Advertisement

Mulki ರೈಲ್ವೇ ನಿಲ್ದಾಣ: ಸಂಪರ್ಕ ರಸ್ತೆಯದೇ ರೋದನ!

12:41 PM Dec 01, 2024 | Team Udayavani |

ಮೂಲ್ಕಿ: ಕರಾವಳಿಯ ರೈಲ್ವೇ ಜಾಲದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಮೂಲ್ಕಿ ರೈಲ್ವೇ ನಿಲ್ದಾಣದಲ್ಲಿ ಈ ಮಾರ್ಗದಲ್ಲಿ ಸಾಗುವ ಸಾಕಷ್ಟು ರೈಲುಗಳಿಗೆ ನಿಲುಗಡೆ ಇದೆ. ಮಂಗಳೂರು – ಉಡುಪಿ ನಡುವೆ ಕೇವಲ ಮೂಲ್ಕಿ ಮತ್ತು ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಮಾತ್ರ ಹೆಚ್ಚು ರೈಲುಗಳು ನಿಲ್ಲುತ್ತವೆ. ಉಳಿದ ನಿಲ್ದಾಣಗಳಲ್ಲಿ ದಿನಕ್ಕೆ ಬೆರಳೆಣಿಕೆಯ ರೈಲುಗಳು ಮಾತ್ರ ನಿಲ್ಲುತ್ತವೆ. ಇಂಥ ಪ್ರಮುಖ ರೈಲು ನಿಲ್ದಾಣ ಕೆಲವೊಂದು ಮೂಲಸೌಕರ್ಯ ಸಮಸ್ಯೆಗಳು ಮತ್ತು ರಸ್ತೆ ಸಂಪರ್ಕದ ತೊಂದರೆಯನ್ನು ಎದುರಿಸುತ್ತಿದೆ. ಇದೂ ಸೇರಿದಂತೆ ಹಲವು ಕಾರಣಗಳಿಂದಾಗಿ ಇಲ್ಲಿ ರೈಲು ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

Advertisement

18 ರೈಲುಗಳ ನಿಲುಗಡೆ
ಮೂಲ್ಕಿ ರೈಲ್ವೇ ನಿಲ್ದಾಣದ ಮೂಲಕ ದಿನಕ್ಕೆ 75ಕ್ಕೂ ಅಧಿಕ ರೈಲುಗಳು ದೇಶದ ವಿವಿಧ ಪ್ರದೇಶಗಳಿಗೆ ಹೋಗುತ್ತಿದೆ. ಅವುಗಳ ಪೈಕಿ ದಿನಕ್ಕೆ 18 ರೈಲುಗಳಿಗೆ ಮೂಲ್ಕಿ ನಿಲುಗಡೆ ಇದೆ. ಇದು ಮೂಲ್ಕಿ ಜಂಕ್ಷನ್‌ ಎಷ್ಟು ಪ್ರಮುಖ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಭಾಗದಲ್ಲಿ ಹಿಂದಿನಿಂದಲೂ ರೈಲುಗಳ ಅವಲಂಬನೆ ಹೆಚ್ಚು. ಮೂಲ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮುಂಬಯಿ ಜತೆ ಇರುವ ಅವಿನಾಭಾವ ಸಂಬಂಧವೂ ಇದಕ್ಕೆ ಪ್ರಮುಖ ಕಾರಣ. ಉಡುಪಿ ಜಿಲ್ಲೆಯ ಹೆಜಮಾಡಿ, ಪಡುಬಿದ್ರೆ, ಕಾಪು, ಎರ್ಮಾಳು, ಫಲಿಮಾರು, ಕರ್ನಿರೆ, ಬೆಳ್ಮಣ್ಣು ಹಾಗೂ ದ.ಕ. ಜಿಲ್ಲೆಯ ಮೂಡುಬಿ ದ ರೆ, ಕಿನ್ನಿಗೋಳಿ, ಕಟೀಲು, ಬಜಪೆ, ಎಕ್ಕಾರು, ನಿಡ್ಡೋಡಿ, ಕಲ್ಲಮುಂಡ್ಕೂರು ಮಾತ್ರವಲ್ಲದೆ ಇತರ ಭಾಗಗಳಿಂದಲೂ ಪ್ರಯಾಣಿಕರು ಮೂಲ್ಕಿ ನಿಲ್ದಾಣಕ್ಕೆ ಬರುತ್ತಿದ್ದರು ಮತ್ತು ಈಗ ಅದರ ಪ್ರಮಾಣ ಕಡಿಮೆಯಾಗುತ್ತಿದೆ. ಮೂಲ್ಕಿ ರೈಲು ನಿಲ್ದಾಣ ತಲುಪುವ ರಸ್ತೆಯ ಸಮಸ್ಯೆ, ನಿಲ್ದಾಣದ ಮೂಲ ಸೌಕರ್ಯಗಳ ಕೊರತೆ ಮತ್ತು ರಿಕ್ಷಾ ಚಾಲಕರು ಹೇಳುವ ಮಿತಿಯಿಲ್ಲದ ಬಾಡಿಗೆ ದರಗಳಿಂದಾಗಿ ಜನರಿಗೆ ಈ ನಿಲ್ದಾಣಕ್ಕೆ ಬರುವುದೇ ರೇಜಿಗೆ ಹುಟ್ಟಿಸುತ್ತದೆ.

