Advertisement

Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ

04:18 PM Dec 31, 2024 | Kavyashree |

ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ದೇವರ ದರ್ಶನ ಪಡೆದು ನಂತರ ರಥವನ್ನು ಎಳೆಯುವ ಮೂಲಕ ಪುನೀತರಾದರು.

Advertisement

ಡಿ.31ರ ಮಂಗಳವಾರ ರಾಮೇಶ್ವರ ದೇವಸ್ಥಾನದ ಅವರಣದಿಂದ ರಥವನ್ನು ಗಾಂಧಿಚೌಕದವರೆಗೆ ರಥಬೀದಿಯಲ್ಲಿ ಎಳೆಯಲಾಗುತ್ತದೆ. ರಥೋತ್ಸವದ ವೇಳೆ ಅಡಕೆ ಹೊಸ ಫಸಲನ್ನು ರಥದತ್ತ ಭಕ್ತರು ತೂರಿದರು. ರಥಕ್ಕೆ ತಾಗಿ ಕೆಳಗೆ ಬೀಳುತ್ತಿದ್ದ ಅಡಕೆ ಫಸಲನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರು.

ರಥೋತ್ಸವಕ್ಕೂ ಮೊದಲು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಭಾರೀ ಸಂಖ್ಯೆಯ ಭಕ್ತರು ಸೇರಿದ್ದರು. ಈ ವೇಳೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾ ಪೂಜೆ ನೆರವೇರಿಸಲಾಯಿತು.

ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಶ್ರೀರಾಮೇಶ್ವರ ಅನ್ನದಾಸೋಹ ಮಿತ್ರ ವೃಂದ ನೇತೃತ್ವದಲ್ಲಿ ರಥೋತ್ಸವಕ್ಕಾಗಿ ಆಗಮಿಸಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

Advertisement

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಈ ದೇವಸ್ಥಾನದ ಜಾತ್ರಾ ಮಹೋತ್ಸವದ ಯಶಸ್ಸಿಗಾಗಿ ಜನಪ್ರತಿನಿಧಿಗಳು, ಸೇವಾ ಮುಖಂಡರು, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಶ್ರೀರಾಮೇಶ್ವರ ತೆಪ್ಪೋತ್ಸವ ಆಚರಣಾ ಸಮಿತಿ ಸೇರಿ ಹಲವರು ಶ್ರಮಿಸಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಆರ್.ಎಂ. ಮಂಜುನಾಥ್ ಗೌಡ ತಹಶೀಲ್ದಾರ್ ರಂಜಿತ್ ಕೆ.ಎಸ್., ಪ.ಪಂ. ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷ ಗೀತಾ ರಮೇಶ್, ತೆಪ್ಪೋತ್ಸವ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಡಾ. ಸುಂದರೇಶ್ ಪ್ರಧಾನ ತಂತ್ರಿಗಳಾದ ಲಕ್ಷ್ಮೀಶ ತಂತ್ರಿ, ಪ್ರಧಾನ ಅರ್ಚಕರಾದ ರಾಜಶೇಖರ್ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

ನಾಳೆ ಅದ್ದೂರಿ ತೆಪ್ಪೋತ್ಸವ

ಎಳ್ಳಮಾವಾಸ್ಯೆ ಜಾತ್ರೆ ಹಿನ್ನೆಲೆ ಜ.1ರ ಬುಧವಾರ ಕೂಡ ಬೆಳಗ್ಗೆಯಿಂದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ರಾತ್ರಿ 7ಕ್ಕೆ ಸಾರ್ವಜನಿಕ ಅದ್ದೂರಿ ತೆಪ್ಪೋತ್ಸವ, ನಂತರ ಸಂಧಾನ, ಪ್ರಸಾದ ವಿತರಣೆ ನಡೆಯಲಿದೆ.

ಜಾತ್ರೆಗೆ ಸಿಸಿಟಿವಿ ಕಣ್ಗಾವಲು

ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ವತಿಯಿಂದ ಜಾತ್ರೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಿಸಿ ಕ್ಯಾಮೆರಾ, ಡ್ರೋನ್ ಕ್ಯಾಮರಾ ಮೂಲಕ ಕಣ್ಗಾವಲು ಇಡಲಾಗಿದೆ. ಪೊಲೀಸ್ ಇಲಾಖೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next