Advertisement

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

02:18 AM Dec 31, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಈಚೆಗೆ ನಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಸಿ.ಟಿ.ರವಿ ಅವರ ನಡುವಿನ ವಾಗ್ವಾದದ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಅಂತ ಸಭಾಪತಿಗಳು ಕೈಚೆಲ್ಲುವ ಬದಲಿಗೆ ತಾವೇ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಮನವಿ ಮಾಡಿದರು.

Advertisement

ಸಭಾಪತಿ ಹುದ್ದೆ  ಸಾಂವಿಧಾನಕವಾದದ್ದು. ಕಲಾಪ ಮುಗಿದ ಅನಂತರವೂ ಸದನದ ಒಳಗೆ ಏನಾದರೂ ಘಟನೆ ನಡೆದರೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ. ಈ ಘಟನೆ ಕಲಾಪದ ವ್ಯಾಪ್ತಿಗೆ ಬರುವುದಿಲ್ಲ ಎಂದು ತಪ್ಪಿಸಿಕೊಳ್ಳುವಂತಿಲ್ಲ. ಈ ಪ್ರಕರಣವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಸಂವಿಧಾನದ ಹಾಗೂ ಕಾನೂನಿನ ವ್ಯಾಪ್ತಿಯ ಒಳಗೆ ಕೆಲಸ ಮಾಡಬೇಕು. ಈ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ನೀಡಬಹುದು ಅಥವಾ ಇನ್ನೊಂದು ಉಪಸಮಿತಿ ರಚನೆ ಮಾಡಿಯೂ ತನಿಖೆಗೆ ನೀಡಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಘಟನೆ ನಡೆದಿರುವುದು ಸತ್ಯ. ಆದರೆ ಏನು ನಡೆದಿದೆ ಎನ್ನುವುದನ್ನು ಸಭಾಧ್ಯಕ್ಷರು ಮಾತ್ರ ತನಿಖೆಗೆ ಆದೇಶಿಸಿ ಸತ್ಯ ಹೊರಗೆ ಬರುವಂತೆ ಮಾಡಬಹುದು. ಸಿಐಡಿ ತನಿಖೆ ಸೇರಿದಂತೆ ಯಾರಿಗೆ ತನಿಖೆಗೆ ನೀಡಿದರೂ ಅವರು ವಿಧಾನಸಭೆಗೆ ಪ್ರವೇಶ ಪಡೆಯಬೇಕು ಎಂದರೆ ಸ್ಪೀಕರ್‌ ಅನುಮತಿ ಪಡೆಯಬೇಕು. ಅದರ ಬದಲು ಇವರೇ ತನಿಖೆ ನಡೆಸಿದರೆ ಉತ್ತಮವಲ್ಲವೇ? ಈ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ನೀಡಬಹುದು ಅಥವಾ ಇನ್ನೊಂದು ಉಪಸಮಿತಿ ರಚನೆ ಮಾಡಿಯೂ ತನಿಖೆಗೆ ನೀಡಬಹುದು ಎಂದು ಸಲಹೆ ಮಾಡಿದರು.

ಈ ಘಟನೆ ನಡೆಯುವಾಗ ಯಾರ್ಯಾರು ಇದ್ದರು ಅವರನ್ನೆಲ್ಲ ಕರೆಸಿ ಮಾಧ್ಯಮದವರಿಂದ ವಿಡಿಯೋ ಪಡೆದು ಅದನ್ನು ಎಫ್ಎಸ್‌ಎಲ್‌ಗೆ ನೀಡಿ ತನಿಖೆಗೆ ಒಳಪಡಿಸಬಹುದಿತ್ತು. ರಾಜೀ-ಸಂಧಾನ ಮಾಡುವ ವಿವೇಚನೆ ಸಭಾಪತಿಗಳಿಗೆ ಬಿಟ್ಟಿದ್ದು. ಅವರು ಸಂಬಂಧಪಟ್ಟಿಲ್ಲ ಎಂದು ಹೇಳದರೆ ತನಿಖೆಗೆ ಆದೇಶಿಸಬೇಕು. ಸಭಾಪತಿ ಅವರಿಗೆ ತೀರ್ಮಾನ ಮಾಡಲು ತೊಂದರೆ ಆಗುತ್ತದೆ ಎಂದಾದರೆ ಸರ್ಕಾರದ ನೆರವು ಪಡೆಯಲಿ. ಇದು ವಿಧಾನ ಪರಿಷತ್ತಿನ ವ್ಯಾಪ್ತಿಯಲ್ಲಿ ನಡೆದ ಘಟನೆಯಾದ ಕಾರಣಕ್ಕೆ ತನಿಖೆಗೆ ಆದೇಶಿಸುವ ಅಧಿಕಾರ ಸಭಾಪತಿಗಳಿಗೆ ಇದೆ’ ಎಂದು ಹೇಳಿದರು.

ನಾನು ಡಿ.26 ರಂದು ಸಭಾಪತಿಗಳ ಕಾರ್ಯದರ್ಶಿ ಅವರಿಗೆ ಸಿ.ಟಿ. ರವಿ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದೇನೆ. ಸಿ.ಟಿ. ರವಿ ನಿಂದನಾತ್ಮಕ ಪದ ಪ್ರಯೋಗ ಮಾಡಿದಾಗ ಕಲಾಪ ಮುಗಿದಿತ್ತೆ, ಹೊರತು ಸದನದಲ್ಲಿ ಎಲ್ಲರೂ ಹಾಜರಿದ್ದರು. ಮಾರ್ಷಲ್‌ಗ‌ಳು, ಸಿಬ್ಬಂದಿ, ಎಲ್ಲ ಪಕ್ಷಗಳ ಪ್ರತಿನಿಧಿಗಳು, ಮಾಧ್ಯಮದವರೂ ಈ ಘಟನೆಯನ್ನು ಚಿತ್ರೀಕರಣ ಮಾಡುತ್ತಾ ಇದ್ದರು. ಇದನ್ನು ಹೇಗೆ ಸಭಾಪತಿಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲು ಸಾಧ್ಯ’ ಎಂದು ಕೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next