Advertisement

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

01:05 AM Jan 07, 2025 | Team Udayavani |

ಬೆಂಗಳೂರು: ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ನಡೆದ ಔತಣಕೂಟಕ್ಕೆ ಇಲ್ಲಸಲ್ಲದ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ಟರ್ಕಿ ಪ್ರವಾಸದಿಂದ ವಾಪಸ್‌ ಆಗಿರುವ ಅವರು ದಿಲ್ಲಿಯಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಈ ಔತಣಕೂಟಕ್ಕೆ ಮಾಧ್ಯಮದವರು ಏಕೆ ರಾಜಕಾರಣ ಬೆರೆಸುತ್ತೀರಿ? ಇದಕ್ಕೆ ಇಲ್ಲಸಲ್ಲದ ಅರ್ಥವನ್ನು ಏಕೆ ಕಲ್ಪಿಸುತ್ತೀರಿ? ಎಂದು ಪ್ರಶ್ನಿಸಿದರು.

ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸಾಮಾನ್ಯ. ನಾನೂ ಆಗಾಗ ಔತಣಕೂಟ, ಸಭೆ ಕರೆಯುತ್ತಿರುತ್ತೇನೆ. ನಾನು ಕಳೆದ ನಾಲ್ಕೈದು ವರ್ಷಗಳಿಂದ ಕುಟುಂಬದವರ ಜತೆ ಎಲ್ಲಿಯೂ ಹೋಗಿರಲಿಲ್ಲ. ಆದ ಕಾರಣಕ್ಕೆ ವಿದೇಶ ಪ್ರವಾಸಕ್ಕೆ ತೆರಳಿದ್ದೆ. ಅನೇಕ ಸಚಿವರು ಕೂಡ ಕುಟುಂಬ ಸಹಿತ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಬೆಂಗಳೂರಿನಲ್ಲಿದ್ದವರು ಒಂದು ಸಂಜೆ ಒಟ್ಟಿಗೆ ಸೇರಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದರು.

ಯಾವುದೂ ಇಲ್ಲ
ಸಚಿವ ಸಂಪುಟ ಪುನಾರಚನೆ ಆಗಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಯಾವ ಚರ್ಚೆಯೂ ನಡೆದಿಲ್ಲ. ಮಾಧ್ಯಮದವರಿಗೆ ಯಾರೋ ತಪ್ಪು ಮಾಹಿತಿ ನೀಡಿ, ನಿಮಗೆ ಬಿಡುವು ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಷಯ. ಅವರು ಇದರ ಬಗ್ಗೆ ಮಾತನಾಡುತ್ತಾರೆ ಎಂದರು.

ಸಿಎಂ ಬದಲಾವಣೆ ವಿಷಯ ಬರುವುದಿಲ್ಲ: 
2028ಕ್ಕೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ. ಆಗಿನ ಪರಿಸ್ಥಿತಿ ಹೇಗಿರುತ್ತದೋ, ಏನಾಗುತ್ತದೆಯೋ ಕಾದು ನೋಡಬೇಕು. ಸದ್ಯಕ್ಕೆ ಮುಖ್ಯಮಂತ್ರಿ ಇದ್ದಾರೆ. ಸಿಎಂ ಬದಲಾವಣೆ ವಿಷಯ ಬರುವುದಿಲ್ಲ. ರಹಸ್ಯ ಸಭೆ ಏನೂ ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದೇವೆ. ಅದು ಭೋಜನಕೂಟ ಅಷ್ಟೇ. ಸಭೆಯಲ್ಲಿ ಅಂಥದ್ದೇನೂ ಚರ್ಚೆ ಆಗಿಲ್ಲ. ಸಚಿವ ಸಂಪುಟ ವಿಸ್ತರಣೆಯೂ ಇಲ್ಲ.  –ಸತೀಶ್‌ ಜಾರಕಿಹೊಳಿ, ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next