ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ಸೋಮ ವಾರ ನಡೆಯುವ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವ ಳಿಯ ಗ್ರೂಪ್ “ಸಿ’ಯ 2ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಪುದುಚೇರಿಯ ಸವಾಲು ಸ್ವೀಕರಿಸಲಿದೆ.
ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ವಿರುದ್ಧ ಗೆದ್ದ ಉತ್ಸಾಹದಲ್ಲಿ ಮಾಯಾಂಕ್ ಅಗರ್ವಾಲ್ ಪಡೆಯಿದೆ. ಅಹ್ಮದಾಬಾದ್‌ನ ಇದೇ ಮೈದಾನದಲ್ಲಿ ಶನಿವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬಯಿ ತಂಡವನ್ನು
7 ವಿಕೆಟ್‌ಗಳಿಂದ ಕೆಡವಿತ್ತು. ಶ್ರೇಯಸ್ ಶತಕದೊಂದಿಗೆ ಮುಂಬಯಿ 382 ರನ್ ಗಳಿಸಿತ್ತಾದರೂ ಅದನ್ನು ಕರ್ನಾಟಕ ತಂಡ 47ನೇ ಓವರ್‌ನಲ್ಲೇ ಚೇಸ್ ಮಾಡಿ ಬೀಗಿತ್ತು. ರಾಜ್ಯ ತಂಡದ ಪರ ಕೃಷ್ಣನ್ ಶ್ರೀಜಿತ್ 150 ರನ್ ಸಿಡಿಸಿ ಮಿಂಚಿದ್ದರು.
ಆರಂಭಿಕ ಪಂದ್ಯದಲ್ಲಿ ಅರುಣ್ ಕಾರ್ತಿಕ್ ನಾಯಕತ್ವದ ಪುದುಚೇರಿ ಕೂಡ ಗೆದ್ದಿತ್ತು. ಅದು ಸೌರಾಷ್ಟ್ರ ವಿರುದ್ಧ 5 ವಿಕೆಟ್ ಜಯ ಸಾಧಿಸಿತ್ತು. ಕರ್ನಾಟಕ ತಂಡ ಮೊದಲ ಪಂದ್ಯ ಗೆದ್ದು, 4 ಅಂಕ ಗಳಿಸಿ ಗ್ರೂಪ್ “ಸಿ’ಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಪುದುಚೇರಿ ಕೂಡ 4 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ. ಈ ಗುಂಪಿನಲ್ಲಿ ಪಂಜಾಬ್ ಮತ್ತು ಹೈದರಾಬಾದ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.