Advertisement

Mangaluru: ನೆಲೆ ಕಳೆದುಕೊಳ್ಳುವ ಆತಂಕದಲ್ಲಿ ಶ್ರೀನಿವಾಸ ಮಲ್ಯರ ಪ್ರತಿಮೆ

03:17 PM Dec 31, 2024 | Team Udayavani |

ಮಹಾನಗರ: ದ.ಕ. ಜಿಲ್ಲೆಯ ನಿರ್ಮಾತೃ ಹಾಗೂ ಜಿಲ್ಲೆಯ ಮೊದಲ ಸಂಸದ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಪ್ರತಿಮೆಯೊಂದು ಪದುವಾ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿದ್ದು, ಅದಕ್ಕೆ ಇದೀಗ ಕಂಟಕ ಎದುರಾಗಿದೆ. ನಂತೂರು ಕೆ.ಪಿ.ಟಿ. ನಡುವೆ ಹೆದ್ದಾರಿ ಕಾಮಗಾರಿ ನಡೆಯುವ ವೇಳೆಯಲ್ಲಿ ಪದುವಾ ಸಮೀಪವಿರುವ ಶ್ರೀನಿವಾಸ್‌ ಮಲ್ಯ ಅವರ ಪ್ರತಿಮೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತಿಮೆ ತೆರವುಗೊಳಿಸಲು ಎನ್‌ಎಚ್‌ಎಐ ಅಧಿಕಾರಿಗಳು ಮುಂದಾಗಿದ್ದು, ಅದನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಬೇಕು ಎಂಬ ಕೂಗು ಜಿಲ್ಲೆಯ ಜನತೆಯಿಂದ ಕೇಳಿಬಂದಿದೆ.

Advertisement

ಪ್ರತಿಮೆ ಸ್ಥಳಾಂತರ ಅನಿವಾರ್ಯ ಎಂದು ಎನ್‌ಎಚ್‌ಎಐ ಅ ಧಿಕಾರಿಗಳು ಹೇಳಿದ್ದಾರೆ. ಆದರೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಉಲ್ಲೇಖವಿಲ್ಲ. ಪರ್ಯಾಯ ಜಾಗ ಗುರುತಿಸಿದ ಬಳಿಕವೇ ಪ್ರತಿಮೆ ಸ್ಥಳಾಂತರ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತರಾತುರಿಯಲ್ಲಿ ಪ್ರತಿಮೆ ತೆರವುಗೊಳಿಸದೆ ಪಾಲಿಕೆಯೊಂದಿಗೆ ಚರ್ಚಿಸಿ ಸೂಕ್ತ ಜಾಗ ಗುರುತಿಸಿ ಸ್ಥಳಾಂತರ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಅಭಿವೃದ್ಧಿಯ ಹರಿಕಾರ
ಉಳ್ಳಾಲ ಶ್ರೀನಿವಾಸ್‌ ಮಲ್ಯ ಅವರು ಜಿಲ್ಲೆಯ ಮೊದಲ ಸಂಸದರಾಗಿ ಆಯ್ಕೆಯಾದ ಬಳಿಕ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಿದರು. ಅವರ ಅವಧಿಯಲ್ಲಿ ನವ ಮಂಗಳೂರು ಬಂದರು ಮಂಡಳಿ ಪಣಂಬೂರು, ಮಂಗಳೂರು-ಬೆಂಗಳೂರು ರೈಲು ಮಾರ್ಗ, ಕೆ.ಆರ್‌.ಇ.ಸಿ(ಎನ್‌ಐಟಿಕೆ), ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣ, ಆಕಾಶವಾಣಿ ಕೇಂದ್ರ, ಉಳ್ಳಾಲ ಸೇತುವೆ, ಸರ್ಕ್ನೂಟ್‌ ಹೌಸ್‌, ಮಂಗಳೂರು ಕುದ್ಮುಲ್‌ ರಂಗರಾವ್‌ ಪುರಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದವು. ಆ ಮೂಲಕ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಿದವರಾಗಿದ್ದಾರೆ.

