ಹೊಸದಿಲ್ಲಿ: ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಬೇಕಿರುವ ಭಾರತೀಯ ವನಿತಾ ರಿಲೇ ತಂಡಕ್ಕೆ ಉದ್ದೀಪನ ಕಳಂಕ ತಟ್ಟಿದೆ.
ತಂಡದ ಓರ್ವ ಆಟಗಾರ್ತಿಯ ಡೋಪ್ ಫಲಿತಾಂಶ ಪಾಸಿಟಿವ್ ಬಂದಿದ್ದು, ಇವರು ಕೂಟದಿಂದ ಹೊರಗುಳಿಯಬೇಕಿದೆ. ಆದರೆ ಇವರ ಹೆಸರನ್ನು ಬಹಿರಂಗಗೊಳಿಸಲಾಗಿಲ್ಲ.ಈ ವಿದ್ಯಮಾನದ ಬಳಿಕ ವನಿತಾ ರಿಲೇ ತಂಡದಲ್ಲಿ ಕೇವಲ ನಾಲ್ವರಷ್ಟೇ ಉಳಿದಂತಾಗಿದೆ.
ಸ್ಪರ್ಧೆಯ ವೇಳೆ ಯಾರಾದರೂ ಗಾಯಾಳಾದರೆ ಬದಲಿ ರನ್ನರ್ ಇರುವುದಿಲ್ಲ. ಇದು ಭಾರತಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ.
ಆರಂಭದಲ್ಲಿ ಹೆಸರಿಸಲಾದ 37 ಸದಸ್ಯರ ಆ್ಯತ್ಲೆಟಿಕ್ಸ್ ತಂಡದಲ್ಲಿ ದ್ಯುತಿ ಚಂದ್, ಹಿಮಾ ದಾಸ್, ಸ್ರಾಬನಿ ನಂದಾ, ಎನ್.ಎಸ್. ಸಿಮಿ, ಎಸ್. ಧನಲಕ್ಷ್ಮೀ ಮತ್ತು ಎಂ.ವಿ ಜಿಲಾ° ಹೆಸರಿತ್ತು. ಇವರೆಲ್ಲರೂ ರಿಲೇ ತಂಡದ ಸದಸ್ಯರಾಗಿದ್ದರು. ಕೊನೆಯ ಹಂತದಲ್ಲಿ ಜಿಲಾ° ಹೊರಗುಳಿದರು. ಇವರನ್ನು ಧನಲಕ್ಷ್ಮೀ ಸ್ಥಾನಕ್ಕೆ ಆರಿಸಲಾಗಿತ್ತು. ಧನಲಕ್ಷ್ಮೀ ಕೂಡ ಡೋಪ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. “ನಾಡಾ’ ಅಧಿಕಾರಿಗಳು ಕ್ರೀಡಾಪಟುಗಳ ಸ್ಯಾಂಪಲ್ ಪರೀಕ್ಷಿಸಿದ್ದರು.
ಇದಕ್ಕೂ ಮೊದಲು ಪ್ಯಾರಾ ಡಿಸ್ಕಸ್ ಎಸೆತಗಾರ ಅನೀಶ್ ಕುಮಾರ್ ಮತ್ತು ಪ್ಯಾರಾ ಪವರ್‌ಲಿಫ್ಟರ್ ಗೀತಾ ಕೂಡ ಉದ್ದೀಪನ ಕಳಂಕಕ್ಕೆ ಸಿಲುಕಿದ್ದರು.