Advertisement

ಚರಂಡಿಯಿಲ್ಲದೇ ಮನೆಗೆ ನುಗ್ಗುವ ನೀರು, ಸರಿಯಾದ ರಸ್ತೆಯೂ ಇಲ್ಲ

03:00 AM Jun 22, 2018 | Team Udayavani |

ಕುಂದಾಪುರ: KSRTC ಬಸ್‌ ನಿಲ್ದಾಣ, ಚಿಕ್ಕಮ್ಮನ ದೇವಿ ದೇವಸ್ಥಾನ, ಶಾಲೆ, ಕಾಲೇಜು,  ಸ್ಮಶಾನ ಮೊದಲಾದ ತಾಣಗಳು ಇರುವುದು ಸಂಗಮ್‌ ವಾರ್ಡ್‌ನಲ್ಲಿ. 1,200ರಷ್ಟು ಮತದಾರರು ಈಗ ಇದ್ದು ಮುಂದಿನ ಚುನಾವಣೆಗೆ ಮತದಾರರ ಸಂಖ್ಯೆ 1,300 ಆಗಲಿದೆ. ಸುಮಾರು 350ರಷ್ಟು ಮನೆಗಳಿವೆ.

Advertisement

ಆತಂಕದಲ್ಲಿ ರಸ್ತೆ
ಚಿಕ್ಕಮ್ಮನ ದೇವಿ ದೇವಸ್ಥಾನಕ್ಕೆ ಹೋಗಲು ಕಾಂಕ್ರಿಟ್‌ ರಸ್ತೆಯಾಗಿದೆ. ಮಾರ್ಚ್‌ನಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ಮಾಡಿದ ಕಾಂಕ್ರಿಟ್‌ ರಸ್ತೆ ಈ ಮಳೆಗಾಲದಲ್ಲಿ ಅಪಾಯದಲ್ಲಿದೆ. ಏಕೆಂದರೆ ಮಣ್ಣು ಹಾಕಿ ಜಾಗ ಎತ್ತರಿಸಿ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗಿದೆ. ಮಣ್ಣು ಪ್ರತಿ ಮಳೆಗೆ ಕರಗಿ ಹೋಗುತ್ತಿದ್ದು ರಸ್ತೆಯ ಆಯುಷ್ಯ ನಿರ್ಧರಿಸುತ್ತಿದೆ. ರಸ್ತೆಯ ಎರಡೂ ಬದಿ ಸಮರ್ಪಕ ಚರಂಡಿಯೂ ಇಲ್ಲ.

ಕಂಬ ಕುಸಿತ ಭೀತಿ
ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿ ಜನಾರ್ದನ ಅವರ ಮನೆಯಿದೆ. ಅಲ್ಲಿ ಕಾಂಕ್ರಿಟ್‌ ರಸ್ತೆಯೂ ಅಪಾಯದಲ್ಲಿದೆ. ಪಕ್ಕದಲ್ಲಿರುವ ವಿದ್ಯುತ್‌ ಕಂಬದ ಬುಡದ ಮಣ್ಣು ಕರಗಿ ಹೋಗಿದ್ದು ಕಂಬ ಬೀಳುವ ಅಪಾಯವಿದೆ. ಅದೂ ಮನೆ ಮೇಲೆ!. ಜತೆಗೆ ಇವರ ಅಂಗಳ ಕೂಡಾ ಮಳೆ ನೀರಿಗೆ ಕರಗುತ್ತಿದೆ. ಕಾರಣ ಚರಂಡಿ ಇಲ್ಲದಿರುವುದು. ಯಾರಿಗೇಳ್ಳೋಣ ನಮ್‌ ಪ್ರಾಬ್ಲೆಮ್ಮು ಅನ್ನುತ್ತಾರೆ ಅವರು. 

