Advertisement

ನಕಲಿ ಎಟಿಎಂ ಕಾರ್ಡ್‌ ಸೃಷ್ಟಿಸಿ ಲಕ್ಷಾಂತರ ರೂ. ಲೂಟಿ

10:35 AM Sep 06, 2018 | |

ಬೆಂಗಳೂರು: ಗ್ರಾಹಕರ ಎಟಿಎಂ ಕಾರ್ಡ್‌ ಗಳ ಮಾಹಿತಿ ಕದ್ದು ನಕಲಿ ಎಟಿಎಂ ಕಾರ್ಡ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಹಣ ದೋಚುತ್ತಿದ್ದ ಇಬ್ಬರು ಉಗಾಂಡ ಪ್ರಜೆಗಳು ಕೊತ್ತನೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಕೊತ್ತನೂರಿನಲ್ಲಿ ವಾಸವಿರುವ, ಉಗಾಂಡ ಮೂಲದ ಬಾಬ್ಲಾನಡಾ ಅಮುನೊನ್‌ ಹಾಗೂ ಎಂ.ಎಸ್‌.ಪಾಳ್ಯ
ನಿವಾಸಿ ಒಂಜಿಡೊ ಅಂಬ್ರಾಸೆ ಬಂಧಿತರು. ಮರಿಯಾ ಎಂಬಾಕೆ ತಲೆಮರೆಸಿಕೊಂಡಿದ್ದು, ಹುಟುಕಾಟ ನಡೆಯುತ್ತಿದೆ.

ಬಂಧಿತರಿಂದ ಎರಡು ಲ್ಯಾಪ್‌ಟಾಪ್‌ಗಳು, ಎಟಿಎಂ ಕಾರ್ಡ್‌ ಡೇಟಾವನ್ನು ನಕಲಿ ಎಟಿಎಂ ಕಾರ್ಡ್‌ಗೆ ರವಾನಿಸುವ
ಯಂತ್ರಗಳು, ನಾಲ್ಕು ಎಟಿಎಂ ಕಾರ್ಡ್‌ ಸ್ಕಿಮ್ಮರ್‌ ಪ್ಲೇಟ್‌ಗಳು, ಎರಡು ಚಿಪ್‌, ಮೈಕ್ರೋ ಕ್ಯಾಮೆರಾ ಪ್ಲೇಟ್‌ ಮತ್ತು
ಬ್ಯಾಟರಿಗಳು, ಎಂಟಿಎಸ್‌ ಮತ್ತು ಏರ್‌ಟೆಲ್‌ ಕಂಪನಿಯ ಇಂಟರ್‌ನೆಟ್‌ ಡಾಂಗಲ್‌ಗ‌ಳು, 9 ಮೊಬೈಲ್‌ಗ‌ಳು, ಪಿನ್‌
ನಂಬರ್‌ ಹೊಂದಿರುವ 20 ಎಟಿಎಂ ಕಾರ್ಡ್‌ಗಳು ಮತ್ತು 60 ಕಾಲಿ ಕಾರ್ಡ್‌, ಬಿಳಿ ಬಣ್ಣದ 100 ಎಟಿಎಂ ಕಾರ್ಡ್‌ಗಳ ಬಂಡಲ್‌, 60 ಸಾವಿರ ನಗದು, ಒಂದು ಬೈಕ್‌ ವಶಕ್ಕೆ ಪಡೆಯಲಾಗಿದೆ. 

ಆರೋಪಿಗಳು ನಗರದ ಕೊತ್ತನೂರು, ಹೆಗಡೆನಗರ, ಎಂ.ಎಸ್‌.ಪಾಳ್ಯ, ಕೊತ್ತನೂರು ಮುಖ್ಯರಸ್ತೆ, ಗೆದ್ದಲಹಳ್ಳಿ ಮತ್ತು ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಇತರೆಡೆ ಎಟಿಎಂ ಕೇಂದ್ರಗಳಲ್ಲಿರುವ ಯಂತ್ರಗಳಲ್ಲಿ ಸ್ಕಿಮ್ಮರ್‌ ಮತ್ತು ಎಟಿಎಂ ಪಿನ್‌ ಕಾರ್ಡ್‌ರೀಡ್‌ ಮಾಡುವ ಚಿಪ್‌ ಗಳನ್ನು ಹೊಂದಿರುವ ಮೈಕ್ರೋ ಕ್ಯಾಮೆರಾ ಪ್ಲೇಟ್‌ಗಳನ್ನು ಅಳವಡಿಸುತ್ತಿದ್ದರು. ಈ ಮೂಲಕ ಗ್ರಾಹಕರ ಕಾರ್ಡ್‌ಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ ತಮ್ಮ ಲ್ಯಾಪ್‌ಟಾಪ್‌ಗೆ ರವಾನಿಸಿಕೊಳ್ಳುತ್ತಿದ್ದರು.