ರಸ್ತೆಯ ಉದ್ದಕ್ಕೂ ಹುಲ್ಲು, ಚಿರತೆ ಭಯ!
ಮೂಲ್ಕಿಯ ಕೆ.ಎಸ್‌.ರಾವ್‌ ನಗರದಿಂದ ರೈಲು ನಿಲ್ದಾಣಕ್ಕೆ ಸಾಗುವ ರಸ್ತೆ ಹೇಗಿದೆ ಎಂದರೆ ಇದರಲ್ಲಿ ಹಗಲಿನಲ್ಲೇ ಒಂಟಿಯಾಗಿ ಬೈಕ್‌ನಲ್ಲಿ ಹೋಗಲು ಕೂಡ ಭಯವಾಗುತ್ತದೆ. ಹಾಗಿದ್ದರೆ ರಾತ್ರಿ ರೈಲಿನಿಂದ ಇಳಿದವರು ನಡೆದುಕೊಂಡು ಹೋಗಲು ಸಾಧ್ಯವೇ?ಸುಮಾರು ಒಂದೆರಡು ಫ‌ರ್ಲಾಂಗು ಉದ್ದದ ರಸ್ತೆಯ ಉದ್ದಕ್ಕೂ ಆಳೆತ್ತರವನ್ನು ಮೀರಿ ಹುಲ್ಲು ಪೊದೆಗಳು ಬೆಳೆದಿವೆ. ಈ ದಾರಿಯಲ್ಲಿ ಯಾರಾದರೂ ಅಡಗಿಕೊಂಡು ಅಕ್ರಮ ಕೃತ್ಯಕ್ಕೆ ಸಂಚು ನಡೆಸಿದರೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.ಮೊದಲೇ ಮೂಲ್ಕಿ ಪರಿಸರದಲ್ಲಿ ಚಿರತೆಗಳ ಓಡಾಟದ ಭಯವಿದೆ. ಚಿರತೆ, ಹಾವುಗಳು ನುಗ್ಗಬಹುದು. ಇಲ್ಲಿ ರಸ್ತೆ ಉತ್ತಮವಾಗಿದೆ, ಬೆಳಕೂ ಇದೆ. ಆದರೆ, ನಿರ್ವಹಣೆಯನ್ನು ಪಂ. ನಡೆಸದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.

