Advertisement

ವರ್ಷದಲ್ಲಿ ನೀರಿನ ಸಮಸ್ಯೆ ನಿವಾರ‌ಣೆ

01:34 PM Aug 02, 2017 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ 369 ಕೋಟಿ ರೂ. ಅನುದಾನದ ಜಲಸಿರಿ, 89 ಕೋಟಿ ರೂ. ವೆಚ್ಚದ ಪ್ರತ್ಯೇಕ ಜಾಕ್‌ವೆಲ್‌, ಶುದ್ಧೀಕರಣ ಘಟಕ, 9 ಕೋಟಿ ರೂ. ವೆಚ್ಚದ ಕುಂದುವಾಡ- ಟಿವಿ ಸ್ಟೇಷನ್‌ ಕೆರೆ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ದೊಡ್ಡಬಾತಿ ನೀರು ಶುದ್ಧೀಕರಣ ಘಟಕದಲ್ಲಿ ಮಂಗಳವಾರ 66/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ದಾವಣಗೆರೆ ನಗರದ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. ಎಲ್ಲ ಕಾಮಗಾರಿ ಪೂರ್ಣಗೊಂಡ ಬಳಿಕ ಈಗ ದೊರೆಯುತ್ತಿರುವ ಪ್ರಮಾಣಕ್ಕಿಂತಲೂ ಮೂರು ಪಟ್ಟು ನೀರು ದೊರೆಯಲಿದೆ ಎಂದರು.

ರಾಜನಹಳ್ಳಿ ಜಾಕ್‌ವೆಲ್‌, ದೊಡ್ಡಬಾತಿಯ ನೀರು ಶುದ್ಧೀಕರಣ ಘಟಕಕ್ಕೆ ನಿರಂತರ ವಿದ್ಯುತ್‌ ಒದಗಿಸುವ ಎಕ್ಸ್‌ಪ್ರೆಸ್‌ ಫಿಡರ್‌ ಲೈನ್‌ ಕಾಮಗಾರಿ ಏನಿಲ್ಲ ಎಂದರೂ 3-4 ವರ್ಷ ವಿಳಂಬವಾಗಿದೆ. ಮೊದಲು 10 ಕೋಟಿ ರೂ. ಇದ್ದ ಕಾಮಗಾರಿ ಅಂದಾಜು ಆ ನಂತರ 12, 14 ಕೋಟಿ ರೂ. ನಂತರ ಈಗ 17.8 ಕೋಟಿ ರೂ. ಆಗಿದೆ. ಕಾಮಗಾರಿ ಪ್ರಾರಂಭವಾಗಿರುವುದು ಸಂತೋಷದ ವಿಚಾರ. 11 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಕೆಲಸ ಮುಗಿದಲ್ಲಿ ನೀರಿನ ಸಮಸ್ಯೆ ಸಾಕಷ್ಟು ನೀಗಲಿದೆ ಎಂದು ತಿಳಿಸಿದರು.

