ಬೆಂಗಳೂರು: ನಟ ದರ್ಶನ್‌ಗೆ ಟಾಂಗ್ ಕೊಡುವ ಅಗತ್ಯ ನನಗಿಲ್ಲ. ಅಷ್ಟಕ್ಕೂ ದರ್ಶನ್ ಹಾಗೂ ನನ್ನ ಮಧ್ಯೆ ಏನೂ ಇಲ್ಲ ಎಂದು ನಟ ಸುದೀಪ್ ಹೇಳಿದ್ದಾರೆ.
ಇತ್ತೀಚೆಗೆ ತೆರೆಕಂಡ ಮ್ಯಾಕ್ಸ್ ಚಿತ್ರದ ರಿಲೀಸ್ ದಿನ ಬಾಸಿಸಂ ಮುಗೀತು ಎಂಬ ಕೇಕ್ ಕಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು ದರ್ಶನ್‌ಗೆ ಟಾಂಗ್ ಕೊಟ್ಟು ಬರೆಯಲಾಗಿದೆ ಎಂಬ ರೀತಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿತ್ತು. ಈ ಕುರಿತು ಸೋಮವಾರ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಸುದೀಪ್, ದರ್ಶನ್ ಫ್ಯಾನ್ಸ್‌ಗೆ ಬಯ್ಯಬೇಡಿ. ಅವರು ನೋವಲ್ಲಿ ಇದ್ದಾರೆ.
ಇದನ್ನು ನಾನೇ ಹೇಳಿದ ಮೇಲೆ ನಾವು ಯಾಕೆ ಅವರಿಗೆ ಟಾಂಟ್ ಕೊಡೋಣ? ನಾವೆಲ್ಲ ಬಹಳ ಚಿಕ್ಕವರು. ನಾವು ಯಾಕೆ ಟಾಂಟ್ ಕೊಡಬೇಕು? ಏನು ಸಿಗುತ್ತೆ ನಮಗೆ ಅದರಿಂದ? ನಾವೇನು ಛತ್ರಪತಿಗಳ? ಚಕ್ರವರ್ತಿಗಳಾ? ವಯಸ್ಸಾಗಿ ನಾವು ಕೂಡ ಹೋಗುವವರೇ ಒಂದು ದಿನ. ಬದುಕಿರುವಾಗ, ಒಂದು ಸಿನಿಮಾ ನಮ್ಮ ಕೈ ಹಿಡಿದಿರುವಾಗ ಬೆಳೆಯೋಣ ಎಂದು ಹೇಳಿದರು.
ಅಭಿಮಾನಿಗಳು ಯಶ್ ಬಾಸ್, ಧ್ರುವ ಬಾಸ್, ಉಪ್ಪಿ ಬಾಸ್, ಶಿವಣ್ಣ ಬಾಸ್ ಅನ್ನೋದಿಲ್ವಾ? ಎಲ್ಲರಿಗೂ ಅವರವರ ಅಭಿಮಾನಿಗಳು ಹಾಗೆಯೇ ಕರೆಯುತ್ತಾರೆ. ನನಗೂ ದರ್ಶನ್?ಗೂ ಏನೂ ಇಲ್ಲ. ಅವರು ಕೂಡ ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಕನ್ನಡ ಚಿತ್ರರಂಗ ಇಂದು ತುಂಬ ನೋವಲ್ಲಿ ಇದೆ. ಚಿತ್ರರಂಗ ಬೆಳೆಯಬೇಕು ಎಂದರೆ ವಿವಾದ ಬೇಡ.
ನನ್ನ ಫ್ಯಾನ್ಸ್ ಹೋಗಿ ಎಲ್ಲ ಹೀರೋಗಳ ಸಿನಿಮಾ ನೋಡುತ್ತಾರೆ. ಅವರ ಫ್ಯಾನ್ಸ್ ಬಂದು ನನ್ನ ಸಿನಿಮಾ ನೋಡುತ್ತಾರೆ. ಆನ್?ಲೈನ್?ನಲ್ಲಿ ಒಂದು ವಾತಾವರಣ ಬೆಳೆಯುವಾಗ ಯಾರೋ ಒಬ್ಬರು ಒಂದು ಆಯಾಮ ಕೊಡುವುದೇ ತಪ್ಪು. ಕೆಟ್ಟ ಅಹಂಕಾರ ನಮ್ಮಲ್ಲಿ ಇದೆ ಅಂತ ನೀವು ಅಂದುಕೊಂಡಿರುವುದೇ ತಪ್ಪು ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದರು.