Advertisement

ಗೋವಿಂದು ಕನಸು ನನಸು

06:00 AM Jun 15, 2018 | Team Udayavani |

ಕಳೆದ ಎರಡೂವರೆ ವರ್ಷಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಸಾ.ರಾ. ಗೋವಿಂದು, ಸದ್ಯದಲ್ಲೇ ತಮ್ಮ ಅವಧಿ ಮುಗಿಸಿ, ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡುತ್ತಿದ್ದಾರೆ. ವಾಣಿಜ್ಯ ಮಂಡಳಿಗೆ ಇದೇ ತಿಂಗಳ 26ರಂದು ಚುನಾವಣೆಗಳು ನಡೆಯಲಿದ್ದು, ಅಲ್ಲಿಯವರೆಗೂ ಗೋವಿಂದು ಅವರು ಅಧ್ಯಕ್ಷರಾಗಿರುತ್ತಾರೆ. ಮುಂದಿನ ಅಧ್ಯಕ್ಷರ್ಯಾರಾಗಬಹುದು ಎಂಬ ಚರ್ಚೆ ಕನ್ನಡ ಚಿತ್ರರಂಗದ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಕೆಲವು ಪ್ರಮುಖರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಅವರಲ್ಲೊಬ್ಬರು ಗೋವಿಂದು ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

ಈ ಎರಡೂವರೆ ವರ್ಷಗಳ ಅವಧಿಯಲ್ಲಿ, ಸಾಂಸ್ಕೃತಿಕ ಭವನವೊಂದನ್ನು ಕಟ್ಟಿಸುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಬಿಟ್ಟರೆ, ಅಂದುಕೊಂಡಿದ್ದೆಲ್ಲವೂ ಆಗಿದೆ ಎನ್ನುತ್ತಾರೆ ಗೋವಿಂದು. “ನನ್ನ ಅವಧಿಯಲ್ಲಿ ಸಬ್ಸಿಡಿ ಚಿತ್ರಗಳ ಸಂಖ್ಯೆ 100ರಿಂದ 125ಕ್ಕೆ ಏರಿತು. ಮುಂಚೆ ಎರಡೂರು ವರ್ಷಗಳಿಗೊಮ್ಮೆ ರಾಜ್ಯ ಪ್ರಶಸ್ತಿ ನೀಡಲಾಗುತಿತ್ತು. ಈಗ ಪ್ರತಿ ವರ್ಷ ಒಂದೇ ದಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುತ್ತಿದೆ. ಹಾಗೆಯೇ ಗುಣಾತ್ಮಕ ಚಿತ್ರಗಳಿಗೆ ಸಬ್ಸಿಡಿ ಕೊಡುವ ವಿಷಯದಲ್ಲೂ ವಿಳಂಬವಾಗುತ್ತಿತ್ತು. ಈಗ ಅದೂ ಬೇಗ ಆಗುತ್ತಿದೆ. ಇನ್ನು ಕಳೆದ ಬಜೆಟ್‌ನಲ್ಲಿ ಕಲ್ಯಾಣನಿಧಿಯನ್ನು ಒಂದು ಕೋಟಿಯಿಂದ 10 ಕೋಟಿಯವರೆಗೂ ಏರಿಸಲಾಗಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಜಾಗ ಗೊತ್ತಾಗಿದ್ದು, ಅದನ್ನೂ ಸದ್ಯದಲ್ಲೇ ಕಾರ್ಯರೂಪಕ್ಕೆ ತರಲಾಗುತ್ತದೆ. ಮಂಡಳಿಯ ವತಿಯಿಂದ ಕ್ಷೇಮನಿಧಿ ಸ್ಥಾಪಿಸಲಾಗಿದ್ದು, ಅದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಹಲವರಿಗೆ ಸಹಾಯ ಮಾಡಲಾಗಿದೆ. “ಮಾಸ್ತಿಗುಡಿ’ ಪ್ರಕರಣದಲ್ಲಿ ಮೃತಪಟ್ಟ ಅನಿಲ್‌ ಮತ್ತು ಉದಯ್‌ ಅವರಿಗೆ ಸರ್ಕಾರದಿಂದ ಐದು ಲಕ್ಷ ಕೊಡಿಸಲಾಗಿದೆ. 