Advertisement

ಕಿಲ್ಪಾಡಿ ಗ್ರಾ.ಪಂ.ಗೆ ಹೊಣೆ
ಮೂಲ್ಕಿ ರೈಲು ನಿಲ್ದಾಣ ಬರುವುದು ಕಿಲ್ಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ. ನಿಜವೆಂದರೆ 18 ರೈಲುಗಳು ನಿಲ್ಲುವ ರೈಲು ನಿಲ್ದಾಣ ಗ್ರಾಮ ಪಂಚಾಯತ್‌ಗೆ ಹೆಮ್ಮೆಯಾಗಬೇಕಾಗಿತ್ತು. ಆದರೆ, ಅದರ ಬಗ್ಗೆ ಯಾವುದೇ ಹೆಮ್ಮೆ ಇಲ್ಲದೆ, ಅದಕ್ಕೆ ಬೇಕಾದ ಯಾವುದೇ ಮೂಲ ಸೌಕರ್ಯ ಒದಗಿಸದೆ ಅದು ಮೌನವಾದಂತಿದೆ. ಇಷ್ಟೆಲ್ಲ ಜನರು ಓಡಾಡುವ ರಸ್ತೆಯನ್ನು ನಿರ್ವಹಿಸುವ ಹೊಣೆ ಪಂಚಾಯತ್‌ನದ್ದು. ಆದರೆ, ಹುಲ್ಲು , ಪೊದೆಗಳನ್ನು ಕೂಡತೆಗೆದಿಲ್ಲ.
ಈ ಹಳಿ ಮಾರ್ಗವಾಗಿ ದೇಶದ ನಾನಾ ಭಾಗಗಳಿಗೆ ರೈಲು ಸಂಚಾರ ಆಗುತ್ತದೆ. ಮೂಲ್ಕಿ ರೈಲು ನಿಲ್ದಾಣವನ್ನು ಬೆಳೆಸಿದರೆ, ಮೂಲ ಸೌಕರ್ಯವನ್ನು ಪಂಚಾಯತ್‌ ಕೂಡ ವಹಿಸಿದರೆ ಕಿಲ್ಪಾಡಿ ಪ್ರದೇಶದ ಅಭಿವೃದ್ಧಿಗೂ ಪೂರಕವಾಗುತ್ತದೆ. ಒಂದೊಮ್ಮೆ ಈ ರೀತಿಯ ಅಭಿವೃದ್ಧಿಗೆ ಅನುದಾನದ ಕೊರತೆಯಾದರೆ ರೈಲ್ವೇ ಇಲಾಖೆಯನ್ನು ವಿನಂತಿಸುವ ಅವಕಾಶವೂ ಇರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ರೈಲು ನಿಲ್ದಾಣದ ಪ್ಲಸ್‌ ಅಂಶಗಳು
-ಮುಂಬಯಿ, ತಿರುಪತಿ, ದಿಲ್ಲಿ, ಬೆಂಗಳೂರು ಸೇರಿದಂತೆ ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸಲು ರೈಲುಗಳಿಗೆ ನಿಲುಗಡೆ ಇದೆ.
-ಪ್ಲಾಟ್‌ಫಾರಂಗಳನ್ನು ಉತ್ತಮ ರೀತಿನಿರ್ವಹಣೆ ಮಾಡಲಾಗಿದೆ. ಸಿಬಂದಿ ಕಾರ್ಯವೈಖರಿಯೂ ಸಮಾಧಾನಕರವಾಗಿದೆ.
-ಮೂಲ್ಕಿ, ಪಡುಬಿದ್ರಿ, ಕಿನ್ನಿಗೋಳಿ, ಮೂಡುಬಿದಿರೆ ಭಾಗದವರಿಗೂ ಹತ್ತಿರ
-ರೈಲು ನಿಲ್ದಾಣ ಮತ್ತು ಸಂಪರ್ಕ ರಸ್ತೆಗೆ ಉತ್ತಮವಾದ ವಿದ್ಯುತ್‌ ದೀಪದ ವ್ಯವಸ್ಥೆಯನ್ನು ಇಲಾಖೆ ಮಾಡಿದೆ.
ರೈಲು ನಿಲ್ದಾಣದ ಮೈನಸ್‌ ಅಂಶಗಳು
-ರಸ್ತೆ ಸಂಪರ್ಕ ಸರಿಯಾಗಿಲ್ಲ. ಹುಲ್ಲು ಪೊದೆಗಳು ತುಂಬಿಕೊಂಡಿವೆ.
-ಒಂದೇ ಪ್ಲಾಟ್‌ ಫಾರಂ ಇರುವುದರಿಂದ ಮತ್ತೂಂದು ದಿಕ್ಕಿಗೆ ಹೋಗುವ ರೈಲು ಹತ್ತಲು ಇಳಿದು ಹತ್ತುವ ಸರ್ಕಸ್‌ ಮಾಡಬೇಕು. ನಿರಂತರ ರೈಲು ಓಡಾಟ ಇರುವುದರಿಂದ ಅಪಾಯಹೆಚ್ಚು.
-ಹಿಂದೆ ಇದ್ದ ಟಿ.ವಿ ಪರದೆ ಈಗ ಇಲ್ಲ. ಹೀಗಾಗಿ ರೈಲು ಎಷ್ಟು ಹೊತ್ತಿಗೆ ಬರುತ್ತದೆ ಎಂಬ ಸ್ಪಷ್ಟ ಮಾಹಿತಿ ಸಿಗುವುದಿಲ್ಲ.
-ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಇಲ್ಲ. ರೈಲು ಬಂದಾಗ ಮಾತ್ರ ಕ್ಯಾಂಟೀನ್‌ ವ್ಯವಸ್ಥೆ. ಅಂಗಡಿಗಳಿಲ್ಲ.

