ಪಣಜಿ: ಪ್ರವಾಸಿ ಬೋಟೊಂದು ಮುಳುಗಿದ ಪರಿಣಾಮ ಓರ್ವ ಮೃತಪಟ್ಟು ಇಪ್ಪತ್ತು ಮಂದಿಯನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಗೋವಾದ ಕ್ಯಾಲಂಗುಟ್ ಬೀಚ್ನ ಅರಬ್ಬಿ ಸಮುದ್ರದಲ್ಲಿ ಬುಧವಾರ(ಡಿ.25) ನಡೆದಿದೆ.
ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯಲ್ಲಿ ೫೪ ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ದೋಣಿಯಲ್ಲಿ ಮಹಾರಾಷ್ಟ್ರದ ಖೇಡ್ ಪ್ರದೇಶದಿಂದ ಬಂದ ಒಂದೇ ಕುಟುಂಬದ 13 ಮಂದಿ ಪ್ರಯಾಣಿಸುತಿದ್ದರು ಎನ್ನಲಾಗಿದ್ದು ದುರಂತದ ವೇಳೆ ಇಬ್ಬರು ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರೆಲ್ಲರೂ ಲೈಫ್ ಜಾಕೆಟ್ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕರಾವಳಿಯಿಂದ ಸರಿಸುಮಾರು 60 ಮೀಟರ್ ದೂರದಲ್ಲಿ ದೋಣಿ ಮಗುಚಿ ಬಿದ್ದಿದ್ದು ಪರಿಣಾಮ ಬೋಟ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಮುದ್ರಕ್ಕೆ ಬಿದ್ದಿದ್ದಾರೆ. ಈ ವೇಳೆ ಅಲ್ಲೇ ಇದ್ದ ರಕ್ಷಣಾ ತಂಡ ಕೂಡಲೇ ಕಾರ್ಯಾಚರಣೆ ನಡೆಸಿ ಇಪ್ಪತ್ತು ಮಂದಿಯನ್ನು ರಕ್ಷಣೆ ಮಾಡಿದ್ದಾರೆ ಆದರೆ ೫೪ ವರ್ಷದ ವ್ಯಕ್ತಿಯೊಬ್ಬರು ಸಮುದ್ರ ಪಾಲಾಗಿದ್ದರು ಎನ್ನಲಾಗಿದೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು ಅವರಲ್ಲಿ ಕೆಲವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಬರುತಿದ್ದು ಬೀಚ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ.
ಇದನ್ನೂ ಓದಿ: Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?