ಬೆಂಗಳೂರು: ರಾಜ್ಯದಲ್ಲಿರುವ ಹಳೆಯ ಕೈಗಾರಿಕಾ ವಲಯಗಳನ್ನು ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಶೀಘ್ರದಲ್ಲೇ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಲಘು ಉದ್ಯೋಗ ಭಾರತಿ ಸಂಸ್ಥೆಯಿಂದ ನಗರದಲ್ಲಿ ಶುಕ್ರವಾರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿನ ಸಾಧಕರಿಗೆ ನಾನಾ ವಿಧದ ಉದ್ಯಮ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ದೇಶದ ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ರಾಜ್ಯದಲ್ಲಿರುವ ಎಲ್ಲ ಹಳೆಯ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕೆಗಳಿಂದ ಸರಕಾರಕ್ಕೆ ಬರುವ ತೆರಿಗೆ ಪ್ರಮಾಣದ ಶೇ.40ರಷ್ಟು ಭಾಗವನ್ನು ಆಯಾ ಕೈಗಾರಿಕಾ ವಲಯಗಳ ಸಂಘಕ್ಕೆ ನೀಡಲಾಗುವುದು. ಆ ಹಣದಿಂದಲೇ ಈ ಕೈಗಾರಿಕಾ ವಲಯಗಳಿಗೆ ಮೂಲಸೌಕರ್ಯ ಹೆಚ್ಚಿಸುವುದು ಸಹಿತ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಇದರಿಂದ ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಸರಕಾರದ ಆರ್ಥಿಕ ನೆರವು ನಿರೀಕ್ಷಿಸುವ ಅಗತ್ಯವಿರುವುದಿಲ್ಲ. ಈ ರೀತಿ ಹಳೆ ಕೈಗಾರಿಕಾ ವಲಯ ಅಭಿವೃದ್ಧಿಪಡಿಸುವುದಕ್ಕೆ ಮುಖ್ಯಮಂತ್ರಿಗಳು ಕೂಡ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ಇಂಧನ ಸಚಿವ ಸುನಿಲ್ ಕುಮಾರ್ ಮಾತನಾಡಿ, ಪ್ರಧಾನಮಂತ್ರಿಗಳ ಆತ್ಮನಿರ್ಭರ ಪರಿಕಲ್ಪನೆಯಡಿ ಗ್ರಾಮೀಣ ಭಾಗದಲ್ಲಿರುವ ಉದ್ದಿಮೆಗಳನ್ನು ಎಲ್ಲ ಹಂತಗಳಲ್ಲಿಯೂ ಉತ್ತೇಜಿಸಲಾಗುತ್ತಿದೆ. “ಉದ್ಯಮಿಯಾಗು-ಉದ್ಯೋಗ ನೀಡು’ ಘೋಷಣೆಯಡಿ ನಮ್ಮ ರಾಜ್ಯದಲ್ಲಿ ಹೆಚ್ಚೆಚ್ಚು ಉದ್ದಿಮೆ ಸ್ಥಾಪನೆಯಾಗಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಬೇರೆ ದೇಶಗಳಂತೆ ನಮ್ಮಲ್ಲಿಯೂ ಉದ್ಯಮ ಬೆಳೆಸುವುದಕ್ಕೆ ಎಲ್ಲರೂ ಕೈಜೋಡಿಸಬೇಕು. ರಾಜ್ಯದಲ್ಲೂ ಉದ್ಯಮ ಸ್ಥಾಪನೆಗೆ ವಿದ್ಯುತ್ ಇಲಾಖೆಯಿಂದ ಎದುರಾಗುತ್ತಿರುವ ಎಲ್ಲ ರೀತಿಯ ಅಡೆ-ತಡೆಗಳ ನಿವಾರಣೆಗೆ ಸರಕಾರದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ
ಸಣ್ಣ ಮತ್ತು ಮಧ್ಯಮ ವಲಯದಲ್ಲಿ ಉದ್ಯಮ ಸ್ಥಾಪಿಸಿ ಯಶಸ್ಸು ಸಾಧಿಸಿರುವ ಶಿವಮೊಗ್ಗದ ಶಾಂತಲಾ ಗ್ರೂಪ್ ಆಫ್ ಕಂಪೆನಿಗಳ ಅಧ್ಯಕ್ಷ ರುದ್ರೇಗೌಡ, ಗುಲ್ಬರ್ಗದ ಬಿ.ಜಿ. ಪಾಟೀಲ್ ಗ್ರೂಪ್ ಆಫ್ ಕಂಪೆನಿಗಳ ಅಧ್ಯಕ್ಷ ಬಿ.ಜಿ. ಪಾಟೀಲ್, ಎಸಿಇ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್‌ನ ಎಂಡಿ ಪಿ. ರಾಮದಾಸ್ ಅವರಿಗೆ ಜೀವಮಾನ ಸಾಧನೆ, ಮಹಿಳಾ ಸಾಧಕರಾದ ನೀರಜಾಕ್ಷಿ ಕೆ. ಸುಧಾರತಿ ಸಹಿತ 23 ಉದ್ಯಮಿಗಳಿಗೆ ಲಘು ಉದ್ಯೋಗ ಭಾರತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.