ಮಳೆ ನೀರು ಮನೆಗೆ
ಹರಿಪ್ರಸಾದ್‌ ಹೋಟೆಲ್‌ ಎದುರು KSRTC ಬಸ್‌ ನಿಲ್ದಾಣ ಬಳಿಯ ಸರ್ವಿಸ್‌ ರಸ್ತೆಯಿಂದ ಬರುವ ನೀರೆಲ್ಲ ಶ್ರೀನಿವಾಸ್‌ ಅವರ ಮನೆಗೆ ಬರುತ್ತದೆ. ಸರ್ವಿಸ್‌ ರಸ್ತೆ ಕಾಮಗಾರಿ ಆಗಿದ್ದರೂ ಚರಂಡಿ ಆಗಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪರಿಣಾಮ ಈ ಭಾಗದ ಮನೆಗಳಿಗೆ ಎಲ್ಲ ಆಗುತ್ತಿದೆ. ಶ್ರೀನಿವಾಸ್‌ ಅವರ ಮನೆಯಂಗಳ ಮಳೆನೀರಿನಿಂದ ಆವೃತವಾಗುತ್ತದೆ. ಅಷ್ಟೇ ಅಲ್ಲ ಹಟ್ಟಿಯಲ್ಲಿ ನೀರು ನುಗ್ಗಿ ಮಳೆ ಬಂದಾಗ ಜಾನುವಾರು ಕಟ್ಟದಂತಾಗುತ್ತದೆ. ಹೊರಗಡೆ ಕಟ್ಟಬೇಕಾಗಿ ಬರುತ್ತದೆ. ಕಾರಂತ ರಸ್ತೆ, ಬಟ್ರಾಡಿ ರಸ್ತೆಗೆ ಕಾಂಕ್ರಿಟ್‌ ಆಗಿದ್ದು, ಅರೆಕಲ್‌ ತೋಡು ರಸ್ತೆಗೆ ಇಂಟರ್‌ಲಾಕ್‌ ಹಾಕಲಾಗಿದೆ. ಬಟ್ರಾಡಿ ರಸ್ತೆಗೆ 11 ಲಕ್ಷ ರೂ. ಮಂಜೂರಾಗಿದ್ದು ಕಾಂಕ್ರಿಟ್‌ ಕಾಮಗಾರಿ ಆಗಲಿದೆ.  ಸಂಗಮ್‌ ರಾಷೀóಯ ಹೆದ್ದಾರಿಯಿಂದ  ಚಿಕ್ಕಮ್ಮನ ದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆ ಜಂಕ್ಷನ್‌ನಲ್ಲಿಯೇ ತೀರಾ ನಾದುರಸ್ತಿಯಲ್ಲಿದೆ.

ಮಳೆಯ ನೀರು ವಾರಗಟ್ಟಲೆ ಸಂಗ್ರಹವಾಗಿರುತ್ತದೆ. ಕೆಸರ ನೀರ ಸಿಂಚನ ಇಲ್ಲಿ ಶಾಲಾ ಕಾಲೇಜಿಗೆ ಹೋಗುವ ಮಕ್ಕಳಿಗೆ ಸಾಮಾನ್ಯವಾಗಿದೆ. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಹಿಂದೂ ರುದ್ರಭೂಮಿಯ ಅಭಿವೃದ್ಧಿ ಮಾಡಲಾಗಿದೆ. ಇಂಟರ್‌ ಲಾಕ್‌, ಶೆಡ್‌, ಸಿಲಿಕಾನ್‌ ಬಾಕ್ಸ್‌ ಇತ್ಯಾದಿ ಹಾಕಿ ಸುಸಜ್ಜಿತ ಮಾಡಲಾಗಿದೆ. ಬಟ್ರಾಡಿ ದೇವರೆ ಕೆರೆಯನ್ನು 10 ಲಕ್ಷ ರೂ. ಶಾಸಕರ ನಿಧಿಯಲ್ಲಿ ದುರಸ್ತಿ ಮಾಡಲಾಗಿದೆ.

