Advertisement
ಶಾರದಾ ದೇವಿ, 19ನೇ ಶತಮಾನದಲ್ಲಿ, ಬಂಗಾಳದಲ್ಲಿ ಆಗಿಹೋದ ಸುಪ್ರಸಿದ್ಧ ಸಂತ ರಾಮಕೃಷ್ಣ ಪರಮಹಂಸರ ಪತ್ನಿ. ಆದರೆ ಅವರ ಗುರುತು ಅಷ್ಟಕ್ಕೆ ಸೀಮಿತವಲ್ಲ. ಶಾರದಾ ದೇವಿ ಸ್ವತಃ ಅಧ್ಯಾತ್ಮ ಸಾಧಕಿ. ತಮ್ಮದೇ ಆದ ಶಿಷ್ಯ ಬಳಗವನ್ನೂ ಹೊಂದಿದ್ದವರು. ಪರಮಹಂಸರ ವಿಚಾರಧಾರೆಯನ್ನು ಅಕ್ಷರಶಃ ಕಾರ್ಯರೂಪಕ್ಕಿಳಿಸಿದವರು.
Related Articles
Advertisement
***
ಪರಮಹಂಸರು ಕಾಲವಾದ ನಂತರ ಸ್ವಲ್ಪ ಕಾಲ ಹಳ್ಳಿಗೆ ಹೋಗಿ ನೆಲೆಸಿದ್ದ ಶಾರದಾ ದೇವಿ ನಡೆಸಿದ ಜೀವನ ಎಂಥವರಿಗೂ ಮಾದರಿಯಾ ಗುವಂಥದ್ದು. ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಅವರು, ಹಿತ್ತಲಲ್ಲಿ ಸೊಪ್ಪು ಬೆಳೆದುಕೊಂಡಿ ದ್ದರು. ದಿನಕ್ಕೆ ಒಂದು ಹೊತ್ತು, ಆ ಸೊಪ್ಪಿಗೆ ಉಪ್ಪು ಹಾಕಿ ಬೇಯಿಸಿಕೊಂಡು ತಿನ್ನುತ್ತಿದ್ದರು. ಬಾಕಿ ಸಮಯವೆಲ್ಲ ಮನೆಯ ಸುತ್ತಮುತ್ತ ಲನ್ನು ಶುಚಿಯಾಗಿಡುವುದಕ್ಕೆ, ಭೇಟಿಗೆ ಬಂದವರ ಜೊತೆ ಪ್ರೀತಿಯಿಂದ ಮಾತಾಡು ವುದಕ್ಕೆ, ಬಹುಪಾಲು ಸಮಯವನ್ನು ಜಪ ಧ್ಯಾನಕ್ಕೆ ವಿನಿಯೋಗಿಸುತ್ತಿದ್ದರು.
ಮನುಷ್ಯರು ವಿನಮ್ರರಾಗಿರಬೇಕು, ಆದರೆ ಯಾವತ್ತೂ ಸ್ವಾಭಿಮಾನ ಬಿಟ್ಟುಕೊಡಬಾರದು. ನಮ್ಮಲ್ಲಿ ದೈನ್ಯ ಇರಬೇಕು, ಆದರೆ ಅದು ಸ್ವಾನುಕಂಪದ ರೂಪ ತಾಳಬಾರದು ಅನ್ನು ವುದು ಶಾರದಾ ದೇವಿಯವರ ಸ್ಪಷ್ಟ ನಿಲುವಾ ಗಿತ್ತು. ತಮ್ಮ ಜೀವಿತದ ಯಾವ ಘಟ್ಟದಲ್ಲೂ ಅವರು ತಮ್ಮ ಸ್ವಾಭಿಮಾನ ಬಿಡಲಿಲ್ಲ. ಪರಮಹಂಸರ ಶಿಷ್ಯರು ಒತ್ತಾಯ ಮಾಡಿ ಅವರನ್ನು ಕಲ್ಕತ್ತಕ್ಕೆ ಕರೆದುಕೊಂಡು ಹೋದ ಮೇಲೆ ಸುಮ್ಮನೆ ಕುಳಿತುಕೊಂಡು ಉಪಚಾರ ಮಾಡಿಸಿಕೊಳ್ಳಲಿಲ್ಲ. ದಿನವಿಡೀ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡು ತಮ್ಮ ಊಟ – ವಸತಿಯ ಲೆಕ್ಕ ಸರಿದೂಗುವಂತೆ ನೋಡಿಕೊಳ್ಳುತ್ತಿದ್ದರು. ಸ್ವಾಭಿಮಾನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ವಾವಲಂಬನೆ ಮೊದಲ ಹೆಜ್ಜೆ ಅನ್ನುವ ಸ್ಪಷ್ಟತೆ ಅವರಿಗಿತ್ತು.