24×7 ಮಾದರಿಯಲ್ಲಿ ನಿತ್ಯ ನೀರು ಒದಗಿಸುವ 369 ಕೋಟಿ ರೂ. ಅನುದಾನದ ಜಲಸಿರಿ ಯೋಜನೆಯ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ. 89 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯ ಬಳಿ ಪ್ರತ್ಯೇಕ ಜಾಕ್‌ ವೆಲ್‌ ನಿರ್ಮಾಣ ಮಾಡಿ, ಪೈಪ್‌ಲೈನ್‌ ಮೂಲಕ ದೊಡ್ಡಬಾತಿಯ ನೀರು ಶುದ್ಧೀಕರಣ ಘಟಕದವರೆಗೆ ನೀರು ಹಾಯಿಸಿ, ಸಂಸ್ಕರಣೆ ನಂತರ ದಾವಣಗೆರೆಗೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಕುಂದುವಾಡ ಕೆರೆಯಿಂದ ಟಿವಿ ಸ್ಟೇಷನ್‌ ಕೆರೆ ನೀರು ಹರಿಸಲು 9 ಕೋಟಿ ರೂ. ವೆಚ್ಚದ ಪೈಪ್‌ಲೈನ್‌ ಕಾಮಗಾರಿ ಪ್ರಾರಂಭಿಸಲಾಗುವುದು. ಹಳೆ ಪಿಬಿ ರಸ್ತೆ ಮತ್ತು ರಿಂಗ್‌ ರಸ್ತೆಯುದ್ದಕ್ಕೂ 2 ಅಡಿ ವಿಸೀ¤ರ್ಣದ ಪೈಪ್‌ ಅಳವಡಿಸಿ, ಆ ಮೂಲಕ 18 ಓವರ್‌ ಹೆಡ್‌ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿ, ಅಲ್ಲಿಂದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುವುದು. ಒಟ್ಟಾರೆ ದಾವಣಗೆರೆ ಜನರ ನೀರಿನ ಸಮಸ್ಯೆ ನಿವಾರಣೆಗೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಕೋಟ್ಯಂತರ ಮೊತ್ತದ ಕೆಲಸ ಕೈಗೊಂಡು ನಿರಂತರವಾಗಿ ನೀರು ದೊರೆಯುವಂತಾಗಬೇಕು ಎನ್ನುವ ಕಾರಣಕ್ಕೆ
ತುಂಗಭದ್ರಾ ನದಿಯಲ್ಲಿ ಬ್ಯಾರೇಜ್‌ ನಿರ್ಮಿಸಲಾಗುವುದು ಎಂದು ತಿಳಿಸಿದರು.

Advertisement

ದೊಡ್ಡಬಾತಿಯ ನೀರು ಶುದ್ಧೀಕರಣ ಘಟಕಕ್ಕೆ ಬೇಕಾಗಿದ್ದ 5 ಎಕರೆ ಜಾಗ ದೊರೆಯಲು 1996ರಲ್ಲಿ ಸಚಿವರಾಗಿದ್ದ ಎಚ್‌. ಶಿವಪ್ಪನವರು ಸಾಕಷ್ಟು ಸಹಕಾರ ನೀಡಿದ್ದನ್ನು ಸ್ಮರಿಸಬೇಕಾಗುತ್ತದೆ. ಮೊದಲ ಬಾರಿಗೆ ಸಚಿವನಾಗಿದ್ದ ಸಂದರ್ಭದಲ್ಲಿ ದೊಡ್ಡಬಾತಿ- ದರ್ಗಾ- ಹಳೆಬಾತಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಕೆಲಸ ಕೈಗೊಳ್ಳಲಾಗಿತ್ತು. ಈಗ ಗುಡ್ಡದ ಕ್ಯಾಂಪ್‌ ಮೂಲಕ ಹಳೆ ಪಿಬಿ ರಸ್ತೆ ಸಂಪರ್ಕಿಸುವ ರಸ್ತೆಯನ್ನು ಸಿಮೆಂಟ್‌ ಕಾಂಕ್ರೀಟ್‌ ರಸ್ತೆಯನ್ನಾಗಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಹರಿಹರ ತಾಲೂಕಿನ ಗಡಿ ಭಾಗದಿಂದ ಬಾಡ ಕ್ರಾಸ್‌ವರೆಗೆ ಜೋಡಿ ರಸ್ತೆ, ಜಿಲ್ಲಾಧಿಕಾರಿ ಕಚೇರಿಯಿಂದ ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ವರೆಗೆ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ  ನಿರ್ಮಾಣ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 