ಇನ್ನು ಚಿತ್ರರಂಗಕ್ಕೆ ಪ್ರತ್ಯೇಕವಾದ ಸಾಂಸ್ಕೃತಿಕ ಭವನವೊಂದನ್ನು ನಿರ್ಮಿಸುವ ಆಸೆಯಿತ್ತು. ಈ ಕುರಿತು ಬೆಂಗಳೂರಿನಲ್ಲಿ ಪಾಲಿಕೆ ವ್ಯಾಪ್ತಿಗೆ ಬರುವ ಜಾಗವನ್ನೂ ನೋಡಲಾಗಿತ್ತು. ಕೆಲವು ಕಡೆ ಸ್ಥಳ ಪರಿಶೀಲನೆ ಸಹ ಆಗಿತ್ತು. ಆದರೆ, ಕಾರಣಾಂತರಗಳಿಂದ ಅದೊಂದು ಕೆಲಸವಾಗಲಿಲ್ಲ. ಅದೊಂದು ಬಾಕಿ ಉಳಿದಿರುವುದು ಬಿಟ್ಟರೆ, ಸಾಕಷ್ಟು ಕೆಲಸಗಳಾಗಿವೆ. ನಾನು ಅಧ್ಯಕ್ಷನಾಗಿ ಇರಲಿ, ಇಲ್ಲದಿರಲಿ ಆ ಕೆಲಸ ಪೂರೈಸುವುದಕ್ಕೆ ನನ್ನ ಕೈಲಾದ ಕೆಲಸ ಮಾಡುತ್ತೀನಿ’ ಎನ್ನುತ್ತಾರೆ ಗೋವಿಂದು.

ತಾವು ಇಷ್ಟು ಕಾಲ ಅಧ್ಯಕ್ಷರಾಗಿದ್ದಕ್ಕೆ ಎಲ್ಲರ ನಂಬಿಕೆ ಮತ್ತು ಸಹಕಾರವೇ ಕಾರಣ ಎಂದು ಹೇಳಲು ಗೋವಿಂದು ಅವರು ಮರೆಯುವುದಿಲ್ಲ. “ಎಲ್ಲರೂ ನಂಬಿಕೆ ಇಟ್ಟು ಸಹಕಾರ ಕೊಟ್ಟಿದ್ದರಿಂದ, ಇಷ್ಟು ದಿನಗಳ ಕಾಲ ಅಧ್ಯಕ್ಷನಾಗಿರುವುದಕ್ಕೆ ಸಾಧ್ಯವಾಯಿತು. ಆ ನಂಬಿಕೆಗೆ ಧಕ್ಕೆ ಬಾರದಂತೆ ಕೆಲಸ ಮಾಡಿದ್ದೀನಿ ಎಂಬ ಸಂತೋಷ ಇದೆ. ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ ಖುಷಿಯೂ ಇದೆ. ಒಟ್ಟಾರೆ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ. ಮುಂಬರುವ ಅಧ್ಯಕ್ಷರು ಇದನ್ನು ಮುಂದುವರೆಸಬೇಕು. ಈ ವಿಷಯದಲ್ಲಿ ನನ್ನ ಸಂಪೂರ್ಣ ಸಹಕಾರವಿರುತ್ತದೆ. ನನ್ನ ಅವಧಿ ಮುಗಿಯಿತು ಅಂತ ಸುಮ್ಮನಿರುವುದಿಲ್ಲ. ನನ್ನಿಂದ ಏನು ಬಾಕಿ ಇತ್ತೋ ಅದನ್ನು ಸಂಪೂರ್ಣಗೊಳಿಸುವ ಕೆಲಸ ಮುಂದುವರೆಸುತ್ತೇನೆ’ ಎನ್ನುತ್ತಾರೆ ಗೋವಿಂದು.

ತಾವು ಹಾಕಿಕೊಟ್ಟ ಮಾದರಿಯನ್ನು, ಮುಂದೆ ಬರುವವರು ಉಳಿಸಿಕೊಂಡು, ಮಂಡಳಿಗೆ ಗೌರವ ತರಲಿ ಎನ್ನುವ ಗೋವಿಂದು, “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಲವು ದಶಕಗಳ ಇತಿಹಾಸವಿದೆ. ಆದರೆ, ಈಗ ಯಾರಿಗೆ ಇಲ್ಲಿ ಅಧಿಕಾರ ಸಿಗುವುದಿಲ್ಲವೋ ಅವರೇ ಒಂದೊಂದು ಮಂಡಳಿಯನ್ನು ಹುಟ್ಟುಹಾಕುತ್ತಿದ್ದಾರೆ. ಇಲ್ಲಿ ಇದ್ದು ಜಯಿಸಬೇಕು. ಅದು ಬಿಟ್ಟು ಎಲ್ಲರೂ ಒಂದೊಂದು ವಾಣಿಜ್ಯ ಮಂಡಳಿ ಸ್ಥಾಪಿಸಿದರೆ ಹೇಗೆ? ಮಂಡಳಿಯ ಇಷ್ಟು ವರ್ಷದ ಇತಿಹಾಸವನ್ನು ಗಮನಿಸಿ, ಕನ್ನಡ ಚಿತ್ರರಂಗಕ್ಕೆ ಅದು ಮಾತೃ ಸಂಸ್ಥೆಯೆಂದು ಪರಿಗಣಿಸಿ ಸರ್ಕಾರ ಮಾನ್ಯತೆ ಕೊಡಬೇಕು’ ಎನ್ನುತ್ತಾರೆ ಗೋವಿಂದು.

Advertisement

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next