ಹೊಸದುರ್ಗ(ಚಿತ್ರದುರ್ಗ): ಕಂಟ್ರಾಕ್ಟರ್ ಸಚಿನ್ ಪಾಂಚಾಳ್ ಆತ್ಮಹತ್ಯೆ ಕೇಸ್ ವಿಚಾರಕ್ಕೂ ಪ್ರಿಯಾಂಕ ಖರ್ಗೆಗೂ ಯಾವುದೇ ಸಂಬಂಧ ಇಲ್ಲ, ಬಿಜೆಪಿಯವರು ಹಿಟ್ ಅಂಡ್ ರನ್ ಮಾಡುತ್ತಾರೆ,ಬಿಜೆಪಿಗರು ಹೇಳುವ ಮಾತಿಗೆ ಮೌಲ್ಯವಿಲ್ಲ” ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸೋಮವಾರ(ಡಿ30)ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್ ”ಡಿ.ಕೆ. ರವಿ ಕೇಸ್ ಹಾಗೂ ಡಿವೈಎಸ್ ಪಿ ಗಣಪತಿ ಕೇಸ್ ನಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ದರು. ಅಸೆಂಬ್ಲಿಯಲ್ಲಿ ಕುಳಿತು, ಮಲಗಿ ಧರಣಿ ಮಾಡಿದ್ದರು.ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ಸಲ್ಲಿಸಿದ್ದೆ.ಸಿಐಡಿ, ಸಿಬಿಐ ನವರು ಕೂಡಾ ನನ್ನ ಮೇಲೆ ಬಿ.ರಿಪೋರ್ಟ್ ಕೊಟ್ಟಿದ್ದರು.ಸುಪ್ರೀಂ ಕೋರ್ಟ್ ನಲ್ಲಿ ಕೂಡಾ ನನ್ನ ಪರ ತೀರ್ಪು ಬಂತು.ಅವರು ಯಾರಾದರೂ ಮತ್ತೆ ಆ ವಿಷಯದಲ್ಲಿ ಧ್ವನಿ ಎತ್ತಿದರಾ” ಎಂದು ಪ್ರಶ್ನಿಸಿದರು.
”ಸಚಿವ ಸಂಪುಟ ವಿಚಾರದಲ್ಲಿ ಸಿಎಂ, ಡಿಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ” ಎಂದು ಜಾರ್ಜ್ ಹೇಳಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಜಗದೀಶ್ ಶೆಟ್ಟರ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ” ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಶೆಟ್ಟರ್, ದಾಖಲೆ ಕೊಟ್ಟರೆ ತನಿಖೆ ಮಾಡುತ್ತೇವೆ.ಯಾರು ತಪ್ಪಿತಸ್ಥರು ಇದ್ದಾರೆ ಅವರ ವಿರುದ್ದ ಕ್ರಮ ವಹಿಸುತ್ತೇವೆ” ಎಂದರು.
”ಸಂವಿಧಾನ ಹಿಡಿದು ಓಡಾಡುವುದು ದೇಶದ್ರೋಹದ ಕೆಲಸ” ಎಂಬ ಕೇಂದ್ರ ಪ್ರಹ್ಲಾದ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ”ಸಂವಿಧಾನದ ಮೇಲೆ ನಮ್ಮ ದೇಶ ನಡೆಯುತ್ತಿದೆ.ಅದೇ ಸಂವಿಧಾನ ಬೇಡ ಎಂದು ಹೇಳಿದ್ದವರು ಯಾರು” ಎಂದು ಪ್ರಶ್ನಿಸಿದರು.