Advertisement

ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

09:57 PM Jan 24, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಬರುವ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಿನಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜಾಸ್ತಿಯಾಗುವ ಸಾಧ್ಯತೆ ಇದ್ದು, ಈಗಿನಿಂದಲೇ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವುದಕ್ಕೆ ಕ್ರಮ ವಹಿಸಿ. ಕುಡಿಯುವ ನೀರಿಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿಯನ್ನು ಸೃಷ್ಟಿ ಮಾಡುವುದು ಬೇಡ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್‌.ನಾಗಾಂಬಿಕಾದೇವಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ನ್ಯಾಯಾಲಯ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆ ಬರುವ ಗ್ರಾಮಗಳನ್ನು ಈಗಲೇ ಗುರುತಿಸಿ ಕೈಗೊಳ್ಳಬೇಕಾದ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸುವಂತೆ ಆದೇಶಿಸಿದರು.

72 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ: ಜಿಲ್ಲಾದ್ಯಂತ 72 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇವುಗಳಲ್ಲಿ ಟ್ಯಾಂಕರ್‌ ಮೂಲಕ 17 ಹಳ್ಳಿಗಳಿಗೆ ಹಾಗೂ 55 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ಕುಡಿಯುವ ನೀರಿನ ಸರಬರಾಜು ಮಂಡಳಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸ್ವಚ್ಛ ಭಾರತ್‌ಮಿಷನ್‌ ಯೋಜನೆಯಡಿ 68 ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಇದರಲ್ಲಿ 17 ಸಮುದಾಯ ಶೌಚಾಲಯಗಳು ಪೂರ್ಣಗೊಂಡಿದ್ದು, ಉಳಿದ ಶೌಚಾಲಯಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್‌ ಸಭೆಗೆ ತಿಳಿಸಿದರು.

ಮಹಿಳೆಯರಿಗೆ ತರಬೇತಿ ಕೊಡಿ: ಜಿಲ್ಲೆಯಲ್ಲಿ ಈಗಾಗಲೇ ಮಹಿಳೆಯರ ರಕ್ಷಣೆಗಾಗಿ ಒಬ್ಬವ್ವ ಪಡೆ ನಿರ್ಮಿಸಿದ್ದು, ಈ ಪಡೆಯಲ್ಲಿ ನೀಡುವ ಸ್ವ ರಕ್ಷಣೆ ತರಬೇತಿಯನ್ನು ಪ್ರತಿಯೊಬ್ಬ ಮಹಿಳೆಯರು ಪಡೆದುಕೊಂಡು ಆತ್ಮ ರಕ್ಷಣೆ ಮಾಡಿಕೊಳ್ಳಬೇಕು. ಇದರಿಂದ ಮಹಿಳೆಯರು ಪ್ರಸುತ್ತ ಸಮಾಜದಲ್ಲಿ ಸಬಲರಾಗಿ ಜೀವಿಸಲು ಸಾಧ್ಯವಾಗಲಿದೆ. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಆತ್ಮ ರಕ್ಷಣೆ ಮಾಡಿಕೊಳ್ಳುವ ಕುರಿತು ತರಬೇತಿ ಪಡೆದುಕೊಳ್ಳಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ದಾಪುಗಾಲು ಇಟ್ಟಿರುವುದು ಶ್ಲಾಘನೀಯ. ಅದೇ ರೀತಿ ಮಹಿಳೆಯರು ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ ಎಂದರು.

Advertisement

ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಆವಾಸ್‌ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ನಿವೇಶನಗಳಿಗೆ ಅನುದಾನ ಬಿಡುಗಡೆಯಾಗುತ್ತಿದ್ದು, ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಯೋಜನೆಗಳಿಗೆ ಅನುದಾನವು ಬಿಡುಗಡೆಯಾಗುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಗ್ರಾಮ ಮಟ್ಟದಲ್ಲೇ ಪರಿಶೀಲನೆ: ವೃದ್ಧಾಪ್ಯ ವೇತನ, ವಿಧವಾವೇತನ ಹಾಗೂ ಅಂಗವಿಕಲರ ವೇತನ ಸೇರಿದಂತೆ ಇತರೆ ಪಿಂಚಣಿ ಯೋಜನೆಗಳ ಫ‌ಲಾನುಭವಿ ಗಳಿಗೆ ಪ್ರತಿ ತಿಂಗಳು ವೇತನವು ಕೈ ಸೇರುತ್ತಿದ್ದಿಯೋ ಇಲ್ಲವೋ ಎಂಬುವುದರ ಕುರಿತು ಗ್ರಾಮ ಮಟ್ಟದಿಂದಲೇ ಪರಿಶೀಲನೆ ನಡೆಸಬೇಕು. ಇದರಿಂದ ವೇತನ ವಂಚಿತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪ ಮಾತನಾಡಿ, ಈ ಬಾರಿ ತೊಗರಿ ಬೆಳೆಯನ್ನು ಅತ್ಯಧಿಕವಾಗಿ ಬೆಳೆದ ಗೌರಿಬಿದನೂರು ತಾಲೂಕಿನ ರೈತರು ರಾಜ್ಯದಲ್ಲಿಯೇ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿರುವುದು ಶ್ಲಾಘನೀಯ ವಿಷಯ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಆರತಿ ಆನಂದ್‌, ಜಿಪಂ ಉಪ ಕಾರ್ಯದರ್ಶಿ ನೋಮೇಶ್‌ಕುಮಾರ್‌ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

45 ನಿಮಿಷದ ಸಭೆಗೆ ಅಧಿಕಾರಿಗಳ ಇಡೀ ದಿನ ವ್ಯರ್ಥ!
ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಗೆ ನಿಗದಿಗೊಳ್ಳುವ ಸಭೆಗಳನ್ನು ಪದೇ ಪದೆ ಮುಂದೂಡುವ ಅಪವಾದಕ್ಕೆ ಗುರಿಯಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಬರೀ 45 ನಿಮಿಷಗಳ ಪ್ರಗತಿಶೀಲನಾ ಸಭೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಇಡೀ ದಿನ ವ್ಯರ್ಥಗೊಂಡಿತು.

ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌.ನಾಗಾಂಬಿಕಾದೇವಿ ಬೆಳಗ್ಗೆ 12 ಗಂಟೆಗೆ ನಗರದ ಜಿಪಂ ಸಭಾಂಗಣದಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಕರೆದಿದ್ದರು. ಆದರೆ ಉಸ್ತುವಾರಿ ಕಾರ್ಯದರ್ಶಿಗಳು ದಿಢೀರ್‌ನೆ ಸಭೆ ನಡೆಸುವ ಸ್ಥಳವನ್ನು ಜಿಪಂ ಸಭಾಂಗಣದಿಂದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣಕ್ಕೆ ಸ್ಥಳಾಂತರಗೊಂಡಿತು.

ಈಗಾಗಿ ಸಭೆ ನಿಗದಿಯ ಸಮಯಕ್ಕೆ ಆರಂಭಗೊಳ್ಳಲಿಲ್ಲ. 12.10 ನಿಮಿಷಕ್ಕೆ ಡೀಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದರೂ 12.50ಕ್ಕೆಲ್ಲಾ ಸಭೆ ಮುಗಿಸಿ ಬೆಂಗಳೂರಿಗೆ ಹೊರಟರು. ಹೀಗಾಗಿ ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಹೆಸರಿನಲ್ಲಿ ಇಡೀ ದಿನ ವ್ಯರ್ಥಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next