ಡೆಪ್ಯುಟಿ ಮೇಯರ್‌ ಜಿ. ಮಂಜಮ್ಮ ಅಧ್ಯಕ್ಷತೆ ವಹಿಸಿದ್ದರು. ದೂಡಾ ಅಧ್ಯಕ್ಷ ಜಿ.ಎಚ್‌. ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌, ಮಾಜಿ ಮೇಯರ್‌ಗಳಾದ ರೇಖಾ ನಾಗರಾಜ್‌, ಎಚ್‌.ಬಿ. ಗೋಣೆಪ್ಪ, ರೇಣುಕಾಬಾಯಿ, ಸದಸ್ಯರಾದ ಆವರಗೆರೆ ಎಚ್‌.ಜಿ. ಉಮೇಶ್‌, ಪಿ.ಕೆ. ಲಿಂಗರಾಜ್‌, ಜೆ.ಬಿ. ಲಿಂಗರಾಜ್‌, ಲಲಿತಾ ರಮೇಶ್‌, ಎಚ್‌. ತಿಪ್ಪಣ್ಣ, ಎ.ಬಿ. ರಹೀಂ, ಪಿ.ಎನ್‌. ಚಂದ್ರಶೇಖರ್‌, ದೊಡ್ಡಬಾತಿ ಗ್ರಾಪಂ ಅಧ್ಯಕ್ಷ ಮಂಜುನಾಥ್‌, ಉಪಾಧ್ಯಕ್ಷ ಕೆಂಚಪ್ಪ, ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌, ಆಯುಕ್ತ ಬಿ.ಎಚ್‌. ನಾರಾಯಣಪ್ಪ ಇತರರು ಇದ್ದರು. ದಿನೇಶ್‌ ಕೆ. ಶೆಟ್ಟಿ ಸ್ವಾಗತಿಸಿದರು. ಎ. ನಾಗರಾಜ್‌ ನಿರೂಪಿಸಿದರು. 

ವಾರಕ್ಕೆ 3 ಬಾರಿ ನೀರು ಕೊಡಿ…
ದಾವಣಗೆರೆಯಲ್ಲಿ ವಾರ, 10 ದಿನಕ್ಕೊಮ್ಮೆ ನೀರು  ಕೊಡಲಾಗುತ್ತಿದೆ. ತುಂಗಭದ್ರಾ ನದಿಯಲ್ಲಿ ನೀರಿದೆ. ವಾರಕ್ಕೆ 3 ದಿನವಾದರೂ ನೀರು ಕೊಡುವಂತಾಗಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಈಗ ಮಳೆಗಾಲದಲ್ಲೇ ಮಳೆ ಇಲ್ಲದಂತಾಗಿ ಬಿಸಿಲು ಹೆಚ್ಚಾಗಿದೆ. ಸತತ ಮೂರು ವರ್ಷ ಮಳೆ ಇಲ್ಲದೆ ರೈತರು ಸಾಕಷ್ಟು ಸುಸ್ತಾಗಿದ್ದಾರೆ. ಜಲಾಶಯಗಳು ಅರ್ಧದಷ್ಟಾದರೂ ತುಂಬಿದರೆ ಕುಡಿಯುವ ನೀರಿಗೆ ಅಷ್ಟೊಂದು ಸಮಸ್ಯೆಯಾಗಲಾರದು. ನಾವೆಲ್ಲರೂ ಮಳೆಗಾಗಿ ಪ್ರಾರ್ಥಿಸೋಣ ಎಂದು ಮನವಿ ಮಾಡಿದರು.

ಒಂದೇ ವೇದಿಕೆಯಲ್ಲಿ ಚರ್ಚಿಸೋಣ..
ದಾವಣಗೆರೆ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅತ್ಯುತ್ತಮ ಕೆಲಸ ಆಗುತ್ತಿವೆ. ಆದರೂ, ಬಿಜೆಪಿಯವರು ಏನೇನೋ ಹೇಳುತ್ತಿದ್ದಾರೆ. ಅವುಗಳಿಗೆಲ್ಲಾ ಉತ್ತರ ನೀಡಬೇಕಿದೆ. ಆದರೆ, ಇಲ್ಲಿ ಕೊಡುವುದಿಲ್ಲ. ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡುತ್ತೇನೆ. ಬಿಜೆಪಿಯವರು
ಮಾಧ್ಯಮದವರು ಒಳಗೊಂಡಂತೆ ಯಾರ ಕಣ್ಣಿಗಾದರೂ ಕಾಣುವಂತಹ ಕೆಲಸ ಮಾಡಿರುವುದನ್ನ ತೋರಿಸಲಿ. ಆ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ.
ಎಸ್‌.ಎಸ್‌. ಮಲ್ಲಿಕಾರ್ಜುನ್‌, ಜಿಲ್ಲಾ ಉಸ್ತುವಾರಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next