Advertisement

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

02:31 PM Dec 22, 2024 | Team Udayavani |

ಗಂಗಾವತಿ: ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಜಲಾನಯನ ಪ್ರದೇಶದಲ್ಲಿ ಸುರಿದ ಭೀಕರ ಮಳೆಯಿಂದಾಗಿ ರೈತರ ಜೀವನಾಡಿ ತುಂಗಭದ್ರಾ ಡ್ಯಾಂ ಗೆ ವಾರ್ಷಿಕ ಸರಾಸರಿಗಿಂತ ಹೆಚ್ಚುವರಿ ನೀರು ಹರಿದು ಬಂದಿದ್ದರಿಂದ ಡ್ಯಾಂ ನ 19 ನೇಯ ಕ್ರಸ್ಟ್‌ ಗೇಟ್ ಮುರಿದು ಅಪಾರಪ್ರಮಾಣದ ನೀರು ಪೋಲಾಗಿ ಅಚ್ಚುಕಟ್ಟು ಪ್ರದೇಶದ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಲಕ್ಷಾಂತರ ಕೃಷಿಕರು ತೀವ್ರ ಆತಂಕಗೊಂಡು ಭವಿಷ್ಯದಲ್ಲಿ ಕಷ್ಟ ಎದುರಾಗುವ ಭಯದಲ್ಲಿದ್ದರು. ಈ ಸಂದರ್ಭದಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ,ಅಚ್ಚುಕಟ್ಟು ಪ್ರದೇಶದ ಸಚಿವರು,ಶಾಸಕರು,ಸಂಸದರು ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಹಗಲು ರಾತ್ರಿ ಡ್ಯಾಂ ಕ್ರಸ್ಟ್‌ ಗೇಟ್ ಪುನರ್ ಜೋಡಣೆ ಮಾಡಲಾಯಿತು.

Advertisement

ಎನ್.ಕನ್ನಯ್ಯನಾಯ್ಡುಗೆ ಗೌರವಧನ
ಮರೆತ ಬೋರ್ಡ್: ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್ ಆ ಜೋಡಣೆಯಲ್ಲಿ ಹಗಲು ರಾತ್ರಿ ಇಂಜಿನಿಯರ್ ಗಳು,ಕಾರ್ಮಿಕರಿಗೆ ಅಗತ್ಯ ಸಲಹೆ, ಸೂಚನೆ ನೀಡಿ ಕ್ರಸ್ಟ್‌ ಗೇಟ್ ವಿನ್ಯಾಸಗೊಳಿಸಿ 9 ದಿನಗಳ ಕಾಲ ಡ್ಯಾಂ ನಲ್ಲಿ ಇದ್ದು ಕೆಲಸ ನಿರ್ವಹಿಸಿದ ಆಂದ್ರಪ್ರದೇಶದ ಮೂಲದ ಕನ್ನಯ್ಯ ನಾಯ್ಡು ಅವರಿಗೆ ರಾಜ್ಯ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ ತುಂಗಭದ್ರಾ ಬೋರ್ಡ್ ಹಾಗೂ ಜಲಸಂಪನ್ಮೂಲ ಇಲಾಖೆಯ ವತಿಯಿಂದ ಕನ್ನಯ್ಯನಾಯ್ಡುಗೆ ನೀಡಬೇಕಿದ್ದ ಗೌರವಧನ ನೀಡದೇ ಬಾಕಿ ಉಳಿಸಿಕೊಂಡಿರುವ ಕುರಿತು ನಾಯ್ಡು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ವೈಯಕ್ತಿಕವಾಗಿ ಕನ್ನಯ್ಯನಾಯ್ಡ ಹಾಗೂ ಕಾರ್ಮಿಕರಿಗೆ ಘೋಷಣೆ ಮಾಡಿದಂತೆ ಪ್ರೋತ್ಸಾಹ ಧನ ಎಲ್ಲರನ್ನೂ ಸನ್ಮಾನಿಸಿ ಪ್ರೋತ್ಸಾಹಧನ ವಿತರಣೆ ಮಾಡಿದ್ದಾರೆ. ತುಂಗಭದ್ರಾ ಬೋರ್ಡ್ ಹಾಗೂ ಜಲಸಂಪನ್ಮೂಲ ಇಲಾಖೆಯವರು ನಾಯ್ಡು ಅವರ ಸೇವೆಯನ್ನು ಪಡೆದು ಅವರಿಗೆ ಆರ್ಥಿಕ ಗೌರವಧನ ಕೊಡದೇ ನಿರ್ಲಕ್ಷ್ಯ ಮಾಡಿರುವ ಕುರಿತು ಆತ್ಮೀಯರ ಜತೆ ನಾಯ್ಡು ಸ್ವತಹ ಹೇಳಿಕೊಂಡಿದ್ದಾರೆ. ಜತೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಸರಕಾರ ಕೊಟ್ಟಿದ್ದ ಸ್ಮರಣಿಕೆ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣೆಯಾಗಿದ್ದು ಸರಕಾರ ಅದನ್ನು ವಾಪಸ್ ಕೊಡಿಸುವ ವ್ಯವಸ್ಥೆ ಮಾಡಿಸುವಂತೆಯೂ ಆಪ್ತರಲ್ಲಿ ನಾಯ್ಡು ಮನವಿ ಮಾಡಿದ ಪ್ರಸಂಗವೂ ಜರುಗಿದೆ.

ರೈತರ ಆಕ್ರೋಶ: ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್ ಜೋಡಣೆಯ ಮೂಲಕ ಅಮೂಲ್ಯ ಸೇವೆ ಒದಗಿಸಿದ ಎನ್.ಕನ್ನಯ್ಯನಾಯ್ಡುಗೆ ತುಂಗಭದ್ರಾ ಬೋರ್ಡ್ ಹಾಗೂ ಜಲಸಂಪನ್ಮೂಲ ಇಲಾಖೆ, ಕೊಪ್ಪಳ, ವಿಜಯನಗರ ಜಿಲ್ಲಾಡಳಿತಗಳು ಕೂಡಲೇ ನಾಯ್ಡು ಅವರಿಗೆ ಸೂಕ್ತ ಗೌರವಧನ ನೀಡುವ ಜತೆ ಕನ್ನಡ ರಾಜ್ಯೋತ್ಸವದ ಸ್ಮರಣಿಕೆಯನ್ನು ರಾಜ್ಯ ಸರಕಾರ ತಲುಪಿಸಬೇಕೆಂದು ರೈತ ಮುಖಂಡರಾದ ಟಿ.ಸತ್ಯನಾರಾಯಣ, ಸಿದ್ದಾಪೂರ ಸಿ.ಎಚ್.ಗೋಪಿ,ವೈ.ಆನಂದರಾವ್ ಸೇರಿ ರೈತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next