ಪಂಪ್‌ವೆಲ್‌ ಕಲಶದಂತಾಗದಿರಲಿ
ಮೇಲ್ಸೇತುವೆ ಕಾಮಗಾರಿ ಸಂದರ್ಭದಲ್ಲಿ ಪಂಪ್‌ವೆಲ್‌ನ ಮಹಾವೀರ ವೃತ್ತದಲ್ಲಿ ಜನಾಕರ್ಷಕವಾಗಿದ್ದ ಜೈನ ಸಮುದಾಯಕ್ಕೆ ಸೇರಿದ ಕಲಶವನ್ನು ತೆರವುಗೊಳಿಸಲಾಗಿತ್ತು. ಆದರೆ, ಆದಕ್ಕೆ ಸೂಕ್ತ ಪರ್ಯಾಯ ಜಾಗ ಗುರುತಿಸದೆ, ಗೌರವಯುತವಾಗಿ ಇರಿಸದೆ ಮೂಲೆಗುಂಪು ಮಾಡಲಾಗಿದೆ. ಪ್ರಸ್ತುತ ಕಾಟಚಾರಕ್ಕೆ ಇರಿಸಲಾಗಿದ್ದು, ಶಿಥಿಲಗೊಂಡಿದೆ. ಅದೇ ರೀತಿ ಶ್ರೀನಿವಾಸ್‌ ಮಲ್ಯರ ಪ್ರತಿಮೆಯನ್ನು ಬದಿಗೆ ಸರಿಸುವ ಸಾಧ್ಯತೆ ಇದ್ದು ಸೂಕ್ತ ರೀತಿಯಲ್ಲಿ ಸ್ಥಳಾಂತರ ಮಾಡಬೇಕಾಗಿದೆ. ಕಳಶದಂತೆ ಶ್ರೀನಿವಾಸ ಮಲ್ಯರ ಪ್ರತಿಮೆಯೂ ಕೂಡ ಆಗದಿರಲಿ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಇಲ್ಲ
ಅಭಿವೃದ್ಧಿ ಕೆಲಸಗಳು ಅಗತ್ಯವಾಗಿದ್ದು, ಅವುಗಳಿಗೆ ಯಾರೂ ವಿರೋಧಿಸುವುದಿಲ್ಲ. ಆದರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಉಳ್ಳಾಲ ಶ್ರೀನಿವಾಸ್‌ ಮಲ್ಯ ಅವರ ಪ್ರತಿಮೆಯನ್ನು ಸೂಕ್ತ ಜಾಗಕ್ಕೆ ಸ್ಥಳಾಂತರ ಮಾಡಬೇಕು. ಪಾಲಿಕೆ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.
-ಜೆ.ಆರ್‌. ಲೋಬೊ, ಮಾಜಿ ಶಾಸಕರು

Advertisement

ಪಾದುವಾ ಬಳಿಯ ಶ್ರೀನಿವಾಸ್‌ ಮಲ್ಯ ಅವರ ಪ್ರತಿಮೆಯ ಬಗ್ಗೆ ಪಾಲಿಕೆಗೆ ಮನವಿಗಳು ಬಂದಿವೆ. ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಕಾಮಗಾರಿ ನಡೆಯುವ ವೇಳೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅಥವಾ ಪ್ರತಿಮೆ ತೆರವುಗೊಳಿಸಿ ಕಾಮಗಾರಿ ನಡೆಸಲು ತಿಳಿಸಲಾಗಿದೆ. ಬಳಿಕ ಸೂಕ್ತ ರೀತಿಯಲ್ಲಿ ಪಾರ್ಕ್‌ ನಿರ್ಮಿಸಿ ಪ್ರತಿಮೆ ಇಡುವುದಕ್ಕೆ ಕ್ರಮ ವಹಿಸುತ್ತೇವೆ.
-ಆನಂದ್‌ ಸಿ.ಎಲ್‌.,ಪಾಲಿಕೆ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next