ಬ್ರಿಸ್ಬೇನ್: ಬಾರ್ಡರ್ ಗಾವಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಮೂರನೆ ಪಂದ್ಯ ಡ್ರಾ ಆಗಿದೆ. ಸರಣಿ ಇದೀಗ 1-1ರಿಂದ ಸಮಬಲವಾಗಿದೆ. ರೋಹಿತ್ ಬಳಗವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಬೇಕಾದರೆ ಉಳಿದಿರುವ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಟೀಂ ಇಂಡಿಯಾಗೆ ಬ್ಯಾಟಿಂಗ್ ನಂತೆ ಬೌಲಿಂಗ್ ವಿಭಾಗದಲ್ಲಿ ಸಾಮೂಹಿಕ ಪ್ರದರ್ಶನದ ಕೊರತೆ ಕಾಣುತ್ತಿದೆ. ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಉಳಿದ ವೇಗಿಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಬರುತ್ತಿಲ್ಲ. ಹೀಗಾಗಿ ವೇಗಿ ಮೊಹಮ್ಮದ್ ಶಮಿ ಅವರನ್ನು ಸರಣಿಯಲ್ಲಿ ಸೇರಿಸಿಕೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.
ಟೆಸ್ಟ್ ಸರಣಿಯ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ವೇಗಿ ಮೊಹಮ್ಮದ್ ಶಮಿಯ ಲಭ್ಯತೆ ಬಗ್ಗೆ ಪ್ರತಿಕ್ರಿಯಿಸಿದ ನಾಯಕ ರೋಹಿತ್ ಶರ್ಮಾ, ವೇಗಿ ಶಮಿ 100 ಅಲ್ಲ, ಶೇ.200ರಷ್ಟು ಸಂಪೂರ್ಣ ಗುಣಮುಖರಾದರಷ್ಟೇ ಅವರನ್ನು ತಂಡದಲ್ಲಿ ಆಡಿಸುತ್ತೇವೆ. ಶಮಿ ದೇಶೀಯ ಕೆಲವು ಪಂದ್ಯಗಳನ್ನು ಆಡುತ್ತಿದ್ದಾರೆ ಎನ್ನುವುದು ನಮಗೆ ಅರ್ಥವಾಗಿದೆ. ಆದರೆ ಎನ್ಸಿಎ ಅಧಿಕಾರಿಗಳು ಶಮಿ ಸಂಪೂರ್ಣ ಫಿಟ್ ಆಗಿರುವ ಬಗ್ಗೆ ಮಾಹಿತಿ ನೀಡಿದರಷ್ಟೇ ಅವರನ್ನು ಆಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಪಾದದ ಗಾಯಕ್ಕೀಡಾಗಿದ್ದ ಶಮಿ, ದೀರ್ಘಕಾಲದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಕೊನೆಯದಾಗಿ ಶಮಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಬಂಗಾಳ ಪರ ಅವರು ಒಂದು ರಣಜಿ ಟ್ರೋಫಿ ಪಂದ್ಯ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದ್ದಾರೆ. ಮುಂದಿನ ವಿಜಯ್ ಹಜಾರೆ ಟ್ರೋಫಿಗೂ ಶಮಿ ಅಯ್ಕೆಯಾಗಿದ್ದಾರೆ.