆ ಮೂರು ಕಿ.ಮೀ ಕ್ರಮಿಸಿದ ಮೇಲೆ ಮುಂದೆ ಸಾಗಲು ದಾರಿಯಿಲ್ಲದೆ ಬಂದ ದಾರಿಗೆ ಸುಂಕವಿಲ್ಲದೆ ಮರಳುವಂತಾಗಿದೆ.
ಮೂರು ಕಿ.ಮೀ ಕ್ರಮಿಸಿದ ಬಳಿಕ ಬರುವ ರಸ್ತೆಯನ್ನು ಪ್ರಭಾವಿಗಳೊಬ್ಬರು ಅತಿಕ್ರಮಿಸಿಕೊಂಡು ಕೃಷಿ ಮಾಡುತ್ತಿದ್ದಾರೆಂಬುದು ಸ್ಥಳೀಯ ರೈತರ ಆರೋಪ. ಮೂರು ಕಿ.ಮೀಗೆ ಮಾತ್ರ ಅನುಮೋದನೆ: ಇನ್ನು ಅರ್ಧ ದಾರಿ ನಿರ್ಮಾಣ ಬಗ್ಗೆ ಸಂಬಂಧಿ ಸಿದವರನ್ನು ಪ್ರಶ್ನಿಸಿದರೆ ನಮಗೆ ಅನಗವಾಡಿ ರಸ್ತೆಯಿಂದ ಕೇವಲ ಮೂರು ಕಿ.ಮೀವರೆಗೆ ಮಾತ್ರ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ನಾವು ಅಷ್ಟೇ ಮಾಡಿದ್ದೇವೆ. ಮುಂದೆ ರಸ್ತೆ ಅತಿಕ್ರಮಣ ಬಗ್ಗೆ ನಮಗೆ ಮಾಹಿತಿ ಇಲ್ಲ ಎನ್ನುತ್ತಾರೆ.
ನಾಮಫಲಕ ತೆರವಾಗಲಿ: ಈ ರಸ್ತೆ ಜಮೀನುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮೇಲಾಗಿ ಈ ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಓಡಾಡಲ್ಲ. ಬೈಕ್ ಸವಾರರು, ಖಾಸಗಿ ವಾಹನಗಳೇ ಹೆಚ್ಚು ಓಡಾಡುತ್ತವೆ. ಆದರೆ ರಸ್ತೆ ಆರಂಭದಲ್ಲಿ ನೆಟ್ಟಿರುವ ನಾಮಫಲಕದಿಂದ ಸಾರ್ವಜನಿಕರಿಗೆ ತೀವ್ರತೊಂದರೆಯುಂಟಾಗುತ್ತಿದೆ. ನಾಮಫಲಕ ತೆರವುಗೊಳಿಸಿದರೆ ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವುದನ್ನು ಕೈಬಿಡುತ್ತಾರೆ. ಅಧಿಕಾರಿಗಳು ಇನ್ನಾದರೂ ದಾರಿ ತಪ್ಪಿಸುವ ನಾಮಫಲಕ ತೆರವುಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಸ್ತೆ ಪಕ್ಕ ನೆಟ್ಟಿರುವ ನಾಮಫಲಕದಿಂದಾಗಿ ಈ ಮಾರ್ಗವಾಗಿ ಬುದ್ನಿ ಪಿ.ಎಂ. ಗ್ರಾಮಕ್ಕೆ ತೆರಳಲು ಪ್ರತಿದಿನ ಸವಾರರು ಬರುತ್ತಾರೆ. ನಾವು ರಸ್ತೆ ಮುಂದೆ ಚೆನ್ನಾಗಿಲ್ಲ. ಎಂದು ಹೇಳಿದ ಕೂಡಲೇ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳುತ್ತಾರೆ. ಅಧಿಕಾರಿಗಳು ರಸ್ತೆ ಆರಂಭದಲ್ಲಿ ನೆಟ್ಟಿರುವ ನಾಮಫಲಕ ತೆರವುಗೊಳಿಸಬೇಕು. ಇಲ್ಲ ರಸ್ತೆಯನ್ನು ಪೂರ್ಣಪ್ರಮಾಣದಲ್ಲಿ ನಿರ್ಮಿಸಬೇಕು.
ಅಶೋಕ ಪಿ., ರಸ್ತೆ ಪಕ್ಕದ ಜಮೀನು ಹೊಂದಿರುವ ರೈತ.
ನಮಗೆ ಸರ್ಕಾರದ ನೀಡಿದ ಅನುಮೋದನೆ ಪ್ರಕಾರ ನಾವು ರಸ್ತೆ ದುರಸ್ತಿಗೊಳಿಸಿ ಡಾಂಬರೀಕರಣ ಮಾಡಿದ್ದೇವೆ. ರಸ್ತೆ ಅತಿಕ್ರಮಣವಾಗಲಿ ಅಥವಾ ಮುಂದೆ ರಸ್ತೆ ಇರುವುದಾಗಲಿ ನಮ್ಮ ಗಮನಕ್ಕೆ ಬಂದಿಲ್ಲ.
∙ಎಚ್.ಆರ್. ಮಹಾರಡ್ಡಿ,
ಜಿಎಲ್‌ಬಿಸಿ ಎಇಇ
ಗೋವಿಂದಪ್ಪ ತಳವಾರ