***
ಶಾರದಾ ದೇವಿಯವರು ಬದುಕಿದ್ದ ಕಾಲ, ಭಾರತ ದೇಶವು ಬ್ರಿಟಿಷರ ಅಧೀನ ದಲ್ಲಿದ್ದ ಕಾಲ. ಸ್ವಾತಂತ್ರ್ಯ ಹೋರಾಟದ ಕಾವಿನ ಜೊತೆಗೇ ಸಾಮಾಜಿಕ ಬದಲಾವಣೆಯ ಗಾಳಿಯೂ ಬೀಸತೊಡಗಿದ್ದ ಕಾಲ. ಶಾರದಾ ದೇವಿಯವರೂ ಬದಲಾವಣೆಯ ಈ ಪರ್ವಕ್ಕೆ ಕೈಜೋಡಿಸಿದ್ದರು. ಹೆಣ್ಣುಮಕ್ಕಳು ಸಮಾಜದಲ್ಲಿ ಬೆರೆಯದೆ ಬದಲಾವಣೆ ಅಸಾಧ್ಯವೆಂದು ಮನಗಂಡಿದ್ದ ಅವರು, ಅದನ್ನು ಸಾಧ್ಯವಾಗಿ ಸಲು ಎಲ್ಲ ಬಗೆಯ ಪ್ರಯತ್ನ ಮಾಡಿದರು. ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಿದರು. ಸ್ವಾಮಿ ವಿವೇಕಾನಂದರೊಡನೆ ಭಾರತಕ್ಕೆ ಬಂದಿದ್ದ ಸೋದರಿ ನಿವೇದಿತಾ, ಮೇಡಮ್ ಮ್ಯಾಕ್ಲಾಯx… ಮೊದಲಾದವರಿಗೆ ಉತ್ಸಾಹ ತುಂಬಿ, ಬಂಗಾಳದಲ್ಲಿ ಹೆಣ್ಣುಮಕ್ಕಳ ಶಾಲೆ ತೆರೆಯಲು ಪ್ರೇರೇಪಿಸಿದರು. ತಾವೇ ಮುಂಚೂಣಿಯಲ್ಲಿ ನಿಂತು ಬಾಲಕಿಯರನ್ನು ಶಾಲೆಗೆ ಕಳಿಸುವಂತೆ ತಮ್ಮ ಭಕ್ತರಿಗೆ ಕರೆ ನೀಡಿದರು.
