Advertisement

Goa; ಮೋಪಾ ವಿಮಾನ ನಿಲ್ದಾಣದಲ್ಲಿ ಸನ್‍ಬರ್ನ್ ಸಂಗೀತೋತ್ಸವಕ್ಕೆ ವಿರೋಧ

05:31 PM Aug 25, 2023 | Team Udayavani |

ಪಣಜಿ: ಗೋವಾದಲ್ಲಿ ಈ ವರ್ಷದ ಸನ್‍ಬರ್ನ್ 2023 ಸಂಗೀತ ಉತ್ಸವವು ಉತ್ತರ ಗೋವಾದ ಮೋಪಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಸರದಲ್ಲಿ  ಈ ಉತ್ಸವ ನಡೆಯುವ ಸಾಧ್ಯತೆ ಹೆಚ್ಚಿದೆ. ಪ್ರಸ್ತಾವನೆಗೆ ಅನುಮೋದನೆ ಅಂತಿಮ ಹಂತದಲ್ಲಿದೆ ಎಂದು ತಿಳಿದು ಬಂದಿದೆ.

Advertisement

ಲಭ್ಯ ಮಾಹಿತಿಯ ಪ್ರಕಾರ ಸನ್ ಬರ್ನ್ ನ ಪ್ರವರ್ತಕ ಹರಿಂದರ್ ಸಿಂಗ್ ರವರು ಗೋವಾ ರಾಜ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ವಿಮಾನ ನಿಲ್ದಾಣದ ಬಳಿ ಸನ್ ಬರ್ನ್ ಉತ್ಸವ ಕೈಗೆತ್ತಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಅಂತಿಮ ಹಂತದಲ್ಲಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಈ ವರ್ಷ ಮೋಪಾ ವಿಮಾನ ನಿಲ್ದಾಣ ಪ್ರದೇಶದಲ್ಲಿ  ಸನ್‍ಬರ್ನ್ ಸಂಗೀತ ಉತ್ಸವ ಆಗುವುದು ಬಹುತೇಕ ಖಚಿತವಾಗಿದೆ.

ಆದರೆ, ಮೋಪಾದಲ್ಲಿ ಯೋಜಿತ ಸನ್‍ಬರ್ನ್ ಮಹೋತ್ಸವಕ್ಕೆ  ಪೆಡ್ನೆ ತಾಲೂಕಿನಿಂದ ವಿರೋಧ ವ್ಯಕ್ತವಾಗಿದೆ. ಪೆಡ್ನೆ ತಾಲೂಕಿನ ಸಂಸ್ಕೃತಿಗೆ ತಿಲಾಂಜಲಿ ನೀಡುವ ಕೆಲಸ ಸಂಘಟಕರು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕ ಪ್ರವೀಣ್ ಅರ್ಲೇಕರ್ ಅವರು ಮೊಪಾದಲ್ಲಿ ಯೋಜಿತ ಸನ್‍ಬರ್ನ್ ಮಹೋತ್ಸವಕ್ಕೆ  ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿ, ಮೋಪಾದಲ್ಲಿ ಸನ್‍ಬರ್ನ್ ಸಂಗೀತ ಮಹೋತ್ಸವ ತಡೆಯಲು ಸರಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಏತನ್ಮಧ್ಯೆ, ಗೋವಾದಲ್ಲಿ ಸನ್ ಬರ್ನ್ ಉತ್ಸವವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರತಿ ವರ್ಷ ಡಿಸೆಂಬರ್ 28, 29, 30 ರಂದು ಅಂಜುನ, ವಾಗಾತೋರ್ ನಲ್ಲಿ ಮೂರು ದಿನಗಳ ಉತ್ಸವ ನಡೆಯುತ್ತದೆ. ಪ್ರಸಕ್ತ  ವರ್ಷ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಮಹೋತ್ಸವ ಆಯೋಜಿಸಲು ಸಂಘಟಕರು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next