ಬಳಿಕ ಲ್ಯಾಪ್‌ಟಾಪ್‌ನ ಸಾಫ್ಟ್ವೇರ್‌ ಮೂಲಕ ಡೇಟಾವನ್ನು ನಕಲಿ ಎಟಿಎಂ ಕಾರ್ಡ್‌ಗೆ ತುಂಬಿ, ಎಟಿಎಂ ಕೇಂದ್ರಗಳಲ್ಲಿ
ಗ್ರಾಹಕರ ಹಣ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದರು. ಆ.28ರಂದು ಸಂಜೆ 5 ಗಂಟೆ ಸುಮಾರಿಗೆ ಕೊತ್ತನೂರು ಬಳಿಯ ಹೆಗಡೆ ನಗರ ವೃತ್ತದ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದ ಒಳಗಡೆ ಆರೋಪಿಗಳು ಎಟಿಎಂ ಯಂತ್ರವನ್ನು ಬಿಚ್ಚಿ ಎಲೆಕ್ಟ್ರಾನಿಕ್‌ ವಸ್ತು ಅಳವಡಿಸುತ್ತಿದ್ದರು. ಇದನ್ನು ಗಮನಿಸಿದ ಗಸ್ತಿನಲ್ಲಿದ್ದ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

Advertisement

ಒಂದು ವರ್ಷದಿಂದ ಕೃತ್ಯ: ಆರೋಪಿಗಳ ಪೈಕಿ ಬಾಬ್ಲಾನಡಾ ಅಮುನೊನ್‌ 2014ರಲ್ಲಿ ಶೈಕ್ಷಣಿಕ ವೀಸಾದಡಿ ಬೆಂಗಳೂರಿಗೆ ಬಂದಿದ್ದು, ನಗರದ ಖಾಸಗಿ ಕಾಲೇಜಿನಲ್ಲಿ 4ನೇ ವರ್ಷದ ಫಾರ್ಮಸಿ ವಿದ್ಯಾರ್ಥಿ. ಒಂಜಿಡೊ ಅಂಬ್ರಾಸೆ 2015ರಲ್ಲಿ ಶೈಕ್ಷಣಿಕ ವೀಸಾದಡಿ ಬಂದಿದ್ದು, ಬಿಸಿಎ ಓದುತ್ತಿದ್ದಾನೆ. ಈ ಮಧ್ಯೆ ಕಮ್ಮನಹಳ್ಳಿಯ ಕ್ಲಬ್‌ ಒಂದರಲ್ಲಿ ಆರೋಪಿ ಬಾಬ್ಲಾನಡಾ ಅಮುನೊನ್‌ಗೆ ಉಗಾಂಡದ ಮರಿಯಾ ಪರಿಚಯವಾಗಿದೆ. ಈಕೆ ಮೂಲಕ ಆರೋಪಿ ಒಂಜಿಡೊ ಅಂಬ್ರಾಸೆಯನ್ನು ಬಾಬ್ಲಾನಡಾ ಪರಿಚಯಿಸಿಕೊಂಡಿದ್ದ.

ಮಾಹಿತಿ ಕಳವು ಹೇಗೆ?: ಎಟಿಎಂ ಯಂತ್ರದಲ್ಲಿ ಕಾರ್ಡ್‌ ಹಾಕುವ ಜಾಗಕ್ಕೆ ಸ್ಕಿಮ್ಮರ್‌ಗಳು ಹಾಗೂ ಪಿನ್‌ ಕಾರ್ಡ್‌ರೀಡ್‌
ಮತ್ತು ಮೈಕ್ರೋ ಕ್ಯಾಮೆರಾ ಅಳವಡಿಸುತ್ತಿದ್ದರು. ಎರಡು ದಿನಗಳ ಬಳಿಕ ಮತ್ತೆ ಅದೇ ಎಟಿಎಂ ಕೇಂದ್ರಗಳಿಗೆ ಹೋಗಿ ಉಪಕರಣ ಕೊಂಡೊಯ್ಯುತ್ತಿದ್ದರು. ನಂತರ ತಮ್ಮ ಲ್ಯಾಪ್‌ಟಾಪ್‌ಗ್ಳಿಗೆ ಸಂಪರ್ಕಿಸಿ, ಸಾಪ್ಟ್ವೇ ರ್‌ ಮೂಲಕ ಖಾಲಿ ಎಟಿಎಂ ಕಾರ್ಡ್‌ ಗಳಿಗೆ ಮಾಹಿತಿ ತುಂಬಿ, ಹಣ ದೋಚುತ್ತಿದ್ದರು. ಕಡಿಮೆ ಹಣ ಕದ್ದರೆ ಗ್ರಾಹಕರು, ಬ್ಯಾಂಕ್‌ ಅಧಿಕಾರಿಗಳು ಪೊಲೀಸರಿಗೆ ದೂರು ನೀಡುವುದಿಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಪ್ರತಿ ಕಾರ್ಡ್‌ನಿಂದ ಕೇವಲ 5-10 ಸಾವಿರ ರೂ. ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 
ಆನ್‌ಲೈನ್‌ನಲ್ಲಿ ಸಾಮಗ್ರಿ ಖರೀದಿ ಆರೋಪಿಗಳು ತಮಗೆ ಬೇಕಾದ ಎಟಿಎಂ ಕಾರ್ಡ್‌ಗಳು ಮತ್ತು ಸ್ಕಿಮ್ಮರ್‌, ಕಾರ್ಡ್‌ರೀಡ್‌ ಹಾಗೂ ಇತರೆ ವಸ್ತುಗಳನ್ನು “ಇಂಡಿಯಾ ಮಾರ್ಟ್‌’ ಎಂಬ ಇ-ಕಾಮರ್ಸ್‌ ವೆಬ್‌ಸೈಟ್‌ ಮೂಲಕ ಖರೀದಿಸುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

25 ಲಕ್ಷಕ್ಕೂಹೆಚ್ಚು ವಂಚನೆ ಬೆಂಗಳೂರು ಮಾತ್ರವಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಇತರೆಡೆಯ ಎಟಿಎಂ ಕೇಂದ್ರಗಳಲ್ಲಿ 25 ಲಕ್ಷ ರೂ.ಗಿಂತಲೂ ಅಧಿಕ ಹಣವಂಚಿಸಿರುವುದು ತಿಳಿದು ಬಂದಿದೆ. ಆರೋಪಿಗಳ ಬಂಧನದ ಸುಮಾರು 20ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next