Advertisement

2.5 ಕೋ.ರೂ. ಕೆಲಸ ಆಗಿದೆ
ಜನ ನನ್ನನ್ನು ಎರಡು ಅವಧಿಗೆ ಆಯ್ಕೆ ಮಾಡಿದ್ದಾರೆ. ವಾರ್ಡ್‌ನಲ್ಲಿ ಸುಮಾರು 2.5 ಕೋ.ರೂ.ಗಳ ಕೆಲಸ ಆಗಿದೆ. ಈ ಸಲ ಅನುದಾನ ಕಡಿಮೆ. ಹಾಗಿದ್ದರೂ ಸುಮಾರು 60 ಶೇ.ದಷ್ಟು ಬೇಡಿಕೆ ಈಡೇರಿಸಲಾಗಿದೆ. ಇನ್ನೊಂದಷ್ಟು ಹೊಸ ಲೇಔಟ್‌ ಆದಲ್ಲಿ ರಸ್ತೆ ಕೆಲಸ ಆಗಬೇಕಿದೆ. ಪುರಸಭೆ ಅನುದಾನ ಮಾತ್ರವಲ್ಲ ಶಾಸಕರ ಅನುದಾನದಿಂದಲೂ ಈ ವಾರ್ಡ್‌ನಲ್ಲಿ ಕಾಮಗಾರಿ ಮಾಡಲಾಗಿದೆ.
– ವಿಠ್ಠಲ ಕುಂದರ್‌, ಸ್ಥಾಯಿ ಸಮಿತಿ ಅಧ್ಯಕ್ಷರು

ಚರಂಡಿಯೇ ಇಲ್ಲ
ಸಂಗಮ್‌ ಕ್ರಾಸ್‌ ನಿಂದ ದೇವಸ್ಥಾನವರೆಗೆ ಕಾಣಿಸುತ್ತದೆ ನೋಡಿ. ಚರಂಡಿಯೇ ಇಲ್ಲ. ಎಷ್ಟು ಹೇಳಿದರೂ ಸ್ಪಂದನೆ ಇಲ್ಲ. ಅಂಗಡಿ ಅಕ್ಕಿ ಬಂಗುಡೆ ಮೀನು ಎಂಬಂತೆ  ಎಲ್ಲರೂ ಬರುವುದು ಚುನಾವನೆ ಬಂದಾಗ ಮಾತ್ರ.
– ಪುರುಷೋತ್ತಮ್‌, ಸಂಗಮ್‌ ವಾರ್ಡ್‌ ನಿವಾಸಿ

ಮನೆಯ ಅಂಗಳದಲ್ಲಿ ನೀರು
ಮನೆ ಮೆಟ್ಟಿಲುವರೆಗೆ ಮಳೆ ನೀರು ಬರುತ್ತದೆ. ರಾ.ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಗೆ ನಮಗೆ ಶಿಕ್ಷೆ. ಸರ್ವಿಸ್‌ ರಸ್ತೆಗೆ ಚರಂಡಿಯೇ ಇಲ್ಲ. ಎಲ್ಲ ನೀರು ನಮ್ಮ ಮನೆಯಂಗಳ, ಹಟ್ಟಿಯಲ್ಲಿ. 
– ಗೀತಾ, ಸಂಗಮ್‌ ವಾರ್ಡ್‌ ನಿವಾಸಿ 

ಅಂಗಳ ಅಪಾಯದಲ್ಲಿ
ಕಾಂಕ್ರಿಟ್‌ ರಸ್ತೆಗೆ ಚರಂಡಿ ಇಲ್ಲ. ನಮ್ಮ ಮನೆ ಸನಿಹದ ಕರೆಂಟ್‌ ಕಂಬ ಬೀಳುವ ಆತಂಕ ಇದೆ. ಮನೆಯಂಗಳದ ಅಡಿಯ ಮಣ್ಣು ಸವೆತ ಉಂಟಾಗಿದೆ. ತುರ್ತು ಸ್ಪಂದನೆ ದೊರೆಯದಿದ್ದರೆ ಅನಾಹುತವಾಗಬಹುದು. 
– ದಯಾನಂದ್‌, ಚಿಕ್ಕಮ್ಮನ ದೇವಿ ದೇವಸ್ಥಾನ ಬಳಿ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next