ಮಡಗಾಂವ್‌ಗೆ 135 ರೂ., ಮೂಲ್ಕಿಗೆ 200 ರೂ!
ಮೂಲ್ಕಿ ರೈಲು ನಿಲ್ದಾಣದಿಂದ ಮೂಲ್ಕಿ ಬಸ್‌ ನಿಲ್ದಾಣಕ್ಕೆ ತುಂಬ ದೂರವೇನೂ ಇಲ್ಲ. ಆದರೆ ತಲುಪಬೇಕಾದರೆ ಮಾಡಬೇಕಾದ ಖರ್ಚು ಮಾತ್ರ ತುಂಬ ದೊಡ್ಡದು! ಮೂಲ್ಕಿ ರೈಲು ನಿಲ್ದಾಣದಿಂದ 115 ರೂ. ಕೊಟ್ಟರೆ ಕಾರವಾರಕ್ಕೆ, 135 ರೂ . ಕೊಟ್ಟು ಮಡಗಾಂವ್‌ಗೆ ಹೋಗಬಹುದು, ಬೆಂಗಳೂರಿಗೆ 175 ರೂ. ಸಾಕು. ಆದರೆ, ಮೂಲ್ಕಿ ಬಸ್‌ ನಿಲ್ದಾಣಕ್ಕೆ ಹೋಗಲು 200 ರೂ.ಕೊಡಬೇಕು. ಇದು ಆಟೋರಿಕ್ಷಾ ಚಾರ್ಜ್‌.

ಹಾಗಂತ ಇದು ದುಬಾರಿ ಎಂದು ಹೇಳುವ ಹಾಗೂ ಇಲ್ಲ. ಯಾಕೆಂದರೆ ಇಲ್ಲಿ ರಿಕ್ಷಾ ಬಿಟ್ಟರೆ ಬೇರೆ ಯಾವ ಸಂಪರ್ಕ ವ್ಯವಸ್ಥೆಯೂ ಇಲ್ಲ. ರಿಕ್ಷಾ ಚಾಲಕರು ಮಧ್ಯರಾತ್ರಿ ಬರುವ ರೈಲಿಗೂ ಕಾದು ಕುಳಿತಿರುತ್ತಾರೆ. ಕೆಲವೊಮ್ಮೆ ಅಂಥ ರೈಲಿನಿಂದ ಯಾರೂ ಇಳಿಯುವವವರೇ ಇಲ್ಲದೆ ನಿರಾಸೆಯೂ ಆಗುವುದುಂಟು.ಆದರೆ, ಹಗಲಿನಲ್ಲಾದರೂ ನಿಲ್ದಾಣಕ್ಕೆ ಬಸ್‌ನ ವ್ಯವಸ್ಥೆ ಮಾಡಬಹುದು ಎಂಬ ಅಭಿಪ್ರಾಯವಿದೆ.

ಬಾಗಿಲು ಬಿದ್ದೀತು ಹುಷಾರ್‌
ಹಲವಾರು ಕಾರಣಗಳಿಂದ ಮೂಲ್ಕಿಯಲ್ಲಿ ರೈಲು ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ. ಕೆಲವೊಮ್ಮೆ ಶೂನ್ಯ ದಾಖಲೆಯೂ ಇದೆ. ಇದೇ ರೀತಿ ಮುಂದುವರಿದರೆ ಕೆಲವೊಂದು ರೈಲುಗಳ ನಿಲುಗಡೆ ಬಂದ್‌ ಆಗಲೂಬಹುದು. ಮುಂದೊಂದು ದಿನ ಯಾವುದೇ ರೈಲು ಇಲ್ಲಿ ನಿಲ್ಲದೆ ಹೋಗಲೂಬಹುದು. ಹೀಗಾಗಿ ಮೂಲ್ಕಿ ನಿಲ್ದಾಣದಿಂದ ದೂರ ಸರಿಯುತ್ತಿರುವ ಪ್ರಯಾಣಿಕರನ್ನು ಮೂಲ ಸೌಕರ್ಯದ ಮೂಲಕ ಸೆಳೆಯುವ ಕೆಲಸವನ್ನು ಪಂ. ಕೂಡ ಮಾಡಬೇಕಾಗಿದೆ.

-ಸರ್ವೋತ್ತಮ ಅಂಚನ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next