ಅಂದಿನ ಬಂಗಾಳದ ಪರಿಸ್ಥಿತಿಯಲ್ಲಿ ಶಾರದಾ ದೇವಿಯವರ ಈ ಹೆಜ್ಜೆ ಕ್ರಾಂತಿಕಾರ ಕವಾಗಿತ್ತೆಂದೇ ಹೇಳಬಹುದು. ಅಲ್ಲಿಯ ಕೆಲವು ಕರ್ಮಠ ಪಂಡಿತರು. “ಆಕೆ ಹೆಣ್ಣು, ಅದರಲ್ಲೂ ವಿಧವೆ, ಜೊತೆಗೆ ಮೇಲ್ಜಾತಿಯ ವರು. ಅಂಥವರು ಜನಸಾಮಾನ್ಯರೊಡನೆ ಬೆರೆಯುತ್ತಾ, ಅವರ ಮನೆಯ ಹೆಣ್ಣುಮಕ್ಕಳಿಗೆ ಓದುವ ಸಲಹೆ ನೀಡುವುದೆಂದರೆ ಏನು? ಹೆಣ್ಣುಮಕ್ಕಳು ಓದಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವೇ? ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಕಾಲಿಡುವುದು ಧರ್ಮಬಾಹಿರವಲ್ಲವೆ?’ ಎಂದೆಲ್ಲ ಪ್ರಶ್ನೆ ಎತ್ತಿದರು. ಇಂಥ ಮಾತಿನ ಚಾಟಿಗಳಿಗೆಲ್ಲ ಶಾರದಾ ದೇವಿಯವರ ಮೌನವೇ ಉತ್ತರವಾ ಗಿರುತ್ತಿತ್ತು, ಸೃಷ್ಟಿಯಲ್ಲಿ ಯಾರೂ ಕೆಟ್ಟವರಲ್ಲ. ಪ್ರತಿಯೊಬ್ಬರ ವರ್ತನೆಗೂ ಅವರದೇ ಆದ ಕಾರಣವಿರುತ್ತದೆ ಅನ್ನೋದು ಅವರ ನಂಬಿಕೆಯಾಗಿತ್ತು.
***
ತಾಯ್ತನವೇ ಮೈವೆತ್ತಂತಿದ್ದ ಶಾರದಾ ದೇವಿಯವರಿಗೆ ಪ್ರತಿಯೊಬ್ಬರ ಭಾವನೆಯೂ ಅರ್ಥವಾಗುತ್ತಿತ್ತು. ಆದ್ದರಿಂದಲೇ ಅವರು ಎಲ್ಲರ ಜೊತೆಗೂ ಸಮಾಧಾನದಿಂದ, ನಗುಮೊಗದಿಂದ ವ್ಯವಹರಿಸುತ್ತಿದ್ದರು. ಅವರು ಸಿಡುಕಿದ್ದಾಗಲೀ ಗಟ್ಟಿ ದನಿಯಲ್ಲಿ ಮಾತಾಡಿದ್ದೇ ಇಲ್ಲ ಅನ್ನುವ ಜೀವನಗಂಗಾ, ಒಂದು ಅಪರೂಪದ ಪ್ರಕರಣ ದಾಖಲಿಸುತ್ತದೆ.
ಶಾರದಾ ದೇವಿಯವರು, ಶಿಷ್ಯರ ಒತ್ತಾಯದ ಮೇರೆಗೆ ಕಲ್ಕತ್ತದ ಭಾಗ್ ಬಜಾರಿನ ಮನೆಯಲ್ಲಿದ್ದ ಸಂದರ್ಭ. ಮನೆಯ ಹಿಂಭಾಗದ ಕೊಳಗೇರಿಯಲ್ಲಿ ಕುಡಿದು ಮತ್ತನಾದ ಗಂಡನೊಬ್ಬ ಹೆಂಡತಿಯನ್ನು ಬೈಯುತ್ತಾ ಬಡಿಯುತ್ತಿದ್ದನಂತೆ. ಈ ಗದ್ದಲ ಕೇಳುತ್ತಲೇ ಮಾಳಿಗೆಗೆ ಹೋಗಿ ನಿಂತ ಶಾರದಾ ದೇವಿಯವರು “ಈ ದುಷ್ಟತನ ನಿಲ್ಲಿಸು…’ ಎಂದು ಅಬ್ಬರಿಸಿದರಂತೆ. ಆತ ಬೆಚ್ಚಿಬಿದ್ದು ಕೂಡಲೇ ತನ್ನ ದೌರ್ಜನ್ಯ ನಿಲ್ಲಿಸಿಬಿಟ್ಟನಂತೆ. ಇದು ಶಾರದಾ ದೇವಿಯವರ ಸಾಮರ್ಥ್ಯ. ಇದು ಶಾಂತ ಕಡಲಿನ ಭೋರ್ಗರೆತದ ತಾಕತ್ತು.
-ಚೇತನಾ ತೀರ್ಥಹಳ್ಳಿ