Advertisement

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

03:23 PM Dec 19, 2024 | Team Udayavani |

ಕಾಪು: ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಗ್ರಾಹಕರು 1912ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ. 24×7 ಮಾದರಿಯಲ್ಲಿ ಗ್ರಾಹಕರ ಸಮಸ್ಯೆಗಳಿಗೆ ಸ್ಪಂಧಿಸಲು ಮೆಸ್ಕಾಂ ಸಿಬಂದಿ ತಂಡ ಸದಾ ಸಿದ್ಧವಿದೆ ಎಂದು ಉಡುಪಿ ವಿಭಾಗದ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ದಿನೇಶ್‌ ಉಪಾಧ್ಯಾಯ ಹೇಳಿದರು.

Advertisement

ಕಾಪು ಮೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಮೆಸ್ಕಾಂ ನಡೆಸುವ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಭಾಗವಹಿಸುವುದು ಕಡಿಮೆಯಾಗುತ್ತಿದೆ. ಜನ ಸಂಪರ್ಕ ಸಭೆಯನ್ನು ಕೇವಲ ಕಾಟಾಚಾರಕ್ಕೆ ನಡೆಸದೇ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸುವಂತೆ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಹಕ ಶ್ರೀನಿವಾಸ ಪೂಜಾರಿ, ಗುತ್ತಿಗೆದಾರ ಮುಶ್ತಾಕ್‌ ಸಾಹೇಬ್‌ ಒತ್ತಾಯಿಸಿದರು.

ಹಿರಿಯ ಅಧಿಕಾರಿ ದಿನೇಶ್‌ ಉಪಾಧ್ಯಾಯ ಅವರು, ಪಿಎಂ ಸೂರ್ಯ (ಸೋಲಾರ್‌ ಬೆಳಕು) ಯೋಜನೆಯನ್ನು ಗ್ರಾಹಕರಿಗೆ ತಲುಪಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಲ್ಲಿ ಮನವಿ ಮಾಡಿದರು. ಗುತ್ತಿಗೆದಾರ ಅನ್ವರ್‌ ಅಲಿ ಮಾತನಾಡಿ, ಈ ಯೋಜನೆಯಿಂದ ಗ್ರಾಹಕರಿಗೆ ಅನುಕೂಲವಿದ್ದರೂ, ಅದರಿಂದ ಹೆಚ್ಚಿನ ಲಾಭವಿಲ್ಲ. ನಮ್ಮದೇ ಹಣವನ್ನು ನಮಗೆ ನೀಡಿದಂತಾಗುತ್ತದೆ. ಇದರಿಂದ ಇಲಾಖೆ ಮತ್ತು ಸರಕಾರಕ್ಕೆ ಲಾಭವಿದೆಯೇ ಹೊರತು ಗ್ರಾಹಕರಿಗೆ ಯಾವುದೇ ಲಾಭವಿಲ್ಲ. ಈ ಬಗ್ಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ಆಗ್ರಹಿಸಿದರು.

ಗ್ರಾಹಕ ಶ್ರೀನಿವಾಸ ಪೂಜಾರಿ ಕಟಪಾಡಿ ಅವರು, ಕಟಪಾಡಿ ಮೂಡಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿರುವ ಲೇಔಟ್‌ವೊಂದಕ್ಕೆ ತೆರಳುವ ದಾರಿಯಲ್ಲಿ ಕತ್ತಲಿದೆ. ಈ ಪ್ರದೇಶವು ಹೆಬ್ಟಾವು ಸಹಿತ ವಿಷಜಂತುಗಳು ಮತ್ತು ಕಾಡು ಪ್ರಾಣಿಗಳ ವಾಸಸ್ಥಾನದಂತಾಗಿದೆ ಎಂದು ದೂರಿದರು. ಅಧಿಕಾರಿಗಳು ಪ್ರತಿಕ್ರಿಯಿಸಿ, ಇದು ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ ವಿಚಾರವಾಗಿದ್ದು ಗ್ರಾಮ ಪಂಚಾಯತ್‌ಗೆ ಅರ್ಜಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದರು. ಮೆಸ್ಕಾಂ ಉಡುಪಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಸನ್ನ ಕುಮಾರ್‌, ಕಾಪು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅರವಿಂದ ಕೆ.ಎಸ್‌., ಸಹಾಯಕ ಎಂಜಿನಿಯರ್‌ ಆನಂದ್‌ ಎಸ್‌., ಕಾಪು, ಕಟಪಾಡಿ, ಶಿರ್ವ, ಪಡುಬಿದ್ರಿ, ಮುದರಂಗಡಿ ಶಾಖಾಧಿಕಾರಿಗಳು ಮತ್ತು ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ಗ್ರಾಹಕರ ನಿರಾಸಕ್ತಿ : ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚೆ
ಗ್ರಾಹಕರ ಅನುಪಸ್ಥಿತಿಯಲ್ಲಿ ನಡೆದ ಜನಸಂಪರ್ಕ ಸಭೆಯು ಗುತ್ತಿಗೆದಾರರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸೀಮಿತವಾಗಿ ನಡೆದು, ಬಳಿಕ ಮುಕ್ತಾಯ ಕ‌ಂಡಿತು. ಮುಂದಿನ ದಿನಗಳಲ್ಲಿ ಗ್ರಾಹಕರನ್ನು ಸೇರಿಸಿಕೊಂಡು ಸಭೆ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಗುತ್ತಿಗೆದಾರರಾದ ಅನ್ವರ್‌ ಅಲಿ, ವಿಜಯ್‌ ಮಾಬಿಯಾನ್‌, ನಾಗರಾಜ ಭಟ್‌ , ಮುಷ್ತಾಕ್‌ ಸಾಹೇಬ್‌ ಅವರು ವಿವಿಧ ಸಮಸ್ಯೆಗಳನ್ನು ಸಭೆಯ ಮುಂದಿರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next